ADVERTISEMENT

ಬಾಗಿಲಲ್ಲಿ ವಿಶ್ವಕ‍‍‍‍ಪ್; ವರಾಂಡದಲ್ಲಿ ಐಪಿಎಲ್

ಈ ಸಲ ಕಪ್‌ ನಮ್ದೇ!

ವಿಶಾಖ ಎನ್.
Published 9 ಏಪ್ರಿಲ್ 2019, 3:30 IST
Last Updated 9 ಏಪ್ರಿಲ್ 2019, 3:30 IST
   

ಫೆಬ್ರುವರಿ ಕ್ಯಾಲೆಂಡರ್ ತಿರುವಿ ಮಾರ್ಚ್ ಕಂಡಾಗಲೆಲ್ಲ ಯುವರಾಜ್ ಸಿಂಗ್ ನೆನಪಾಗುತ್ತಾರೆ. ಅವರು 2012ರ ಮಾರ್ಚ್‌ನಲ್ಲಿ ಕ್ಯಾನ್ಸರ್ ಬೀಸುದೊಣ್ಣೆಯಿಂದ ಪಾರಾಗಿ ಅಮೆರಿಕೆಯಿಂದ ತವರಿಗೆ ಮರಳಿದ್ದು. ಮೂರು ಸುತ್ತಿನ ಕಿಮೋಥೆರಪಿ ಮುಗಿಸಿಕೊಂಡು, ಕಣ್ಣೊಳಗೆ ಮತ್ತಷ್ಟು ಆಟದ ಪಸೆ ಉಳಿಸಿಕೊಂಡು ಮರಳಿದವರು ‘ಯುವಿ’. ಅವರೀಗ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಆಡಿದ ರೀತಿ ನೋಡಿದರೆ ಆ ದಿನಗಳ ಅವರ ಸಂಕಟ ಕಂಡವರ ಕಣ್ಣಾಲಿಗಳಲ್ಲಿ ನೀರು ಜಮೆಯಾಗದೆ ಇರದು. ಯಾರೇ ಹೋಗಿ ‘ಯುವಿ’ಯನ್ನು ‘ಇನ್ನೊಂದು ವಿಶ್ವಕಪ್ ಆಡುವ ಆಸೆ ಇದೆಯಾ’ ಎಂದು ಕೇಳಿದರೆ, ಅವರು ‘ಇಲ್ಲ’ ಎನ್ನಲಾರರು. ಆದರೆ, ಅಂಥ ಬಯಕೆ ಅವರಲ್ಲಿ

ಕಳೆದ ವಿಶ್ವಕಪ್‌ ನಡೆದಾಗಲೇ ಮುರುಟಿತ್ತು. ಅದನ್ನು ಅರಿತೇ ಅವರು ರಿಷಭ್ ಪಂತ್ ಆಟವನ್ನು ಬೆರಗಿನಿಂದ ನೋಡಿ, ‘ಈ ಹುಡುಗನಿಗೆ ದೊಡ್ಡ ಕ್ರಿಕೆಟ್ ಭವಿಷ್ಯವಿದೆ’ ಎಂದು ಶಹಬ್ಬಾಸ್‌ಗಿರಿ ಕೊಟ್ಟಿದ್ದು. 2011ರ ವಿಶ್ವಕಪ್‌ನ ‘ಸರಣಿ ಶ್ರೇಷ್ಠ’ ಯುವಿ. ಭಾರತ ಕಪ್‌ ಎತ್ತಿಹಿಡಿದ ಟೂರ್ನಿ ಅದಲ್ಲವೇ?

ರಿಷಭ್ ಪಂತ್

‘ಯುವಿ’ ಹೊಡೆತಗಳ ಹಳೆಯ ಕೊಂಡಿ. ರಿಷಭ್ ಈ ಹೊತ್ತಿನ ಕಿಡಿ. ರಿಷಭ್ ಇನಿಂಗ್ಸ್‌ನ ಅಸಾಂಪ್ರದಾಯಿಕ ಹೊಡೆತಗಳು ಹೆಚ್ಚು ರಂಜನೀಯ. ಯುವಿಯ ಲೀಲಾಜಾಲ ಸ್ಟ್ರೈಟ್ ಡ್ರೈವ್ ಗತವೈಭವ.

ADVERTISEMENT

ಚುಟುಕು ಕ್ರಿಕೆಟ್ ಇಡೀ ಆಟವನ್ನೇ ಚುರುಕಾಗಿಸಿದೆ. ಬಾಗಿಲ ಎದುರು ವಿಶ್ವಕಪ್ ಬಂದು ನಿಂತಿರುವಾಗ ವರಾಂಡದಲ್ಲಿ ಐಪಿಎಲ್ ಆಡಿಕೊಂಡೇ, ‘ಬಂದೇ ಇರು’ ಎನ್ನುತ್ತಿರುವ ನುರಿತವರು, ಮಾಗಿದವರು ಒಂದು ಕಡೆ. ಕನಸುಕಂಗಳ ಹೊಸ ಹುಡುಗರ ದಂಡು ಇನ್ನೊಂದು ಕಡೆ. ಎರಡೂ ವರ್ಗಗಳನ್ನು ಕಂಡರೆ ಸೋಜಿಗವಾಗುತ್ತದೆ. ಇಷ್ಟಕ್ಕೂ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದರೆ ವಿಶ್ವಕಪ್ ಆಯ್ಕೆಗೆ ಪರಿಗಣಿಸುವರೇ ಎಂಬೊಂದು ಪ್ರಶ್ನೆ ಅನೇಕರಲ್ಲಿ ಇದೆ. ಅದಕ್ಕೆ ಮುಖ್ಯ ಕಾರಣ, ಚುಟುಕು ಕ್ರಿಕೆಟ್‌ನ ಜನಪ್ರಿಯತೆ.

