ADVERTISEMENT

ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌: ರತನ್‌ ಕೈಚಳಕ; ಗೆಲುವಿನತ್ತ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 16:29 IST
Last Updated 11 ಡಿಸೆಂಬರ್ 2025, 16:29 IST
ಕರ್ನಾಟಕ ತಂಡದ ನಾಯಕ ಅನ್ವಯ್‌ ದ್ರಾವಿಡ್‌
ಕರ್ನಾಟಕ ತಂಡದ ನಾಯಕ ಅನ್ವಯ್‌ ದ್ರಾವಿಡ್‌   

ಬೆಂಗಳೂರು: ಎಡಗೈ ಸ್ಪಿನ್ನರ್‌ ರತನ್‌ ಬಿ.ಆರ್‌. (46ಕ್ಕೆ 4) ಅವರ ಕೈಚೆಳಕದ ನೆರವಿನಿಂದ ಕರ್ನಾಟಕ ತಂಡವು ಕೂಚ್‌ ಬಿಹಾರ್‌ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಒಡಿಶಾ ವಿರುದ್ಧ ಗೆಲುವಿನತ್ತ ಹೆಜ್ಜೆಯಿಟ್ಟಿದೆ. 

ಒಡಿಶಾದ ಬಲಾಂಗಿರ್‌ನಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 299 ರನ್‌ಗಳ ಹಿನ್ನಡೆ ಅನುಭವಿಸಿದ್ದ ಆತಿಥೇಯ ತಂಡವು ಎರಡನೇ ಇನಿಂಗ್ಸ್‌ನಲ್ಲಿ ರತನ್‌ ಸ್ಪಿನ್‌ ದಾಳಿಗೆ ಕುಸಿದಿದೆ. ‌ಮೂರನೇ ದಿನದಾಟದ ಮುಕ್ತಾಯಕ್ಕೆ 63 ಓವರ್‌ಗಳಲ್ಲಿ 7 ವಿಕೆಟ್‌ಗೆ 211 ರನ್‌ ಗಳಿಸಿದೆ. ಕೊನೆಯ ದಿನದ ಆಟ ಬಾಕಿ ಉಳಿದಿದ್ದು, ಇನಿಂಗ್ಸ್‌ ಸೋಲು ತಪ್ಪಿಸಲು ಇನ್ನೂ 88 ರನ್‌ ಬೇಕಿದೆ.

ಒಡಿಶಾದ ಸ್ವಾಗತ್ ಸೌರವ್ ಮಿಶ್ರಾ (50;54ಎ) ಅರ್ಧಶತಕ ದಾಖಲಿಸಿ ಕೊಂಚ ಹೋರಾಟ ತೋರಿದರು. ಸಂಬಿತ್ ಕೆ. ಬೇಜಾ 38 ರನ್‌, ಅಭಿರೂಪ್ ದಾಸ್ 28 ರನ್‌ ಗಳಿಸಿದ್ದಾರೆ. ಅರ್ಪಿತ್ ಮೊಹಾಂತಿ ಔಟಾಗದೇ 29 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ADVERTISEMENT

ಎರಡನೇ ದಿನದಾಟದಲ್ಲಿ ಮಣಿಕಾಂತ್‌ ಶಿವಾನಂದ ಅವರ ದ್ವಿಶತಕ (227) ಹಾಗೂ ಧ್ರುವ್‌ ಕೃಷ್ಣನ್‌ (105) ಅವರ ಶತಕದ ನೆರವಿನಿಂದ 3 ವಿಕೆಟ್‌ಗಳಿಗೆ 412 ರನ್‌ ಗಳಿಸಿದ್ದ ಕರ್ನಾಟಕ ತಂಡವು 8 ವಿಕೆಟ್‌ಗೆ 469 ರನ್‌ ಸೇರಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಹಿಂದಿನ ದಿನ 62 ರನ್‌ ಗಳಿಸಿ ಅಜೇಯವಾಗಿದ್ದ  ನಾಯಕ ಅನ್ವಯ್‌ ದ್ರಾವಿಡ್‌ 82 ರನ್‌ (148ಎ) ಶತಕದ ಅವಕಾಶವನ್ನು ತಪ್ಪಿಸಿಕೊಂಡರು. ಒಡಿಶಾದ ಪ್ರಿಯಾಂಶು ಮೊಹಾಂತಿ ಮತ್ತು ಸೈಯದ್ ತುಫೈಲ್ ಅಹ್ಮದ್ ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌

ಮೊದಲ ಇನಿಂಗ್ಸ್‌

ಒಡಿಶಾ: 58.4 ಓವರ್‌ಗಳಲ್ಲಿ 170; ಕರ್ನಾಟಕ: 126.4 ಓವರ್‌ಗಳಲ್ಲಿ 8 ವಿಕೆಟ್‌ಗೆ 469 (ಅನ್ವಯ್‌ ದ್ರಾವಿಡ್‌ 82; ರಿಯಾಂಶು ಮೊಹಾಂತಿ 87ಕ್ಕೆ 4, ಸೈಯದ್ ತುಫೈಲ್ ಅಹ್ಮದ್ 111ಕ್ಕೆ 3).

ಎರಡನೇ ಇನಿಂಗ್ಸ್‌

ಒಡಿಶಾ: 63 ಓವರ್‌ಗಳಲ್ಲಿ 7 ವಿಕೆಟ್‌ಗೆ 211 (ಅಭಿರೂಪ್ ದಾಸ್ 28, ಸ್ವಾಗತ್ ಸೌರವ್ ಮಿಶ್ರಾ 50, ಸಂಬಿತ್ ಕೆ. ಬೇಜಾ 38, ಅರ್ಪಿತ್‌ ಮೊಹಾಂತಿ ಔಟಾಗದೇ 29, ಸೈಯದ್ ತುಫೈಲ್ ಅಹ್ಮದ್ 26; ರತನ್‌ ಬಿ.ಆರ್. 46ಕ್ಕೆ 4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.