ದುಬೈ: ಇಸ್ರೇಲ್ ದಾಳಿಯಿಂದಾಗಿ ನಲುಗಿರುವ ಗಾಜಾದ ಸಂತ್ರಸ್ತರಿಗೆ ಬೆಂಬಲ ಸೂಚಿಸಿ ತಮ್ಮ ತೋಳಿಗೆ ಕಪ್ಪುಪಟ್ಟಿ ಧರಿಸಿ ಟೆಸ್ಟ್ ಪಂದ್ಯದಲ್ಲಿ ಆಡಿದ ಆಸ್ಟ್ರೇಲಿಯಾ ಆಟಗಾರ ಉಸ್ಮಾನ್ ಖ್ವಾಜಾ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಛೀಮಾರಿ ಹಾಕಿದೆ.
ಪಾಕಿಸ್ತಾನ ಎದುರಿನ ಸರಣಿಯ ಮೊದಲ ಪಂದ್ಯವು ಕಳೆದ ವಾರ ಪರ್ತ್‌ನಲ್ಲಿ ನಡೆದಿತ್ತು. ಅದರಲ್ಲಿ ಅವರು ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿದ್ದರು. ಪಂದ್ಯದ ಮುನ್ನಾ ದಿನ ಅಭ್ಯಾಸದ ಸಂದರ್ಭದಲ್ಲಿ ಖ್ವಾಜಾ ಅವರು, ಪ್ಯಾಲೆಸ್ಟೇನ್ ಧ್ವಜದ ಬಣ್ಣಗಳಲ್ಲಿ ‘ಸ್ವಾತಂತ್ರ್ಯವು ಮಾನವ ಹಕ್ಕು’ ಮತ್ತು ‘ಎಲ್ಲಾ ಜೀವಗಳು ಸಮಾನ’ ಎಂಬ ಸಂದೇಶಗಳನ್ನು ಬರೆದಿದ್ದ ಬೂಟುಗಳನ್ನು ಧರಿಸಿ ಗಮನ ಸೆಳೆದಿದ್ದರು. ಅದೇ ಬೂಟುಗಳನ್ನು ಧರಿಸಿ ಪಂದ್ಯದಲ್ಲಿ ಆಡುವ ಉದ್ಧೇಶ ಅವರಿಗಿತ್ತು. ಆದರೆ ಅವರಿಗೆ ತಂಡದಿಂದ ಅನುಮತಿ ದೊರೆತಿಲ್ಲ ಎಂದು ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ವರದಿಯಾಗಿತ್ತು.
‘ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಉಸ್ಮಾನ್ ಅವರು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಐಸಿಸಿಯ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಸಂದೇಶ (ತೋಳಿಗೆ ಕಪ್ಪುಪಟ್ಟಿ) ಪ್ರದರ್ಶಿಸಿದ್ದಾರೆ. ಇದು ನಿಯಮ ಉಲ್ಲಂಘನೆಯಾಗಿದೆ ಮತ್ತು ಮೊದಲ ಅಪರಾಧಕ್ಕೆ ಛೀಮಾರಿ ಹಾಕಲಾಗಿದೆ‘ ಎಂದು ಐಸಿಸಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.