‘ಇಲ್ಲ... ಐಪಿಎಲ್‌ನಲ್ಲಿ ಚೆನ್ನಾಗಿ ಆಡುವುದಕ್ಕೂ ವಿಶ್ವಕಪ್ ಆಯ್ಕೆಗೂ ಏನೇನೂ

ಕೆ.ಎಲ್. ರಾಹುಲ್

ಸಂಬಂಧವಿಲ್ಲ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ವಿರಾಟ್ ಮಾತು ಅಷ್ಟಕ್ಕೇ ನಿಲ್ಲಲಿಲ್ಲ. ಅವರು ಕರ್ನಾಟಕದ ಕೆ.ಎಲ್. ರಾಹುಲ್ ಬಗೆಗೆ ಒಂದಿಷ್ಟು ಒಳ್ಳೆಯ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. ಹಾಗೆ ಮಾಡುವಾಗ ಅವರು ಉದಾಹರಿಸಿದ್ದು, 2017ರ ಐಪಿಎಲ್‌ನಲ್ಲಿ ರಾಹುಲ್ ಆಡಿದ ರೀತಿಯನ್ನು. ಅಂದರೆ, ಚುಟುಕು ಕ್ರಿಕೆಟ್‌ನ ಮರೆಯಲಾಗದ ಕೆಲವು ಇನಿಂಗ್ಸ್‌ಗಳು ಭಾರತದ ನಾಯಕನ ಮನಸ್ಸಿನಲ್ಲೂ ನೆಲೆ ನಿಂತಿವೆಯೆಂದೇ ಅರ್ಥ. ಅವರ ತಲೆಯೊಳಗೆ ಇನ್ನೊಂದು ನಿರೀಕ್ಷೆಯ ಹುಳವನ್ನು ರಿಷಭ್ ಪಂತ್ ಈಗ ಬಿಟ್ಟಿದ್ದಾರೆ. ದೊಡ್ಡ ಗ್ಲೌಸ್ ಹಾಕಿಕೊಂಡು ವಿಕೆಟ್ ಹಿಂದೆ ನಿಲ್ಲಬಲ್ಲ ಅವರಿಗೆ ಮಹೇಂದ್ರ ಸಿಂಗ್ ದೋನಿಯ ಜಾಣತಲೆಯ ಜೊತೆ ಜೊತೆಗೇ, ಅದೇ ಹಳೆಯ ನಾಯಕನ ಗತಕಾಲದ ಜಂಘಾಬಲ ಕಳೆದುಕೊಂಡ ಕಾಲುಗಳೂ ಕಾಣುತ್ತಿರಬಹುದು.

ಈ ಕ್ರಿಕೆಟ್ಟೇ ಹೀಗೆ... ಅಪ್‌ಡೇಟ್ ಆಗುತ್ತಲೇ ಬಂದಿದೆ. ಏಕದಿನ ಪಂದ್ಯಗಳು ಶುರುವಾದಾಗ ಸುನೀಲ್ ಗಾವಸ್ಕರ್‌ಗೆ ಹೊಂದಿಕೊಳ್ಳಲು ಅದೆಷ್ಟೊಂದು ಇನಿಂಗ್ಸ್‌ಗಳು ಬೇಕಾಗಿದ್ದವು. ಅವರೆದುರೇ ಕೃಷ್ಣಮಾಚಾರಿ ಶ್ರೀಕಾಂತ್ ಪಟಪಟನೆ ರನ್‌ ಗಳಿಸುತ್ತಿದ್ದರು. ರಾಹುಲ್ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್ ಇಬ್ಬರೂ ಸ್ಟೈಲಿಶ್‌ ಡ್ರೈವ್‌ಗಳಿಂದ ಕ್ರಿಕೆಟ್‌ ಆಸ್ವಾದಿಸುತ್ತಿದ್ದಾಗಲೇ ವೀರೇಂದ್ರ ಸೆಹ್ವಾಗ್ ಬಂದು ಪಾಯಿಂಟ್ ಫೀಲ್ಡರ್ ತಲೆಯಮೇಲೆ ಹೊಡೆಯತೊಡಗಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದಾಗಲೂ ಅವರು ತಮ್ಮ ಶೈಲಿಯಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಆ ಆಟದ ಮರ್ಮ ನೋಡಿ ಲೆಕ್ಕವಿಲ್ಲದಷ್ಟು

ಎಬಿ ಡಿಲಿವಿಲಿಯರ್ಸ್

ಶಾಲಾಮಕ್ಕಳು ಅದನ್ನು ತಮ್ಮದೇ ಇಂಪ್ರುವೈಸ್ಡ್ ಶಾಟ್ ಆಗಿ ಪರಿವರ್ತಿಸಿಕೊಂಡಿದ್ದೂ ಇದೆ. ಎಬಿ ಡಿಲಿವಿಲಿಯರ್ಸ್ ಹೊಡೆಯುವ ಅಕ್ರಾಸ್ ಶಾಟ್‌ಗಳು, ವಿಚಿತ್ರ ಪುಲ್‌ಗಳು ಯಾವುದೇ ಪುರಾತನ ಕೋಚ್ ಕಣ್ಣುಗಳನ್ನು ಕೆಂಪಗಾಗಿಸಬಹುದು. ಅಂತೆಯೇ ದೋನಿಯ ಹೆಲಿಕಾಪ್ಟರ್ ಶಾಟ್. ಮಹಾ ಸೋಮಾರಿಯಂತೆ ಪ್ರಕಟಗೊಳ್ಳುತ್ತಲೇ ಎತ್ತರೆತ್ತರಕ್ಕೆ ಸಿಕ್ಸರ್ ಹೊಡೆಯುವ ಕ್ರಿಸ್ ಗೇಲ್... ಇವರೆಲ್ಲರ ಆಟವನ್ನು ಕಂಡುಂಡು ಬೆಳೆದ ಕಂದ ರಿಷಭ್ ಪಂತ್. ಸಹಜವಾಗಿಯೇ ಎಲ್ಲವನ್ನೂ ತಲೆಗೆ ಬಿಟ್ಟುಕೊಂಡೇ ಅವರೀಗ ಕಣಕ್ಕಿಳಿದಿದ್ದಾರೆ. ಒಂದು ತಂಡದಲ್ಲಿ ಅವರು ಚಚ್ಚುತ್ತಿರುವಾಗ ಇನ್ನೊಂದು ತಂಡದ ‘ಯುವಿ’ಯ ಅನುಭವಿ ಕಣ್ಣುಗಳು ಅರಳುತ್ತಿರುವುದು ಗಮನಿಸಬೇಕಾದ ವಿದ್ಯಮಾನ.

