ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್; ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಡಿಕೆಶಿ

ಸಿಎಂ, ಡಿಸಿಎಂ ಭೇಟಿಯಾದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 21:21 IST
Last Updated 10 ಡಿಸೆಂಬರ್ 2025, 21:21 IST
<div class="paragraphs"><p>ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರು ಬೆಳಗಾವಿಯ ಕ್ರಿಕೆಟ್‌ ಮೈದಾನವನ್ನು ಬುಧವಾರ ಪರಿಶೀಲಿಸಿದರು. ಅಸೋಸಿಯೇಷನ್‌ ಕಾರ್ಯದರ್ಶಿ ಸಂತೋಷ್ ಮೆನನ್,&nbsp;ಉಪಾಧ್ಯಕ್ಷ ಸುಜೀತ್ ಸೋಮಸುಂದರ್, ಪದಾಧಿಕಾರಿಗಳಾದ ವಿನಯ ಮೃತ್ಯುಂಜಯ, ಅವಿನಾಶ ಪೋತದಾರ ಜತೆಯಾದರು </p></div>

ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರು ಬೆಳಗಾವಿಯ ಕ್ರಿಕೆಟ್‌ ಮೈದಾನವನ್ನು ಬುಧವಾರ ಪರಿಶೀಲಿಸಿದರು. ಅಸೋಸಿಯೇಷನ್‌ ಕಾರ್ಯದರ್ಶಿ ಸಂತೋಷ್ ಮೆನನ್, ಉಪಾಧ್ಯಕ್ಷ ಸುಜೀತ್ ಸೋಮಸುಂದರ್, ಪದಾಧಿಕಾರಿಗಳಾದ ವಿನಯ ಮೃತ್ಯುಂಜಯ, ಅವಿನಾಶ ಪೋತದಾರ ಜತೆಯಾದರು

   

ಪ್ರಜಾವಾಣಿ ಚಿತ್ರ

ಬೆಳಗಾವಿ/ಹುಬ್ಬಳ್ಳಿ: ‘ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ  ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಉ‍ಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ADVERTISEMENT

ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಮನವಿಪತ್ರ ಸ್ವೀಕರಿಸಿ ಮಾತನಾಡಿದ ಅವರು, ‘ಕ್ರಿಕೆಟ್ ಪಂದ್ಯಗಳನ್ನು ನಿಲ್ಲಿಸಬೇಕು ಎಂಬ ಉದ್ದೇಶ ನಮಗಿಲ್ಲ. ಕ್ರಿಕೆಟ್‌ ಪ್ರೇಮಿಗಳ ಭಾವನೆಗಳಿಗೆ ಸ್ಪಂದಿಸುತ್ತೇವೆ. ಜನಜಂಗುಳಿ ನಿಯಂತ್ರಣ ಕ್ರಮಗಳ ಬಗ್ಗೆ ಯೋಚಿಸಬೇಕಿದೆ. ಜತೆಗೆ, ಮೈಕಲ್ ಡಿ ಕುನ್ಹಾ ಸಮಿತಿ ನೀಡಿದ ಸಲಹೆಗಳನ್ನು ಹಂತಹಂತವಾಗಿ ಪಾಲಿಸುವ ಆಲೋಚನೆಯಿದೆ’ ಎಂದರು.

‘ಐಪಿಎಲ್ ಸೇರಿ ಯಾವ ಕ್ರಿಕೆಟ್‌ ಪಂದ್ಯವನ್ನೂ ಬೆಂಗಳೂರಿನಿಂದ ಹೊರಹೋಗಲು ಬಿಡುವುದಿಲ್ಲ. ಒಗ್ಗೂಡಿ ‌ಕೆಲಸ ಮಾಡೋಣ ಎಂದು ವೆಂಕಟೇಶ್‌ ‍ಪ್ರಸಾದ್ ಅವರಿಗೆ ತಿಳಿಸಿದ್ದೇನೆ. ಹೊಸ ಕ್ರೀಡಾಂಗಣಗಳನ್ನು ನಿರ್ಮಿಸುವ ಉದ್ದೇಶವೂ ಸರ್ಕಾರದ ಮುಂದಿದೆ’ ಎಂದರು.

