ADVERTISEMENT

ಕೂಚ್‌ ಬಿಹಾರಿ ಟ್ರೋಫಿ| ರೋಹಿತ್‌ ಶತಕ: ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶಿಸಿದ ದಾವಣಗೆರೆಯ ಹುಡುಗ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 14:18 IST
Last Updated 17 ನವೆಂಬರ್ 2025, 14:18 IST
ರೋಹಿತ್‌ ಎ.ಎ.
ರೋಹಿತ್‌ ಎ.ಎ.   

ಬೆಂಗಳೂರು: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರೋಹಿತ್‌ ಎ.ಎ (101; 204ಎ, 11ಬೌಂ) ಬಾರಿಸಿದ ಶತಕದ ನೆರವಿನಿಂದ ಕರ್ನಾಟಕ ತಂಡ 19 ವರ್ಷದೊಳಗಿನವರ ಕೂಚ್‌ ಬಿಹಾರಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಗಳಿಸಿದೆ.

ಇಲ್ಲಿನ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯರು 90 ಓವರ್‌ಗಳಲ್ಲಿ 235 ರನ್‌ ಕಲೆಹಾಕಿದರು. ಉತ್ತರಾಖಂಡ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ ಭಾನುವಾರ 81.2 ಓವರ್‌ಗಳಲ್ಲಿ 202 ರನ್‌ಗಳನ್ನು ಗಳಿಸಿತ್ತು.

ಮೊದಲ ದಿನದಾಟದ ಅಂತ್ಯಕ್ಕೆ 16 ರನ್‌ ಗಳಿಸಿ 1 ವಿಕೆಟ್‌ ಕಳೆದುಕೊಂಡಿದ್ದ ರಾಜ್ಯ ತಂಡ, ಸೋಮವಾರದ ಮೊದಲ ಅವಧಿಯಲ್ಲಿ ಬೇಗನೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 37 ರನ್‌ ಆಗುವಷ್ಟರಲ್ಲಿ ಆದೇಶ್‌ ಡಿ.ಅರಸ್‌ (7) ಮತ್ತು ಧ್ರುವ್‌ ಕೃಷ್ಣನ್ (5) ಪೆವಿಲಿಯನ್‌ ಸೇರಿದರು.  

ADVERTISEMENT

ಈ ಹಂತದಲ್ಲಿ ವೈಭವ್‌ ಶರ್ಮಾ (45; 107ಎ, 4ಬೌಂ) ಹಾಗೂ ನಾಯಕ ಮಣಿಕಂಠ ಶಿವಾನಂದ್‌ (24; 45 ಎ, 1ಬೌಂ) ತಂಡಕ್ಕೆ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ 68 ರನ್‌ಗಳನ್ನು ಸೇರಿಸಿದರು. 31ನೇ ಓವರ್‌ನ ಮೊದಲ ಎಸೆತದಲ್ಲಿ ಮಣಿಕಂಠ ಔಟಾದರು. ಆಗ ಮೈದಾನಕ್ಕಿಳಿದ ದಾವಣಗೆರೆಯ ರೋಹಿತ್‌ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು.

ಒಂದು ಹಂತದಲ್ಲಿ ರಾಜ್ಯ ತಂಡ 194 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡು ಇನಿಂಗ್ಸ್‌ ಹಿನ್ನಡೆಯ ಭೀತಿ ಎದುರಿಸಿತ್ತು. ಈ ಹಂತದಲ್ಲಿ ರೋಹಿತ್‌ ಕೆಚ್ಚೆದೆಯ ಆಟ ಆಡಿದರು. ‘ಬಾಲಂಗೋಚಿ’ ರತನ್‌ ಬಿ.ಆರ್‌ (ಔಟಾಗದೆ 3; 17 ಎ) ಜೊತೆ 10ನೇ ವಿಕೆಟ್‌ಗೆ 41 ರನ್‌ ಸೇರಿಸಿ ಆತಿಥೇಯರ ಆತಂಕ ದೂರ ಮಾಡಿದರು. 90ನೇ ಓವರ್‌ನ ಕೊನೆಯ ಎಸೆತದಲ್ಲಿ ರೋಹಿತ್‌ ರನ್‌ಔಟ್‌ ಆದರು. 

ಸಂಕ್ಷಿಪ್ತ ಸ್ಕೋರ್‌:

ಉತ್ತರಾಖಂಡ;

ಮೊದಲ ಇನಿಂಗ್ಸ್‌: 81.2 ಓವರ್‌ಗಳಲ್ಲಿ 202.

ಎರಡನೇ ಇನಿಂಗ್ಸ್‌: 1 ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 0.

ಕರ್ನಾಟಕ;

ಪ್ರಥಮ ಇನಿಂಗ್ಸ್‌: 90 ಓವರ್‌ಗಳಲ್ಲಿ 235 (ವೈಭವ್‌ ಶರ್ಮಾ 45, ಮಣಿಕಂಠ ಶಿವಾನಂದ್‌ 24, ರೋಹಿತ್‌ ಎ.ಎ. 101, ರೆಹಾನ್‌ ಮೊಹಮ್ಮದ್‌ 11; ಪ್ರಿಯಾಂಶು ಸಿಂಗ್‌ 44ಕ್ಕೆ3, ಚೇತನ್‌ ಸಿಂಗ್‌ 56ಕ್ಕೆ2, ಆಕಾಶ್‌ ಕುಮಾರ್‌ 55ಕ್ಕೆ2, ನಿಶು ಪಟೇಲ್ 28ಕ್ಕೆ2). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.