ADVERTISEMENT

ಕೊರೊನಾ ಸೋಂಕು ಹಿನ್ನೆಲೆ: ಇಂಗ್ಲೆಂಡ್‌ ಪ್ರವಾಸಕ್ಕೆ ಆಮಿರ್‌, ಸೋಹೈಲ್‌‌ ಇಲ್ಲ

ಏಜೆನ್ಸೀಸ್
Published 12 ಜೂನ್ 2020, 5:44 IST
Last Updated 12 ಜೂನ್ 2020, 5:44 IST
ಮೊಹಮ್ಮದ್‌ ಆಮಿರ್‌ (ಎಡ) ಹಾಗೂ ಹ್ಯಾರೀಸ್‌ ಸೋಹೈಲ್‌– ರಾಯಿಟರ್ಸ್ ಚಿತ್ರ
ಮೊಹಮ್ಮದ್‌ ಆಮಿರ್‌ (ಎಡ) ಹಾಗೂ ಹ್ಯಾರೀಸ್‌ ಸೋಹೈಲ್‌– ರಾಯಿಟರ್ಸ್ ಚಿತ್ರ   

ಲಾಹೋರ್‌: ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಹ್ಯಾರಿಸ್‌ ಸೊಹೇಲ್‌ ಅವರು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳುವ ಪಾಕ್‌ ತಂಡದಿಂದ ಹಿಂದೆ ಸರಿದ ಮೊದಲ ಆಟಗಾರ ಎನಿಸಿದ್ದಾರೆ. ಕೊರೊನಾ ಸೋಂಕು ಆತಂಕದ ಕಾರಣ ನೀಡಿ ಅವರು ಹಿಂದೆ ಸರಿದಿದ್ದಾರೆ.

ಪ್ರಮುಖ ವೇಗದ ಬೌಲರ್‌ ಮೊಹಮ್ಮದ್‌ ಆಮಿರ್‌‌ ಕೂಡ ವೈಯಕ್ತಿಕ ಕಾರಣ ನೀಡಿ ಹಿಂದೆಸರಿದಿದ್ದಾರೆ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ವಕ್ತಾರರು ತಿಳಿಸಿದ್ದಾರೆ. ಆಮಿರ್‌ ಅವರ ಪತ್ನಿ ಆಗಸ್ಟ್‌ನಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಆಮಿರ್‌ ಟೆಸ್ಟ್‌ ಕ್ರಿಕೆಟ್‌ನಿಂದ ಕಳೆದ ವರ್ಷ ನಿವೃತ್ತಿ ಘೋಷಿಸಿದ್ದು, ಟ್ವೆಂಟಿ–20 ಸರಣಿಯಲ್ಲಿ ಆಡಬೇಕಿತ್ತು.

ADVERTISEMENT

ಪಾಕಿಸ್ತಾನ ತಂಡವು ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ ಎದುರು ನಡೆಯಲಿರುವ ತಲಾ ಮೂರು ಪಂದ್ಯಗಳ ಟೆಸ್ಟ್‌ ಹಾಗೂ ಟ್ವೆಂಟಿ–20 ಸರಣಿ ಆಡಲಿದ್ದು, 28 ಆಟಗಾರರು ಹಾಗೂ 14 ನೆರವು ಸಿಬ್ಬಂದಿಯನ್ನು ಕಳುಹಿಸಲಿದೆ.

ಕೋವಿಡ್‌–19 ಪಿಡುಗಿನ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ಕಾರಣ ಪಾಕ್‌ ತಂಡವು ತನ್ನ ತರಬೇತಿ ಶಿಬಿರವನ್ನು ರದ್ದುಗೊಳಿಸಿತ್ತು.

ವೆಸ್ಟ್ ಇಂಡೀಸ್‌ ತಂಡದ ಮೂವರು ಆಟಗಾರರಾದ ಡ್ಯಾರೆನ್‌ ಬ್ರೇವೊ, ಶಿಮ್ರಾನ್‌ ಹೆಟ್ಮೇಯರ್‌ ಮತ್ತು ಕೀಮೊ ಪಾಲ್‌ ಅವರು ಇಂಗ್ಲೆಂಡ್‌ ಪ್ರವಾಸದಿಂದ ಹಿಂದೆ ಸರಿಯುವುದಾಗಿ ಕಳೆದ ತಿಂಗಳು ಪ್ರಕಟಿಸಿದ್ದರು. ವೆಸ್ಟ್‌ ಇಂಡೀಸ್‌ ಈಗಾಗಲೇ ಇಂಗ್ಲೆಂಡ್‌ ತಲುಪಿದ್ದು, ಜುಲೈ 8 ರಿಂದ ಸೌತಾಂಪ್ಟನ್‌ನಲ್ಲಿ ಮೊದಲ ಟೆಸ್ಟ್‌ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.