ಚುಟುಕು ಕ್ರಿಕೆಟ್ಟನ್ನು ತಾವು ಕ್ರೀಡಾಂಗಣಕ್ಕೆ ಹೋಗಿ ನೋಡುವುದಿಲ್ಲ ಎಂದು ಕ್ರಿಕೆಟ್ ಇತಿಹಾಸಕಾರ ರಾಮಚಂದ್ರ ಗುಹಾ ತಮ್ಮ ಎಷ್ಟೋ ಅಂಕಣಗಳಲ್ಲಿ ಬರೆದಿದ್ದಾರೆ. ಈ ಕ್ರಿಕೆಟ್ಟು ಇನ್ನೇನು ಮಾಡುವುದೋ ಎಂದು ಬಿ.ಎಸ್. ಚಂದ್ರಶೇಖರ್ ಪ್ರಶ್ನಾರ್ಹ ನೋಟ ಬೀರಿದ ನೆನಪೂ ಹಾಗೆಯೇ ಇದೆ. ಇತ್ತೀಚೆಗೆ ಮೊಹೀಂದರ್ ಅಮರ್‌ನಾಥ್ ಈ ಕ್ರಿಕೆಟ್ ನೋಡಿಕೊಂಡು ವಿಶ್ವಕಪ್ ತಂಡ ಆಯ್ಕೆಯಾಗಕೂಡದು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಹಾಗಿದ್ದೂ, ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಯಾರೆಂಬ ಪ್ರಶ್ನೆ ತಂಡದ ವ್ಯವಸ್ಥಾಪಕ ಸಮಿತಿ ಹಾಗೂ ವಿರಾಟ್ ಕೊಹ್ಲಿಯನ್ನು ಸದ್ಯಕ್ಕೆ ಕಾಡುತ್ತಿದೆ. ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ – ಈ ನಾಲ್ಕು ಹೆಸರುಗಳು ಮೇಲುನೋಟಕ್ಕೆ ಕೇಳಿಬರುತ್ತಿವೆ.

ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಮೊದಲು ಕೊಹ್ಲಿ ಐಪಿಎಲ್ ವಿಷಯ ಮಾತನಾಡುತ್ತಲೇ ರಾಹುಲ್ ಬಗೆಗೂ ಒಂದಿಷ್ಟು ಒಳ್ಳೆಯದನ್ನು ಹೇಳಿದ್ದರಲ್ಲ, ಅದರ ಸಾರ ಹೀಗಿದೆ: ‘ರಾಹುಲ್ ಸಹಜ ಆಟಕ್ಕೆ ಕುದುರಿಕೊಂಡರೆ ನಮಗೆ ನಿರಾಳ. ಅವನಲ್ಲಿ ಕ್ರಿಕೆಟಿಂಗ್ ಶಾಟ್‌ಗಳ ಭಂಡಾರವೇ ಇದೆ. ಒಮ್ಮೆ ಸ್ಥಿರತೆ ಕಂಡುಕೊಂಡರೆ ಎದುರಾಳಿಗೆ ಅಪಾಯಕಾರಿ. ಅದನ್ನು ನಾನು ತುಂಬ ಹತ್ತಿರದಿಂದ ಕಂಡಿದ್ದೇನೆ’. ಕೊಹ್ಲಿ ಆಡಿದ ಈ ಮಾತನ್ನು ಕೇಳಿ ಉಳಿದ ಮೂವರಲ್ಲಿ ಕಿಚ್ಚು ಹೆಚ್ಚಾಗಿದ್ದರೂ ಅಚ್ಚರಿಯಿಲ್ಲ. ಅವರೆಲ್ಲ ಈ ಐಪಿಎಲ್‌ನಲ್ಲಿ ಕಡಿದು ಗುಡ್ಡೆ ಹಾಕಿ ತೋರಿಸಬೇಕಿದೆ.

‘ಡೆಲ್ಲಿ ಕ್ಯಾಪಿಟಲ್ಸ್‌’ ತಂಡದ ಶ್ರೇಯಸ್ ಅಯ್ಯರ್ ಆರಂಭದ ಪಂದ್ಯದಲ್ಲಿ ಒಳ್ಳೆಯ ಲಯದಲ್ಲಿಯೇ ಆಡತೊಡಗಿದರು. ಅವರ ಒಂದು ಡ್ರೈವ್ ಅನ್ನು ಮುಂಬೈ ಇಂಡಿಯನ್ಸ್‌ ದೈತ್ಯ ಕೀರನ್ ಪೊಲಾರ್ಡ್ ಅದ್ಭುತ ಕ್ಯಾಚ್ ಆಗಿ ಪರಿವರ್ತಿಸಿಬಿಟ್ಟರು. ಶ್ರೇಯಸ್ ಉತ್ಸಾಹಕ್ಕೆ ತಣ್ಣೀರು. ಶಾಟ್ ಸೆಲೆಕ್ಷನ್ ಚೆನ್ನಾಗಿರುವುದಷ್ಟೇ ಅಲ್ಲ, ಹೊಡೆಯುವ ಜಾಗ ಯಾವುದು ಎಂದು ಅಳೆಯುವುದು ಕೂಡ ಈಗ ಮುಖ್ಯವಾಗಿದೆ. ಚುಟುಕು ಕ್ರಿಕೆಟ್‌ನಲ್ಲಿ ಒತ್ತಡದ ನೊಗ ಹೆಗಲಿನಿಂದ ಇಳಿಯುವುದೇ ಅಪರೂಪ. ಹೀಗಾಗಿ ಮಾನಸಿಕ ಆಟದ ಹಲವು ಪಾಠಗಳು ಇಲ್ಲಿ ಕಲಿಯಲು ಸಿಗುತ್ತವೆ. ಅಯ್ಯರ್‌ ಈಗ ಅಂಥ ಪಾಠ ಕಲಿಯುತ್ತಿರಬಹುದು.

