ADVERTISEMENT

ತಾಳ್ಮೆಯಿಂದ ಒತ್ತಡ ನಿಭಾಯಿಸಿದೆ: ಪೊಲಾರ್ಡ್‌

ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಮುಂಬೈ ಇಂಡಿಯನ್ಸ್‌ ಜಯಕ್ಕೆ ಕಾರಣರಾದ ವಿಂಡೀಸ್ ಆಟಗಾರ

ಪಿಟಿಐ
Published 11 ಏಪ್ರಿಲ್ 2019, 16:27 IST
Last Updated 11 ಏಪ್ರಿಲ್ 2019, 16:27 IST
ಕೀರನ್ ಪೊಲಾರ್ಡ್‌
ಕೀರನ್ ಪೊಲಾರ್ಡ್‌   

ಮುಂಬೈ: ಸೋಲಿನ ಸುಳಿಯಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮೇಲೆತ್ತಿ ಗೆಲುವಿನ ಕಾಣಿಕೆ ನೀಡಿದ ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್‌ ‘ತೀವ್ರ ಒತ್ತಡದ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿದ್ದೇ ನನಗೆ ನೆರವಾಯಿತು’ ಎಂದು ಹೇಳಿದ್ದಾರೆ.

ಬುಧವಾರ ರಾತ್ರಿ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಕಠಿಣ ಗುರಿ ಬೆನ್ನತ್ತಿದ ಆತಿಥೇಯರು ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್‌ ತಂಡ ಕೆ.ಎಲ್‌.ರಾಹುಲ್ ಅವರ ಶತಕ ಮತ್ತು ಕ್ರಿಸ್ ಗೇಲ್ ಅವರ ಅರ್ಧಶತಕಗಳ ಬಲದಿಂದ 197 ರನ್ ಕಲೆ ಹಾಕಿತ್ತು. ಇವರಿಬ್ಬರು ಮೊದಲ ವಿಕೆಟ್‌ಗೆ 116 ರನ್ ಸೇರಿಸಿದ್ದರು. ಮೊದಲ ವಿಕೆಟ್ ಪತನಗೊಂಡ ನಂತರ ಏಳು ಮಂದಿ ಬ್ಯಾಟ್ಸ್‌ಮನ್ ಒಂದಂಕಿ ಮೊತ್ತ ಗಳಿಸಿ ಔಟಾಗಿದ್ದರು.

ADVERTISEMENT

ಗುರಿ ಬೆನ್ನತ್ತಿದ ಮುಂಬೈ ತಂಡ ಸತತ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ಸೋಲಿನ ಭೀತಿ ಎದುರಿಸಿತ್ತು. ಈ ಸಂದರ್ಭದಲ್ಲಿ ಕೆಚ್ಚೆದೆಯಿಂದ ಬ್ಯಾಟಿಂಗ್ ಮಾಡಿದ ಪೊಲಾರ್ಡ್‌ 31 ಎಸೆತಗಳಲ್ಲಿ 83 ರನ್‌ ಗಳಿಸಿದ್ದರು. ಅವರ ಇನಿಂಗ್ಸ್‌ನಲ್ಲಿ 10 ಸಿಕ್ಸರ್‌ ಮತ್ತು ಮೂರು ಬೌಂಡರಿಗಳು ಇದ್ದವು.

267.74ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಔಟಾಗಿದ್ದರು. ನಂತರ ಪಂದ್ಯ ರೋಚಕವಾಯಿತು. ವೇಗಿ ಅಂಕಿತ್ ರಜಪೂತ್ ಅವರು ಅಲ್ಜಾರಿ ಜೋಸೆಫ್ ಮತ್ತು ರಾಹುಲ್ ಚಾಹರ್ ಅವರನ್ನು ಕಾಡಿದರು. ಕೊನೆಯ ಎಸೆತದಲ್ಲಿ ಗೆಲುವಿಗೆ ಎರಡು ರನ್‌ಗಳು ಬೇಕಾಗಿದ್ದಾಗ ಅಲ್ಜಾರಿ ಸ್ಟ್ರೇಟ್‌ ಡ್ರೈವ್ ಮಾಡಿ ಚೆಂಡನ್ನು ಲಾಂಗ್ ಆನ್‌ಗೆ ಅಟ್ಟಿದರು. ಎರಡು ರನ್‌ ಗಳಿಸಿ ಸಂಭ್ರಮಿಸಿದರು.

ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಪೊಲಾರ್ಡ್ ಮುನ್ನಡೆಸಿದ್ದರು. ‘ತಂಡವನ್ನು ಗೆಲುವಿನ ದಡ ಸೇರಿಸಬೇಕು ಎಂಬ ಅಚಲ ನಿರ್ಧಾರ ತೆಗೆದುಕೊಂಡಿದ್ದೆ. ಒತ್ತಡವಿದ್ದದ್ದು ನಿಜ, ಆದರೆ ಅದನ್ನು ಸಮರ್ಥವಾಗಿ ನಿಭಾಯಿಸಿದೆ. ಕೊನೆಯಲ್ಲಿ ಅಲ್ಜಾರಿ ಮತ್ತು ಚಾಹರ್‌ ಕೂಡ ಉತ್ತಮವಾಗಿ ಆಡಿದರು’ ಎಂದು ಪೊಲಾರ್ಡ್ ಹೇಳಿದರು.

‘ತಂಡದ ಆರಂಭ ಚೆನ್ನಾಗಿತ್ತು. ವಾಸ್ತವದಲ್ಲಿ ಪ್ರತಿ ಓವರ್‌ಗೆ ತಲಾ ಎಂಟು ರನ್‌ಗಳು ಬೇಕಾಗಿದ್ದವು. ಆದರೆ ತಂಡ ತಲಾ 10 ರನ್‌ ಗಳಿಸುತ್ತ ಸಾಗಿತ್ತು. ಸ್ಟಷ್ಟವಾದ ಗುರಿ ಇದ್ದ ಕಾರಣ ಇದು ಸಾಧ್ಯವಾಯಿತು. ವಿಕೆಟ್‌ಗಳು ಉರುಳಿದ ಕಾರಣ ಕೊನೆಯಲ್ಲಿ ಸ್ವಲ್ಪ ಕಷ್ಟವಾಯಿತು. ಆದರೂ ಗೆಲ್ಲಲು ಸಾಧ್ಯವಾದದ್ದು ಖುಷಿ ನೀಡಿದೆ’ ಎಂದು ಅವರು ನುಡಿದರು.

ಸಾಮಾನ್ಯವಾಗಿ ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಪೊಲಾರ್ಡ್‌ ಈ ಪಂದ್ಯದಲ್ಲಿ ಬಡ್ತಿ ಪಡೆದುಕೊಂಡು ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದರು. ‘48 ಎಸೆತಗಳಲ್ಲಿ 104 ರನ್‌ ಬೇಕಾಗಿದ್ದ ಸಂದರ್ಭದಲ್ಲಿ ರನ್‌ ಗಳಿಕೆಗೆ ವೇಗ ತುಂಬಲು ನಿರ್ಧರಿಸಿದೆವು. ಎರಡು ಓವರ್‌ಗಳಲ್ಲಿ ಉತ್ತಮವಾಗಿ ರನ್‌ಗಳು ಹರಿದು ಬಂದವು. ಹೀಗಾಗಿ ಗುರಿ ಮುಟ್ಟುವುದು ಸುಲಭವಾಯಿತು’ ಎಂದು ಪೊಲಾರ್ಡ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.