ಭಾರತದ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಬೌಲಿಂಗ್ ವೈಖರಿ
ಕೃಪೆ: @surreycricket
ಲಂಡನ್: ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ಗೆ ಸರ್ರೆ ತಂಡದ ಪರ ಪದಾರ್ಪಣೆ ಮಾಡಿರುವ ಭಾರತದ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಅವರು, ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ 166 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ.
ಸೌತಾಂಪ್ಟನ್‌ನ ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಅಮೋಘ ಬೌಲಿಂಗ್ ಮಾಡಿದ ರಾಹುಲ್, 118 ರನ್ ನೀಡಿ ಒಟ್ಟು 10 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಅವರ ಆಟದ ಬಲದಿಂದ ಸರ್ರೆ ತಂಡವು, ಹ್ಯಾಂಪ್‌ಶೈರ್ ವಿರುದ್ಧ 20 ರನ್ ಅಂತರದ ಜಯ ಸಾಧಿಸಿತು.
ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸರ್ರೆ, 147 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಹ್ಯಾಂಪ್‌ಶೈರ್ 248 ರನ್ ಕಲೆಹಾಕಿತ್ತು.
101 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಸರ್ರೆ, 281 ರನ್ ಗಳಿಸಿ 181 ರನ್‌ಗಳ ಗುರಿಯೊಡ್ಡಿತ್ತು. ಆದರೆ, ರಾಹುಲ್ ದಾಳಿಗೆ ನಲುಗಿದ ಹ್ಯಾಂಪ್‌ಶೈರ್, 160 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು.
ರಾಹುಲ್ ಸಾಧನೆ
ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 67 ರನ್‌ಗೆ ಎರಡು ವಿಕೆಟ್ ಪಡೆದಿದ್ದ ರಾಹುಲ್, ಎರಡನೇ ಇನಿಂಗ್ಸ್‌ನಲ್ಲಿ 51 ರನ್ ನೀಡಿ 8 ವಿಕೆಟ್ ಕಬಳಿಸಿದರು. ಇದರೊಂದಿಗೆ, ಪದಾರ್ಪಣೆ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಶ್ರೇಷ್ಠ ಸಾಧನೆ ಮಾಡಿದ ಖ್ಯಾತಿಗೆ ಭಾಜನರಾದರು. 1859ರಲ್ಲಿ ವಿಲಿಯನ್ ಎಂ. ಮಾರ್ಕ್ ಅವರು 61 ರನ್‌ಗೆ 7 ವಿಕೆಟ್ ಪಡೆದಿದ್ದರು. ಅದು ಈವರೆಗೆ ದಾಖಲೆಯಾಗಿತ್ತು.
ರಾಹುಲ್, ಪ್ರಥಮದರ್ಜೆ ಕ್ರಿಕೆಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ 8 ವಿಕೆಟ್ ಪಡೆದದ್ದು ಇದೇ ಮೊದಲು.
ಸುಂದರ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ
ಹ್ಯಾಂಪ್‌ಶೈರ್ ಪರ ಆಡಿದ ಭಾರತದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಮೊದಲ ಇನಿಂಗ್ಸ್‌ನಲ್ಲಿ 3.2 ಓವರ್‌ಗಳಲ್ಲೇ ಕೇವಲ 5 ರನ್‌ಗೆ ಮೂರು ವಿಕೆಟ್ ಪಡೆದರು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ 12 ಓವರ್ ಎಸೆದರೂ ವಿಕೆಟ್ ಪಡೆಯಲು ವಿಫಲರಾದರು. ಬ್ಯಾಟಿಂಗ್ ವೇಳೆ ಕ್ರಮವಾಗಿ 56 ರನ್ ಮತ್ತು 11 ರನ್ ಗಳಿಸಿದರು.
ವೆಸ್ಟ್ ಇಂಡೀಸ್ ವಿರುದ್ಧ ಅಕ್ಟೋಬರ್ 2 ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಸುಂದರ್ ಸ್ಥಾನ ಪಡೆದಿದ್ದಾರೆ.
ಭಾರತ ಪರ 13 ಟೆಸ್ಟ್, 23 ಏಕದಿನ ಹಾಗೂ 54 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸುಂದರ್, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉಪಯುಕ್ತ ಆಟವಾಡಿದ್ದಾರೆ.
ರಾಹುಲ್, ಟೀಂ ಇಂಡಿಯಾ ಪರ 2019ರಿಂದ 2021ರ ಅವಧಿಯಲ್ಲಿ ಒಂದು ಏಕದಿನ ಮತ್ತು ಆರು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.