ADVERTISEMENT

ಶಸ್ತ್ರಚಿಕಿತ್ಸೆ: ಆಸ್ಟ್ರೆಲಿಯಾ ಕ್ರಿಕೆಟಿಗ ಮಿಚೆಲ್‌ ಮಾರ್ಶ್‌ 3 ತಿಂಗಳು ಅಲಭ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2022, 5:32 IST
Last Updated 2 ಡಿಸೆಂಬರ್ 2022, 5:32 IST
   

ಎಡ ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಆಲ್‌ರೌಂಡರ್‌ ಆಟಗಾರ ಮಿಚೆಲ್‌ ಮಾರ್ಶ್‌ 3 ತಿಂಗಳು ಕಾಲ ಕ್ರಿಕೆಟ್‌ಗೆ ಅಲಭ್ಯವಾಗುವ ಸಾಧ್ಯತೆ ಇದೆ ಎಂದು ಕ್ರಿಕೆಟ್‌ ಆಸ್ಟ್ರೆಲಿಯಾ ಹೇಳಿದೆ.


31 ವರ್ಷದ ಮಾರ್ಶ್‌ ಆಗಸ್ಟ್‌ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಆಸ್ಟ್ರೆಲಿಯಾ ಸರಣಿ ವೇಳೆ ಗಾಯಗೊಂಡಿದ್ದರು. ಬಳಿಕ ವಿಶ್ರಾಂತಿಯಲ್ಲಿದ್ದರು. ಅಕ್ಟೋಬರ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ವೇಳೆ ತಂಡಕ್ಕೆ ಮರಳಿದ್ದರು. ನೋವು ಕಡಿಮೆಯಾಗದ ಕಾರಣ ಅವರು ಗುರುವಾರ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.


‘ಮಿಚೆಲ್‌ ತಂಡದ ಪ್ರಮುಖ ಆಟಗಾರ. ಅವರು ಗುಣಮುಖವಾಗಲು ಕಾಲಾವಕಾಶ ನೀಡುತ್ತೇವೆ. ಮಾರ್ಚ್‌ನಲ್ಲಿ ನಡೆಯಲಿರುವ ಭಾರತದ ವಿರುದ್ಧದ ಏಕದಿನ ಸರಣಿ ವೇಳೆಗೆ ಮಾರ್ಶ್‌ ಲಭ್ಯವಾಗುತ್ತಾರೆಂಬ ಭರವಸೆಯಿದೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್‌ ಬೈಲಿ ಹೇಳಿದ್ದಾರೆ.

ADVERTISEMENT


‘ಶಸ್ತ್ರ ಚಿಕಿತ್ಸೆಯು ಮಾರ್ಶ್‌ಗೆ ಸಂಪೂರ್ಣ ಗುಣಮುಖವಾಗಲು ಸಹಕಾರಿ. ಮುಂದಿನ ನಮ್ಮ ಯೋಜನೆಗಳಿಗೆ ಅವರು ಆಲ್‌ರೌಂಡರ್‌ ಆಗಿಯೇ ಉಳಿದುಕೊಳ್ಳುವುದು ಮಹತ್ವದ್ದು’ ಎಂದು ಜಾರ್ಜ್‌ ತಿಳಿಸಿದ್ದಾರೆ.


ಕಳೆದ ವರ್ಷದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆಸ್ಟ್ರೆಲಿಯಾ ಗೆಲುವು ಸಾಧಿಸುವಲ್ಲಿ ಮಾರ್ಶ್‌ ಕೊಡುಗೆ ಮಹತ್ವದ್ದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.