ಅಂಕಿಅಂಶಗಳ ಕಡೆಗೆ ಕಣ್ಣಾಡಿಸಿದರೆ ಅನುಭವಿಗಳೇ ಐಪಿಎಲ್‌ನಲ್ಲೂ ಮೆರೆದಿರುವುದಕ್ಕೆ ಅಸಂಖ್ಯ ಉದಾಹರಣೆಗಳು ಸಿಗುತ್ತವೆ.

ಒಂದು ಸರಳ ಪ್ರಶ್ನೆ:ಇದುವರೆಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಹೊಡೆದಿರುವ ಆಟಗಾರ ಯಾರು?

ಗೌತಮ್ ಗಂಭೀರ್

ಕ್ರಿಕೆಟ್ ಪ್ರಿಯರನ್ನು ಸುಮ್ಮನೆ ಕೇಳಿ ನೋಡಿದರೂ ಅನೇಕರು ಸರಿಯಾದ ಉತ್ತರ ಊಹಿಸಲಾರರು. ಮಾರ್ಚ್ 28ರವರೆಗಿನ ಲೆಕ್ಕ ಗಮನಿಸಿದರೆ, ಈ ದಾಖಲೆ ಗೌತಮ್ ಗಂಭೀರ್ ಹೆಸರಿನಲ್ಲಿದೆ. ರಾಜಕೀಯ ಮೊಗಸಾಲೆಗೆ ಕಾಲಿಟ್ಟಿರುವ ಗೌತಮ್ ಇದುವರೆಗೆ 491 ಬೌಂಡರಿಗಳನ್ನು ಐಪಿಎಲ್‌ನಲ್ಲಿ ಹೊಡೆದಿದ್ದಾರೆ. ಅವರಿಗಿಂತ 20 ಬೌಂಡರಿಗಳಷ್ಟೇ ಹಿಂದೆ ಶಿಖರ್‌ ಧವನ್ ಇದ್ದಾರೆ. ಸುರೇಶ್‌ ರೈನಾ ಕೂಡ 455 ಬೌಂಡರಿ ಗಳಿಸಿದ್ದು, ತಾವೂ ಕಡಿಮೆ ಏನಲ್ಲ ಎಂದು ಸಾಬೀತುಪಡಿಸಿದ್ದಾರೆ. ವಿರಾಟ್‌ ಕೊಹ್ಲಿ, ರಾಬಿನ್‌ ಉತ್ತಪ್ಪ ಬೌಂಡರಿ ಗಳಿಕೆ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದು, ಪೋಟಿ ನೀಡುತ್ತಿದ್ದಾರೆ.

ಐಪಿಎಲ್‌ನ ಸಿಕ್ಸರ್‌ ಸರದಾರರೇ ಬೇರೆ. ಕ್ರಿಸ್‌ ಗೇಲ್‌ ಹೆಸರಲ್ಲಿ 298 ಸಿಕ್ಸರ್‌ಗಳಿವೆ. ಮಾರ್ಚ್‌ 28ರಂದು ದೋನಿಯನ್ನು ಹಿಂದಿಕ್ಕಿದ ಡಿವಿಲಿಯರ್ಸ್‌ 198 ಸಿಕ್ಸರ್‌ ಸಿಡಿಸಿದ್ದಾರೆ. ಗೇಲ್‌ ಹಾಗೂ ಅವರ ನಡುವಿನ ದೊಡ್ಡ ಅಂತರ ಗಮನಿಸಿ. ದೋನಿ 187, ರೈನಾ 186, ರೋಹಿತ್ 185 ಸಿಕ್ಸರ್‌ಗಳನ್ನು ಮಾರ್ಚ್‌ 28ರವರೆಗೆ ತಮ್ಮ ಖಾತೆಗೆ ಹಾಕಿಕೊಂಡು ಬೀಗುತ್ತಿದ್ದಾರೆ.

ದೊಡ್ಡ ಹೊಡೆತಗಾರರ ಈ ಎರಡೂ ಪಟ್ಟಿಗಳನ್ನು ಗಮನಿಸಿದರೆ ಯಾರೂ ಅನನುಭವಿಗಳಲ್ಲ ಎನ್ನುವುದು ಗೊತ್ತಾಗುತ್ತದೆ. ಒಂದು ಡಜನ್‌ ಋತುಗಳನ್ನು ಹಾದು ಬಂದಿರುವ ಐಪಿಎಲ್‌ ಕೂಡ ಹೇಗೆ ಮಾಗಿದ ಆಟವನ್ನು ಉಣಿಸುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ.

ರನ್‌ ಗಳಿಕೆಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದ್ದು, ಪದೇ ಪದೇ ಕಿತ್ತಳೆ ಟೋಪಿ ಹಾಕಿಕೊಳ್ಳುತ್ತಾ ಬಂದ ಸುರೇಶ್‌ ರೈನಾ (ಮಾರ್ಚ್ 28ರವರೆಗೆ 5034 ರನ್ ಕಲೆಹಾಕಿದ್ದಾರೆ) ಹತ್ತಿರಕ್ಕೆ ಈಗಾಗಲೇ ವಿರಾಟ್ ಕೊಹ್ಲಿ (5000 ರನ್, ಮಾರ್ಚ್‌ 28ರ ವರೆಗೆ) ಬಂದುಬಿಟ್ಟಿದ್ದಾರೆ. ರೋಹಿತ್ ಶರ್ಮ ಇವರಿಬ್ಬರಿಗಿಂತ ಐನೂರು ಚಿಲ್ಲರೆ ರನ್‌ಗಳಷ್ಟು ಹಿಂದೆ ಇದ್ದರೆ, ಗಂಭೀರ್‌, ಉತ್ತಮ ನಂತರದ ಸ್ಥಾನದಲ್ಲಿ ನಗುತ್ತಿದ್ದಾರೆ.

ಕ್ರಿಸ್‌ ಗೇಲ್‌

ಬೌಂಡರಿ, ಸಿಕ್ಸರ್‌, ಒಟ್ಟಾರೆ ರನ್‌ ಗಳಿಕೆಯ ಯಾದಿಗಳಲ್ಲಿ ಜೋರಾಗಿಯೇ ಮಿಂಚುತ್ತಿರುವ ಭಾರತದ ಬ್ಯಾಟ್ಸ್‌ಮನ್‌ಗಳು ಇನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ ಗಳಿಸುವುದರಲ್ಲಿ ಮಾತ್ರ ಹಿಂದುಳಿದಿದ್ದಾರೆ. ಬ್ರೆಂಡನ್ ಮೆಕ್ಲಮ್ (ಔಟಾಗದೆ 158), ಡಿವಿಲಿಯರ್ಸ್ (ಔಟಾಗದೆ 133, ಔಟಾಗದೆ 129), ಕ್ರಿಸ್‌ ಗೇಲ್‌ (ಔಟಾಗದೆ 128) ಹೆಸರಲ್ಲೇ ‘ಪಂದ್ಯವೊಂದರಲ್ಲಿ ಗಳಿಸಿದ ದೊಡ್ಡ ವೈಯಕ್ತಿಕ ಮೊತ್ತ’ಗಳಿದ್ದವು. ಈ ಪಟ್ಟಿಗೆ ರಿಷಭ್ ಪಂತ್ (ಔಟಾಗದೆ 128) ಕಳೆದ ವರ್ಷದ ಐಪಿಎಲ್‌ನಲ್ಲೇ ಸೇರುವ ಮೂಲಕ ಸಂಚಲನ ಮೂಡಿಸಿದರು. ಈ ಬಾರಿ ಮುಂಬೈ ಇಂಡಿಯನ್ಸ್‌ ಎದುರು ಬರೀ 28 ಎಸೆತಗಳಲ್ಲಿ ಅವರು ಹೊಡೆದ 78 ಕಂಡೇ ಯುವಿ ‘ಅಬ್ಬಾ’ ಎಂಬ ಉದ್ಗಾರ ತೆಗೆದದ್ದು.

ಸ್ಟ್ರೈಕ್‌ ರೇಟ್‌ ಕಡೆಗೆ ನೋಡಿದರೆ ಕಾಣುವ ಆಟಗಾರರ ಗೊಂಚಲೇ ಬೇರೆ. ಅಲ್ಲಿಯೂ ರಿಷಭ್ ಇದ್ದಾರೆನ್ನುವುದು ಮಿಂಚು ದೊಡ್ಡದಾಗುತ್ತಿರುವುದರ ಸೂಚನೆಯಷ್ಟೆ. ಆಂಡ್ರೂ ರಸೆಲ್‌ ಸ್ಟ್ರೈಕ್‌ ರೇಟ್‌ 183.45ರಷ್ಟಿದೆ. ಸುನೀಲ್ ನರೇನ್‌ 171.12ರಲ್ಲಿದ್ದು, ವಿಂಡೀಸ್‌ ಭುಜಬಲ ಪರಾಕ್ರಮಿಗಳಿಗೆ ಪರಾಕು ಯಾಕೆ ಸಲ್ಲಬೇಕು ಎನ್ನುವುದನ್ನು ಸಾರಿದ್ದಾರೆ. ಒಬ್ಬ ಬೌಲರ್‌ ಆಗಿ ಕಾಲಿಟ್ಟ ನರೇನ್‌ ಬ್ಯಾಟಿಂಗ್‌ನಲ್ಲೂ ಹೇಗೆ ಹೊಳೆದರೆನ್ನುವುದನ್ನು ಐಪಿಎಲ್‌ ಅಭಿಮಾನಿಗಳೆಲ್ಲ ಚೆನ್ನಾಗಿಯೇ

ಆಂಡ್ರೂ ರಸೆಲ್‌

ಬಲ್ಲರು. ಮೂರನೇ ಸ್ಥಾನದಲ್ಲಿ ರಿಷಭ್ 167.41ರ ಸ್ಟ್ರೈಕ್‌ರೇಟ್‌ನಲ್ಲಿ ನಿಂತಿದ್ದಾರೆ. ಎದುರಾಳಿ ಬೌಲರ್‌ಗಳು ನಿದ್ದೆಗೆಡಲು ಬೇಕಾದ ಕೂರಂಬು ಇದು. ಸ್ಟ್ರೈಕ್‌ ರೇಟ್‌ ವಿಷಯದಲ್ಲಿ ಆನಂತರದ ಸ್ಥಾನಗಳಲ್ಲಿ ಇರುವ ಕ್ರಿಸ್‌ ಮಾರಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ವೀರೇಂದ್ರ ಸೆಹ್ವಾಗ್ (ಇವರ ಸ್ಟ್ರೈಕ್‌ ರೇಟ್‌ 155.44) ಎಲ್ಲರದ್ದೂ ಅಸಾಂಪ್ರದಾಯಿಕ ಶೈಲಿಯೇ.

