ADVERTISEMENT

ಶುಭಮನ್ ಶತಕ: ಭಾರತಕ್ಕೆ ಸರಣಿ

ಟಿ20 ಕ್ರಿಕೆಟ್‌: ನ್ಯೂಜಿಲೆಂಡ್ ತಂಡದ ವಿರುದ್ಧ ಹಾರ್ದಿಕ್ ಪಡೆ ಜಯಭೇರಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 20:12 IST
Last Updated 1 ಫೆಬ್ರುವರಿ 2023, 20:12 IST
ಶತಕ ಗಳಿಸಿದ ಶುಭಮನ್ ಗಿಲ್ ಸಂಭ್ರಮ– ಪಿಟಿಐ ಚಿತ್ರ
ಶತಕ ಗಳಿಸಿದ ಶುಭಮನ್ ಗಿಲ್ ಸಂಭ್ರಮ– ಪಿಟಿಐ ಚಿತ್ರ   

ಅಹಮದಾಬಾದ್ (ಪಿಟಿಐ): ಯುವ ಬ್ಯಾಟರ್ ಶುಭಮನ್ ಗಿಲ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು.

ಇದರಿಂದಾಗಿ ಭಾರತ ತಂಡವು 168 ರನ್‌ಗಳಿಂದ ನ್ಯೂಜಿಲೆಂಡ್ ಎದುರು ಗೆದ್ದಿತು. 2–1ರಿಂದ ಸರಣಿಯನ್ನು ಗೆದ್ದುಕೊಂಡಿತು.

ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳ ಅಂತರದಲ್ಲಿ ಗೆದ್ದ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡಿತು. 2018ರಲ್ಲಿ ಭಾರತ ತಂಡವು ಡಬ್ಲಿನ್‌ನಲ್ಲಿ ಐರ್ಲೆಂಡ್‌ ಎದುರು 143 ರನ್‌ಗಳ ಅಂತರದಿಂದ ಗೆದ್ದಿತ್ತು.

ADVERTISEMENT

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಶುಭಮನ್ (126; 63ಎ) ಅಜೇಯ ಶತಕ ಗಳಿಸಿದರು. ಇದರಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 234 ರನ್ ಗಳಿಸಿತು. ಅದಕ್ಕುತ್ತರವಾಗಿ ಕಿವೀಸ್ ಬಳಗವು 12.1 ಓವರ್‌ಗಳಲ್ಲಿ 66 ರನ್ ಗಳಿಸಿ ಆಲೌಟ್ ಆಯಿತು.

ಟಾಸ್ ಗೆದ್ದ ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ತಂಡದ ಆರಂಭ ಚೆನ್ನಾಗಿರಲಿಲ್ಲ. ಇಶಾನ್ ಕಿಶನ್ ಅವರನ್ನು 2ನೇ ಓವರ್‌ನಲ್ಲಿಯೇ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಮೈಕಲ್ ಬ್ರೇಸ್‌ವೆಲ್ ಸಂಭ್ರಮಿಸಿದರು.

ಆದರೆ ಕಿವೀಸ್ ಬಳಗದ ಸಂತಸಕ್ಕೆ ಶುಭಮನ್ ಅಡ್ಡಿಯಾದರು. ಬೌಲರ್‌ ಗಳಿಗೆ ಬೆವರಿಳಿಸಿದರು. ತಮಗೆ ಲಭಿಸಿದ ಮೂರು ಜೀವದಾನಗಳನ್ನು(5.6, 17.3 ಹಾಗೂ 18.3 ನೇ ಓವರ್‌ಗಳಲ್ಲಿ ಫೀಲ್ಡರ್‌ಗಳು ಕ್ಯಾಚ್ ಕೈಚೆಲ್ಲಿದ್ದರು) ಸಮರ್ಥವಾಗಿ ಬಳಸಿಕೊಂಡರು.

ಗಿಲ್ ಅವರು ರಾಹುಲ್ ತ್ರಿಪಾಠಿ (44; 22ಎ) ಜೊತೆಗೆ 80 ರನ್‌ ಗಳಿಸಿದರು. 200ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು.

