ADVERTISEMENT

IND vs ENG: ಸರಣಿ ಮೇಲೆ ಕುತೂಹಲದ ಕಣ್ಣು: ಇಂದೂ ರನ್‌ ಹೊಳೆ ಹರಿಯುವ ನಿರೀಕ್ಷೆ

ಭಾರತ–ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯ ಇಂದು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 2:50 IST
Last Updated 28 ಮಾರ್ಚ್ 2021, 2:50 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ರನ್‌ಗಳ ಹೊಳೆಯೇ ಹರಿದಿತ್ತು. ಅದರಲ್ಲಿ ಭಾರತ ತಂಡದ ಜಯದ ಕನಸು ಕೂಡ ಕೊಚ್ಚಿಹೋಗಿತ್ತು.

ಉಭಯ ತಂಡಗಳ ಬ್ಯಾಟ್ಸ್‌ಮನ್‌ಗಳ ಆರ್ಭಟಕ್ಕೆ 673 ರನ್‌ಗಳು ಹರಿದಿದ್ದವು. ಅದರಲ್ಲಿ 34 ಸಿಕ್ಸರ್‌ಗಳೂ ಸಿಡಿದಿದ್ದರು. ಈ ಭರಾಟೆಯಲ್ಲಿ ಬೌಲರ್‌ಗಳು ಬಸವಳಿದಿದ್ದರು.

ಆದ್ದರಿಂದ ಭಾನುವಾರ ನಡೆಯಲಿರುವ ಸರಣಿಯ ಕೊನೆಯ ಪಂದ್ಯದಲ್ಲಿ ಎಲ್ಲರ ಕಣ್ಣುಗಳೂ ಬೌಲರ್‌ಗಳ ಮೇಲೆಯೇ ನೆಟ್ಟಿವೆ. 1–1ರಿಂದ ಸಮಬಲವಾಗಿರುವ ಈ ಸರಣಿಯನ್ನು ಗೆಲ್ಲಲು ಕೊನೆಯ ಪಂದ್ಯವನ್ನು ಜಯಿಸುವ ಛಲದಲ್ಲಿ ಉಭಯ ತಂಡಗಳೂ ಇವೆ.

ADVERTISEMENT

ಎರಡೂ ಪಂದ್ಯಗಳಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಮೂನ್ನೂರಕ್ಕೂ ಹೆಚ್ಚು ಮೊತ್ತದ ಗುರಿಯನ್ನು ಇಂಗ್ಲೆಂಡ್‌ಗೆ ನೀಡಿತ್ತು. ಆದರೆ, ಮೊದಲ ಪಂದ್ಯದಲ್ಲಿ ಬೌಲರ್‌ಗಳು ಆರಂಭದಲ್ಲಿ ಪೆಟ್ಟು ತಿಂದರೂ ನಂತರ ಚೇತರಿಸಿಕೊಂಡಿದ್ದರು. ಪದಾರ್ಪಣೆ ಮಾಡಿದ್ದ ಪ್ರಸಿದ್ಧಕೃಷ್ಣ ನಾಲ್ಕು ವಿಕೆಟ್ ಗಳಿಸಿದ್ದರು. ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್ ಮಿಂಚಿದ್ದರು.

ಎರಡನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಶತಕ ಬಾರಿಸಿದ್ದರು. ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅರ್ಧಶತಕಗಳೂ ಗಮನ ಸೆಳೆದಿದ್ದವು. ರೋಹಿತ್ ಶರ್ಮಾ ಎರಡೂ ಪಂದ್ಯಗಳಲ್ಲಿ ಲಯ ಕಂಡುಕೊಳ್ಳುವಲ್ಲಿ ಸಫಲರಾಗಿಲ್ಲ. ಆದ್ದರಿಂದ ಶುಭಮನ್ ಗಿಲ್ ಆಡುವ ಅವಕಾಶ ಗಿಟ್ಟಿಸಬಹುದು.

ಆದರೆ, ಇಂಗ್ಲೆಂಡ್‌ನ ಆರಂಭಿಕ ಜೋಡಿ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಅವರ ಜೊತೆಯಾಟಕ್ಕೆ ತಡೆಯೊಡ್ಡಲು ಬೌಲರ್‌ಗಳು ವಿಫಲರಾಗಿದ್ದರು.

ಜೇಸನ್ ಔಟ್ ಆದ ಮೇಲೆ ಬಂದ ಬೆನ್ ಸ್ಟೋಕ್ಸ್‌ ಅಂತೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಬೆಸ್ಟೊ ಶತಕ ಗಳಿಸಿದರು. ಇವರಿಬ್ಬರ ಆಟಕ್ಕೆಎಡಗೈ ಸ್ಪಿನ್ ಜೋಡಿ ಕೃಣಾಲ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ಬಸವಳಿದರು.

ಆದ್ದರಿಂದ ಈ ಪಂದ್ಯದಲ್ಲಿ ಪ್ರಮುಖವಾಗಿ ಇವರಿಬ್ಬರಿಗೂ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ. ವಾಷಿಂಗ್ಟನ್ ಸುಂದರ್ ಮತ್ತು ಯಜುವೇಂದ್ರ ಚಾಹಲ್ ಕಣಕ್ಕಿಳಿಯಬಹುದು. ಭುವನೇಶ್ವರ್ ಕುಮಾರ್ ತಮ್ಮ ಎಕಾನಮಿಕಲ್ ಬೌಲಿಂಗ್‌ನಿಂದ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.

ಪ್ರಸಿದ್ಧ ಕೃಷ್ಣ ಕೂಡ ಇನ್ನೊಂದು ಅವಕಾಶ ಗಿಟ್ಟಿಸುವುದು ಬಹುತೇಕ ಖಚಿತ. ಆದರೆ ಮೊದಲ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಶಾರ್ದೂಲ್ ಎರಡನೇಯದ್ದರಲ್ಲಿ ದುಬಾರಿಯಾಗಿದ್ದರು. ಆದ್ದರಿಂದ ಶಾರ್ದೂಲ್‌ ಬದಲಿಗೆ ಟಿ. ನಟರಾಜನ್‌ ಸ್ಥಾನ ಪಡೆದರೆ ಅಚ್ಚರಿಯೇನಿಲ್ಲ.

ಇಂಗ್ಲೆಂಡ್ ತಂಡವು ಬ್ಯಾಟಿಂಗ್‌ ಕ್ರಮಾಂಕದಲ್ಲಿ ಹೆಚ್ಚು ಬದಲಾವಣೆ ಮಾಡುವುದು ಅನುಮಾನ. ಆದರೆ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಬಹುದು.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ರಿಷಭ್ ಪಂತ್ (ಇಬ್ಬರೂ ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಪ್ರಸಿದ್ಧಕೃಷ್ಣ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಟಿ. ನಟರಾಜನ್ , ಶಾರ್ದೂಲ್ ಠಾಕೂರ್, ಶುಭಮನ್ ಗಿಲ್

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ/ವಿಕೆಟ್‌ಕೀಪರ್), ಜಾನಿ ಬೆಸ್ಟೊ, ಜೇಸನ್ ರಾಯ್, ಬೆನ್ ಸ್ಟೋಕ್ಸ್‌, ಡೇವಿಡ್ ಮಲಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಆದಿಲ್ ರಶೀದ್, ರೀಸ್ ಟಾಪ್ಲೆ, ಮಾರ್ಕ್ ವುಡ್.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.