ಐಪಿಎಲ್‌ ಬ್ಯಾಟ್ಸ್‌ಮನ್‌ಗಳ ಹಾವು–ಏಣಿ ಆಟ ಹೇಗಿರುತ್ತದೆನ್ನುವುದಕ್ಕೆ ಈ ಅಂಕಿಅಂಶಗಳ ಸೂಕ್ಷ್ಮ ಅವಲೋಕನವೇ ಉತ್ತರ ಕೊಟ್ಟೀತು. ಆದರೆ, ಬೌಲರ್‌ಗಳ ಅಂಕಿಅಂಶ ಹೇಳುವ ಸತ್ಯಗಳೇ ಬೇರೆ. ಮಲಿಂಗ ಇದುವರೆಗಿನ ಐಪಿಎಲ್‌ ಪಂದ್ಯಗಳೆಲ್ಲದರಿಂದ 154 ವಿಕೆಟ್‌ಗಳನ್ನು (ಮಾರ್ಚ್‌ 28ರವರೆಗೆ) ಪಡೆದುಕೊಂಡಿದ್ದಾರೆ. ಅಮಿತ್‌ ಮಿಶ್ರ (148), ಪಿಯೂಷ್ ಚಾವ್ಲಾ (142), ಡ್ವೇನ್‌ ಬ್ರಾವೊ (140), ಹರಭಜನ್‌ ಸಿಂಗ್ (137) ನಂತರದ ಸ್ಥಾನದಲ್ಲಿದ್ದಾರೆ. ಇವರೆಲ್ಲರೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವ ಪಡೆದುಕೊಂಡು ಬಂದಮೇಲೆ ಐಪಿಎಲ್‌ನಲ್ಲೂ ಗಮನ ಸೆಳೆಯುತ್ತಿರುವವರು. 2008ರಲ್ಲಿ ರಾಜಸ್ಥಾನ ರಾಯಲ್ಸ್‌ ಪ್ರತಿನಿಧಿಸಿದ ಸೊಹೇಲ್‌ ತನ್ವೀರ್‌ ‘ಚೆನ್ನೈ ಸೂಪರ್‌ಕಿಂಗ್ಸ್‌’ ಎದುರಿನ ಒಂದು ಪಂದ್ಯದಲ್ಲಿ 4 ಓವರ್‌ಗಳಲ್ಲಿ 14 ರನ್‌ ಕೊಟ್ಟು 6 ವಿಕೆಟ್‌ ಪಡೆದಿದ್ದರು. ಪಾಕಿಸ್ತಾನದ ಆ ಆಟಗಾರನ ಈ ‘ಬೆಸ್ಟ್‌ ಬೌಲಿಂಗ್‌ ಇನ್‌ ಆ್ಯನ್‌ ಇನಿಂಗ್ಸ್‌’ ಎಂಬ ಸಾಧನೆಯನ್ನು ದಶಕ ಕಳೆದರೂ ಅಳಿಸಲು ಬೇರೆ ಯಾರಿಗೂ ಆಗಿಲ್ಲ. ಆಸ್ಟ್ರೇಲಿಯಾದ ಆ್ಯಡಂ ಜಂಪಾ ಕೂಡ 2016ರ ಪಂದ್ಯವೊಂದರಲ್ಲಿ 6 ವಿಕೆಟ್ ಪಡೆದರಾದರೂ ಅವರು ಸೊಹೇಲ್‌ಗಿಂತ ಇನ್ನೂ ನಾಲ್ಕು ರನ್‌ ಹೆಚ್ಚಿಗೆ ಕೊಟ್ಟರು. ಪಂದ್ಯವೊಂದರ ಬೆಸ್ಟ್‌ ಬೌಲಿಂಗ್ ಯಾದಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅನಿಲ್‌ ಕುಂಬ್ಳೆ (3.1 ಓವರ್‌ಗಳಲ್ಲಿ 5 ರನ್ ನೀಡಿ 5 ವಿಕೆಟ್) ರಾಯಲ್‌ ಚಾಲೆಂಜರ್ಸ್‌, ಬೆಂಗಳೂರಿಗೆ ಘನತೆ ತಂದುಕೊಟ್ಟಿದ್ದರು. ಅದು 2009ರ ಸಂದರ್ಭ.

ಹಾಗೆಂದು ಈಗಿನ ಬೌಲರ್‌ಗಳಲ್ಲಿ ಮೊನಚಿಲ್ಲ ಎಂದೇನೂ ಭಾವಿಸಬೇಕಿಲ್ಲ. ಬೂಮ್ರಾ ಐಪಿಎಲ್‌ ಅವಕಾಶವನ್ನು ಸಾಣೆಯಾಗಿಸಿಕೊಂಡಿದ್ದಾರೆ. ಭುವನೇಶ್ವರ್ ಸ್ವಿಂಗ್‌ಗಳು ಪರೀಕ್ಷೆಗೆ ಒಳಗಾಗುತ್ತಿವೆ. ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್‌ ಕೂಡ ಮುಂಗೈಗೆ ಕೆಲಸ ಕೊಡುತ್ತಿದ್ದಾರೆ. ಆಸ್ಟ್ರೇಲಿಯಾದ ಜಂಪಾ ಇಲ್ಲಿನ ಸ್ಪಿನ್‌ಸ್ನೇಹಿ ಪಿಚ್‌ಗಳ ರಸಾಸ್ವಾದ ಅನುಭವಿಸುತ್ತಿದ್ದರೆ, ಹಳೆಯ ಸ್ಪಿನ್‌ ದಿಗ್ಗಜರಾದ ಹರಭಜನ್‌ ಸಿಂಗ್, ಅಮಿತ್ ಮಿಶ್ರ ಕೂಡ ‘ಇನ್ನೂ ನಮ್ಮಲ್ಲಿ ಕಸುವಿದೆ’ ಎಂದು ಪದೇ ಪದೇ ನಗುತ್ತಿದ್ದಾರೆ. ವಿಂಡೀಸ್‌ನ ಬ್ರಾವೋ ಚೆಂಡಿನ ವೇಗವೈವಿಧ್ಯದಿಂದ ಈಗಲೂ ಕಾಡಬಲ್ಲರು.