ಇದಕ್ಕೂ ಮುನ್ನ ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾಯಿತು. ನಂತರ ಬೆಳಗಾವಿ ಮತ್ತು ಹುಬ್ಬಳ್ಳಿಯ ಕ್ರೀಡಾಂಗಣಗಳಿಗೆ ಭೇಟಿ ನೀಡಿ, ಪರಿಶೀಲಿಸಿತು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ವೆಂಕಟೇಶ್ ಪ್ರಸಾದ್,‘ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ನಡೆದ ಅಹಿತಕರ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯ ನಡೆದಿಲ್ಲ. ಘಟನೆಯಲ್ಲಿ ಸಂಸ್ಥೆಯಿಂದ  ಯಾವುದೇ ತಪ್ಪಾಗಿಲ್ಲ‌ ಎಂಬುದನ್ನು ಮನವರಿಕೆ ಮಾಡಿದ್ದೇವೆ. ಅಂತರರಾಷ್ಟ್ರೀಯ ಪಂದ್ಯಗಳಿಗೂ ಅವಕಾಶ ಮಾಡಿಕೊಡುವಂತೆ ಕೋರಿದ್ದೇವೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ’ ಎಂದರು.

‘ಹುಬ್ಬಳ್ಳಿ, ಬೆಳಗಾವಿಯಲ್ಲಿ ಅಪೂರ್ಣಗೊಂಡಿರುವ ‘ಕ್ರೀಡಾ ಕೇಂದ್ರ’ (ಕ್ಲಬ್‌ಹೌಸ್‌) ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಒಂದು ತಿಂಗಳಲ್ಲಿ ವರದಿ ನೀಡುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು. 

ಕೆಎಸ್‌ಸಿಎ ಉಪಾಧ್ಯಕ್ಷ ಸುಜಿತ್‌ ಸೋಮಸುಂದರ್, ಕಾರ್ಯದರ್ಶಿ ಸಂತೋಷ್ ಮೆನನ್‌, ಕೆಎಸ್‌ಸಿಎ ವಕ್ತಾರ ವಿನಯ ಮೃತ್ಯುಂಜಯ, ಅವಿನಾಶ ಪೋತದಾರ ಇದ್ದರು.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ (ಕೆಎಸ್‌ಸಿಎ) ವೆಂಕಟೇಶ್‌ ಪ್ರಸಾದ್ ಅವರು ಹುಬ್ಬಳ್ಳಿಯ ರಾಜನಗರದ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಬೆಳಗಾವಿ ಕ್ರೀಡಾಂಗಣಕ್ಕೆ ಮೂಲಸೌಲಭ್ಯ ಒದಗಿಸುತ್ತೇವೆ.‌ ಕ್ರಿಕೆಟ್ ಅಭಿವೃದ್ಧಿಗಾಗಿ ಮುಂದಾಲೋಚನೆ ಬಹಳಷ್ಟಿದೆ. ಹಂತಹಂತವಾಗಿ ಮಾಡುತ್ತೇವೆ
ವೆಂಕಟೇಶ್‌ ‍ಪ್ರಸಾದ್‌, ಅಧ್ಯಕ್ಷ ಕೆಎಸ್‌ಸಿಎ
ಚಿನ್ನಸ್ವಾಮಿ ಕ್ರೀಡಾಂಗಣದ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಕ್ರಿಕೆಟ್ ಪಂದ್ಯ ನಡೆಸಲು ವಿನಂತಿಸಿದ್ದೇವೆ. ನಮ್ಮಲ್ಲಿ ಅನುದಾನ ಕೊರತೆ ಇಲ್ಲ
ಸಂತೋಷ್ ಮೆನನ್, ಕಾರ್ಯದರ್ಶಿ ಕೆಎಸ್‌ಸಿಎ
ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳು ಬೆಳಕಿಗೆ ಬರಬೇಕು. ಅದಕ್ಕಾಗಿ ಯೋಜನೆ ರೂಪಿಸುತ್ತಿದ್ದೇವೆ. ಅಗತ್ಯ ಪ್ರೋತ್ಸಾಹ ನೀಡಲಾಗುವುದು. ಮುಂದಿನ ಮೂರು ವರ್ಷ ಉತ್ತಮ ಕೆಲಸ ಮಾಡಲಾಗುವುದು
ಸುಜಿತ್ ಸೋಮಸುಂದರ್, ಉಪಾಧ್ಯಕ್ಷ ಕೆಎಸ್‌ಸಿಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.