ADVERTISEMENT

ಕಾಮನ್‌ವೆಲ್ತ್ ರಾಷ್ಟ್ರಗಳ ಮಕ್ಕಳಿಗೆ ದ್ರಾವಿಡ್ ಪಾಠ

ಎನ್‌ಸಿಎನಲ್ಲಿ 16 ದೇಶಗಳ ಮಕ್ಕಳಿಗೆ ವಿಶೇಷ ಕ್ರಿಕೆಟ್‌ ತರಬೇತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:17 IST
Last Updated 17 ಅಕ್ಟೋಬರ್ 2019, 20:17 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿರುವ ವಿಶೇಷ ತರಬೇತಿ ಶಿಬಿರಕ್ಕೆ ಆಗಮಿಸಿರುವ 16 ರಾಷ್ಟ್ರಗಳ ಬಾಲಕ ಮತ್ತು ಬಾಲಕಿಯರು   –ಬಿಸಿಸಿಐ ಚಿತ್ರ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿರುವ ವಿಶೇಷ ತರಬೇತಿ ಶಿಬಿರಕ್ಕೆ ಆಗಮಿಸಿರುವ 16 ರಾಷ್ಟ್ರಗಳ ಬಾಲಕ ಮತ್ತು ಬಾಲಕಿಯರು   –ಬಿಸಿಸಿಐ ಚಿತ್ರ   

ಬೆಂಗಳೂರು/ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಮಕ್ಕಳಿಗೆ ಕ್ರಿಕೆಟ್‌ ತರಬೇತಿ ನಡೆಯಲಿದೆ. ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು ಈ ವಿಶೇಷ ಶಿಬಿರದ ಮೇಲ್ವಿಚಾರಣೆ ನಡೆಸಲಿದ್ದಾರೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಕ್ರೀಡಾ ಸಚಿವಾಲಯ ಮತ್ತು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಒಟ್ಟು 16 ರಾಷ್ಟ್ರಗಳ ಆಟಗಾರರು ಬೆಂಗಳೂರಿನ ಎನ್‌ಸಿಎನಲ್ಲಿ ಅಕ್ಟೋಬರ್ 30ರವರೆಗೆ ತರಬೇತಿ ಪಡೆಯುವರು.

2018ರ ಏಪ್ರಿಲ್ 19ರಂದು ಇಂಗ್ಲೆಂಡ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ‘ಕಾಮನ್‌ವೆಲ್ತ್‌ ದೇಶಗಳ 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಭಾರತದಲ್ಲಿ ಶ್ರೇಷ್ಠ ಕ್ರಿಕೆಟಿಗರ ಮೂಲಕ ತರಬೇತಿ ನೀಡುವ ವ್ಯವಸ್ಥೆ ಮಾಡಲಿದೆ ಎಂದು ಹೇಳಿದ್ದರು. ಅದರಂಗವಾಗಿ ಈಗ ಈ ಕಾರ್ಯಕ್ರಮ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೋಸ್ವಾನಾ, ಕ್ಯಾಮರೂನ್, ಕೆನ್ಯಾ, ಮೊಜಾಂಬಿಕ್, ಮಾರಿಷಸ್, ನಮಿಬಿಯಾ, ನೈಜಿರಿಯಾ, ರವಾಂಡಾ, ಉಗಾಂಡ, ಜಾಂಬಿಯಾ, ಮಲೇಷ್ಯಾ, ಸಿಂಗಪುರ, ಜಮೈಕಾ, ಟ್ರಿನಿಡಾಡ್, ಟೊಬ್ಯಾಗೊ, ಫಿಜಿ ಮತ್ತು ತಾಂಜಾನಿಯಾಗಳಿಂದ ಒಟ್ಟು 18 ಬಾಲಕರು ಮತ್ತು 17 ಬಾಲಕಿಯರು ಪಾಲ್ಗೊಳ್ಳುತ್ತಿದ್ದಾರೆ.

‘ಈ ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ವಿಶೇಷ ತರಬೇತಿ ಯೋಜಿಸಲಾಗಿದೆ. ನುರಿತ ಕೋಚ್‌ಗಳು ಮಾರ್ಗದರ್ಶನ ನೀಡುವರು. ಆಯಾ ಅಭ್ಯರ್ಥಿಯ ಸಾಮರ್ಥ್ಯ ಮತ್ತು ಪ್ರತಿಭೆಗೆ ತಕ್ಕಂತೆ ತರಬೇತಿಯನ್ನು ವಿನ್ಯಾಸಗೊಳಿಸಲಾಗಿದೆ‌’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಬೇರೆ ಬೇರೆ ದೇಶಗಳ ವಿಭಿನ್ನ ಹಿನ್ನೆಲೆ ಮತ್ತು ಸಾಂಸ್ಕೃತಿಕ ನೆಲೆಗಳಿಂದ ಮಕ್ಕಳು ಬರುತ್ತಿದ್ದಾರೆ. ಆದ್ದರಿಂದ ಭಾಷೆ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನೂ ಸಮತೋಲನ ಮಾಡಿಕೊಂಡು ತರಬೇತಿ ನೀಡುವ ಸವಾಲು ಇದೆ. ಆದರೆ ಇವರೆಲ್ಲರನ್ನು ಕ್ರಿಕೆಟ್‌ ಪ್ರೀತಿಯು ಒಂದೇ ಸೂರಿನಡಿ ತರುತ್ತಿರುವುದು ವಿಶೇಷ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಭಾಗವಹಿಸುವವರಿಗೆ ವಸತಿ, ಕ್ರಿಕೆಟ್ ಕಿಟ್‌ಗಳು, ಆರೋಗ್ಯ ಮತ್ತು ಫಿಟ್‌ನೆಸ್‌ ನಿರ್ವಹಣೆ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿವಿಧ ಕ್ಲಬ್‌ ಮತ್ತಿತರರ ತಾಣಗಳ ಭೇಟಿಯೂ ಇದರಲ್ಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.