ವಿರಾಟ್‌ ಕೊಹ್ಲಿ ಅವರೇನೋ ಐಪಿಎಲ್‌ ಆಟ ನೋಡಿಕೊಂಡು ವಿಶ್ವಕಪ್‌ಗೆ ತಂಡ ಆಯ್ಕೆ ಮಾಡುವುದಿಲ್ಲ ಎಂದಿದ್ದಾರೆ. ಆದರೆ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹೆಸರು ಹೇಳಲು ಇಚ್ಛಿಸದ

ಅಧಿಕಾರಿಯೊಬ್ಬರು, ‘ಐಪಿಲ್‌ ಆಟದ ಮೇಲೆ ಆಯ್ಕೆದಾರರು ಒಂದು ಕಣ್ಣಿಟ್ಟೇ ಇಟ್ಟಿರುತ್ತಾರೆ’ ಎಂದಿರುವುದು ವಸ್ತುಸ್ಥಿತಿಯನ್ನು ಬಿಂಬಿಸುತ್ತದೆ. ಎಂಎಸ್‌ಕೆ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿಯು ಏಪ್ರಿಲ್‌ ನಡುಘಟ್ಟದಲ್ಲಿ ವಿಶ್ವಕಪ್‌ಗೆ ಸಂಭಾವ್ಯ ಆಟಗಾರರನ್ನು ಆರಿಸುವ ನಿರೀಕ್ಷೆಯಿದೆ. ಹೀಗಾಗಿಯೇ ಈ ಸಲದ ಐಪಿಎಲ್‌ನ ಪೂರ್ವಾರ್ಧದಲ್ಲಿ ಸ್ಪರ್ಧೆ ಏರ್ಪಟ್ಟಿರುವುದು ಖರೆ.

‘ಐಪಿಎಲ್‌ ಆಡುವಾಗ ರಾಜಸ್ಥಾನ ರಾಯಲ್ಸ್‌ ಬಗೆಗೆ ಮಾತ್ರ ನಾನು ಯೋಚಿಸುವೆ. ನನ್ನ ತಲೆಯಲ್ಲಿ ವಿಶ್ವಕಪ್‌ ಆಯ್ಕೆಯ ವಿಷಯ ಸುಳಿಯುವುದಿಲ್ಲ. ಇಲ್ಲಿ ಚೆನ್ನಾಗಿ ಆಡಿದರೆ ಎಂಥವರ ಕಣ್ಣೂ ನಮ್ಮ ಮೇಲೆ ಬಿದ್ದೇ ಬೀಳುವುದಲ್ಲವೇ’ ಎಂಬ ಸಹಜ ಪ್ರಶ್ನೆ ಅಜಿಂಕ್ಯ ರಹಾನೆ ಅವರದ್ದು.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯು ಹೇಡನ್ ಅಂತೂ ನೇರವಾಗಿ ‘ಅಂಬಟಿ ರಾಯುಡು ನನ್ನ ನೆಚ್ಚಿನ ಹುಡುಗ’ ಎಂದು ಕಣ್ಣು ಮಿಟುಕಿಸಿದ್ದಾರೆ. ಅವರ ಪ್ರಕಾರ, ರಾಯುಡು ಇನಿಂಗ್ಸ್‌ ಆರಂಭಿಸಲೂ ಯೋಗ್ಯ. ಇನ್ನೊಂದೆಡೆ ಶ್ರೇಯಸ್ ಅಯ್ಯರ್‌ ಬ್ಯಾಟ್ ತಿರುಗಿಸುತ್ತಾ ತಮ್ಮ ಅದೃಷ್ಟದ ಚಕ್ರ ತಿರುಗೀತೇ ಎಂದು ಚಾತಕಪಕ್ಷಿಯಾಗಿದ್ದಾರೆ.

ಗ್ಲೆನ್‌ ಮ್ಯಾಕ್ಸ್‌ವೆಲ್‌

ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಗಲೀ, ಶೇನ್‌ ವ್ಯಾಟ್ಸನ್‌ ಆಗಲೀ ಆಗೀಗ ಫಾರ್ಮ್ ಕಳೆದುಕೊಂಡು ಮುಖಗಳ ಮೇಲೆ ಸುಕ್ಕು ಮೂಡಿಸಿಕೊಂಡವರೇ. ಅದರಲ್ಲೂ ಮ್ಯಾಕ್ಸ್‌ವೆಲ್‌ ಅಂತೂ ಚುಟುಕು ಕ್ರಿಕೆಟ್‌ನಲ್ಲಿ ಮಿಂಚಿದಷ್ಟು ಉಳಿದ ಮಾದರಿಗಳಲ್ಲಿ ಛಾಪು ಮೂಡಿಸಲೇ ಇಲ್ಲ. ಅವರಿಗೂ ತಮ್ಮ ವಿಶ್ವಕಪ್‌ ಆಯ್ಕೆ ಸಾಧ್ಯಮಾಡಿಕೊಳ್ಳಲು ಐಪಿಎಲ್‌ ಹೊಸ ಮಾರ್ಗ ಎನಿಸಿದೆ. ವಿಶ್ವಕಪ್‌ ಎದುರಲ್ಲಿ ಇರುವಾಗ ಐಪಿಎಲ್‌ನಲ್ಲಿ ಆಡಿ ದಣಿಯುವುದು ಥರವಲ್ಲ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಕೆಲವರು ಬುದ್ಧಿ ಹೇಳಿದರೆ, ಇನ್ನು ಕೆಲವರು, ‘ಆಡಿ ತಪ್ಪುಗಳನ್ನು ತಿದ್ದಿಕೊಳ್ಳಲಿ ಬಿಡಿ’ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ವಿಂಡೀಸರಿಗಂತೂ ಐಪಿಎಲ್‌ ಆಡುಂಬೊಲ.