9ನೇ ಓವರ್‌ನಲ್ಲಿ ತ್ರಿಪಾಠಿ ವಿಕೆಟ್ ಗಳಿಸಿದ ಸ್ಪಿನ್ನರ್ ಈಶ್ ಸೋಧಿ ಜೊತೆಯಾಟ ಮುರಿದರು.

ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಬೀಸಾಟ ಆರಂಭಿಸಿದರು. ಒಂದೆಡೆ ಗಿಲ್, ಇನ್ನೊಂದೆಡೆ ಸೂರ್ಯನ ಆರ್ಭಟಕ್ಕೆ ಬೌಲರ್‌ಗಳು ಸುಸ್ತಾದರು. ಸೂರ್ಯ 2 ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 24 ರನ್‌ ಗಳನ್ನು ಗಳಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 38 ರನ್ ಸೇರಿಸಿದರು.

ಸೂರ್ಯ ವಿಕೆಟ್ ಪತನವಾದ ನಂತ ರವೂ ಗಿಲ್ ವೇಗ ಕುಂದಲಿಲ್ಲ. ಕ್ರೀಸ್‌ಗೆ ಬಂದ ಹಾರ್ದಿಕ್ ಕೂಡ ಅಬ್ಬರಿಸಿದರು.

ಗಿಲ್, 97 ರನ್‌ ಗಳಿಸಿದ್ದ ಗಿಲ್ ಬೌಂಡರಿ ಬಾರಿಸುವ ಮೂಲಕ ಶತಕದ ಗಡಿ ಮುಟ್ಟಿದರು. ಕೇವಲ 54 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ನಂತರವೂ ಅಬ್ಬರಿಸಿದರು. ಚೆಂಡನ್ನು ಸಿಕ್ಸರ್‌ಗೆತ್ತುವಲ್ಲಿ ಮಗ್ನರಾದರು.

ಇದರೊಂದಿಗೆ ಮೂರು ಮಾದರಿಗಳಲ್ಲಿಯೂ ಶತಕ ಬಾರಿಸಿದ ಬ್ಯಾಟರ್‌ಗಳ ಸಾಲಿಗೆ ಸೇರಿದರು. ಈ ಹಿಂದೆ ಸುರೇಶ್‌ ರೈನಾ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ
ಮಾಡಿದ್ದಾರೆ.

ಈಚೆಗೆ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶುಭಮನ್ ದ್ವಿಶತಕ ಹೊಡೆದಿದ್ದರು.

ನಂತರ ಬೌಲರ್‌ಗಳೂ ಮಿಂಚಿದರು. ಹಾರ್ದಿಕ್ (16ಕ್ಕೆ4), ಆರ್ಷದೀಪ್ ಸಿಂಗ್ 16ಕ್ಕೆ2, ಉಮ್ರಾನ್ ಮಲಿಕ್ 9ಕ್ಕೆ2 ಹಾಗೂ ಶಿವಂ ಮಾವಿ 12ಕ್ಕೆ2 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 234 (ಶುಭಮನ್ ಗಿಲ್ ಔಟಾಗದೆ 126, ರಾಹುಲ್ ತ್ರಿಪಾಠಿ 44, ಸೂರ್ಯ ಕುಮಾರ್ ಯಾದವ್ 24, ಹಾರ್ದಿಕ್ ಪಾಂಡ್ಯ 30, ಮೈಕಲ್ ಬ್ರೇಸ್‌ವೆಲ್ 8ಕ್ಕೆ1, ಈಶ್ ಸೋಧಿ 34ಕ್ಕೆ1). ನ್ಯೂಜಿಲೆಂಡ್‌: 12.1 ಓವರ್‌ಗಳಲ್ಲಿ 66 (ಡೆರಿಲ್ ಮಿಚೆಲ್‌ 35, ಮಿಚೆಲ್‌ ಸ್ಯಾಂಟನರ್ 13; ಹಾರ್ದಿಕ್ ಪಾಂಡ್ಯ 16ಕ್ಕೆ 4, ಆರ್ಷದೀಪ್ ಸಿಂಗ್‌ 16ಕ್ಕೆ 2, ಉಮ್ರಾನ್ ಮಲಿಕ್ 9ಕ್ಕೆ 2, ಶಿವಂ ಮಾವಿ 12ಕ್ಕೆ 2). ಫಲಿತಾಂಶ: ಭಾರತಕ್ಕೆ 168 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.