ಆರ್‌ಸಿಬಿ ತಂಡವನ್ನು ಮೊದಲ ಪಂದ್ಯದಲ್ಲಿ ಕಟ್ಟಿಹಾಕಿ, ತಮ್ಮ ಹಳೆಯ ಶೈಲಿಯಲ್ಲಿ ನಗೆಯುಕ್ಕಿಸಿದ ಹರಭಜನ್‌ ಸಿಂಗ್, ಈಗಲೂ ಸಲೀಸಾಗಿ ಸಿಕ್ಸರ್‌ ಹೊಡೆಯಬಲ್ಲ ಸುರೇಶ್‌ ರೈನಾ, ರೋಗ ಮೀರಿ ಆಟದ ಪುನರುತ್ಥಾನ ಮಾಡಲು ಹೆಣಗಾಡಿ, ಪರದಾಡುತ್ತಲೇ ಇರುವ ಯುವರಾಜ್‌ ಸಿಂಗ್‌ – ಇವರದ್ದು ಇನ್ನೊಂದು ಬಣ. ಒಟ್ಟಿನಲ್ಲಿ ವಿಶ್ವಕಪ್‌ ಕನಸುಗಳಿಗೆ ಐಪಿಎಲ್‌ ಹಾಗೋ ಹೀಗೋ ಹಚ್ಚುತ್ತಿದೆ ರೆಕ್ಕೆ ಪುಕ್ಕ.

ಈ ಸಲ ಕಪ್‌ ನಮ್ದೇ!

2015ರ ವಿಶ್ವಕಪ್‌ಗೆ 15 ಆಟಗಾರರನ್ನು ಆಯ್ಕೆ ಮಾಡಿದಾಗ ಆ ಪೈಕಿ ಐವರು ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ತಂಡದ ಪರವಾಗಿ ಆಡಿದವರೇ ಇದ್ದರು. ಆ ಪಟ್ಟಿ ಪ್ರಕಟವಾಗಿದ್ದೇ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟೀಕಿಸಿದ್ದರು. ಅದು ‘ದೋನಿ ಲಾಬಿ’ ಎನ್ನುವುದು ಅನೇಕರ ಭಾವನೆಯಾಗಿತ್ತು. ಈ ಸಲ ವಿರಾಟ್‌ ಕೊಹ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ. ಆರ್‌ಸಿಬಿ ಚುಕ್ಕಾಣಿಯೂ ಅವರದ್ದೇ. ಕರ್ನಾಟಕದ ಆಟಗಾರರೇ ಇಲ್ಲದ ಈ ತಂಡದಿಂದ ಯಾರು ಆಯ್ಕೆಯಾದರೂ ಅಷ್ಟೇ ಎಂಬ ಉದಾಸೀನದ ಪ್ರತಿಕ್ರಿಯೆಗಳು ಕ್ರಿಕೆಟ್‌ ಪ್ರಿಯರಿಂದ ಕೇಳಿಬರುತ್ತಿವೆ. ಆದರೆ, ಆರ್‌ಸಿಬಿ ಸದಾ ಆಕರ್ಷಕವಾಗಿರುವುದು ಎರಡು ಕಾರಣಗಳಿಂದ. ಒಂದು–ಸಿಕ್ಸರ್‌ ವೀರರಾದ ಗೇಲ್‌, ಡಿವಿಲಿಯರ್ಸ್‌. ಇನ್ನೊಂದು – ‘ಈ ಸಲ ಕಪ್‌ ನಮ್ದೇ’ ಎಂಬ ಈಡಿಯಂ.

‘ಈ ಸಲ ಕಪ್‌ ನಮ್ದೇ’ ಎನ್ನುವುದು ಮೊದಲು ತಂಡದ ಘೋಷವಾಕ್ಯದಂತೆ ಕೇಳಿತು. ಬರಬರುತ್ತಾ ಅದೊಂದು ಹಾಸ್ಯ, ವ್ಯಂಗ್ಯಕ್ಕೆ ದೊರೆತ ದ್ರವ್ಯ ಆಗಿಬಿಟ್ಟಿತು. ‘ಕೆಜಿಎಫ್‌’ ಸಿನಿಮಾದ ಕೆಲವು ದೃಶ್ಯಗಳನ್ನು ಕೊಲಾಜ್‌ ಮಾಡಿ, ಅದಕ್ಕೆ ಡಬ್‌ ಸ್ಮ್ಯಾಷ್‌ ಮಾಡಿ, ‘ಈ ಸಲ ಕಪ್‌ ನಮ್ದೇ’ ಎಂಬ ಆರ್‌ಸಿಬಿ ಧ್ಯೇಯವಾಕ್ಯವನ್ನು ಲೇವಡಿ ಮಾಡಿದ ‘ಮೀಮ್’ ಈಗ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಈ ವಾಕ್ಯ ಬಗೆ ಬಗೆಯ ಹಾಸ್ಯ ರಸಾಯನಕ್ಕೆ ವಸ್ತುವಾಗುತ್ತಿದೆ. ಈ ವಿಷಯದಲ್ಲಿ ಕೊಹ್ಲಿ ಅವರ ಕಾಲೆಳೆಯದವರೂ ಇಲ್ಲ. ಸಮಚಿತ್ತದಿಂದಲೇ ಮನರಂಜನೆಯ ಈ ಪರಿಯನ್ನು ಸ್ವೀಕರಿಸಿರುವಂತೆ ಕಾಣುವ ಭಾರತ ಕ್ರಿಕೆಟ್‌ ತಂಡದ ನಾಯಕ ಕೂಡ ‘ಈ ಸಲ ಕಪ್‌ ನಮ್ದೇ’ ಎಂದು ಮನಸ್ಸಿನಲ್ಲೇ ಗುನುಗಿಕೊಳ್ಳುತ್ತಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.