ADVERTISEMENT

ಮಹಿಳಾ ಟ್ವೆಂಟಿ–20 ಕ್ರಿಕೆಟ್‌: ಕರ್ನಾಟಕಕ್ಕೆ ಭರ್ಜರಿ ಜಯ

ಬಿಸಿಸಿಐ 23 ವರ್ಷದೊಳಗಿನ ಕ್ರಿಕೆಟ್‌ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 19:45 IST
Last Updated 16 ನವೆಂಬರ್ 2019, 19:45 IST
ಶುಭಾ ಸತೀಶ್‌
ಶುಭಾ ಸತೀಶ್‌   

ಬೆಂಗಳೂರು: ಶುಭಾ ಸತೀಶ್‌ ಅರ್ಧಶತಕ ಗಳಿಸಿ ಮಿಂಚಿದರು. ಮೋನಿಕಾ ಪಟೇಲ್‌ ಬೌಲಿಂಗ್‌ನಲ್ಲಿ ಮಿನುಗಿದರು. ಇವರಿಬ್ಬರ ಆಟದ ಬಲದಿಂದ ಕರ್ನಾಟಕ ಮಹಿಳಾ ತಂಡ ಬಿಸಿಸಿಐ 23 ವರ್ಷದೊಳಗಿನವರ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಎದುರು 138 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತಂಡಕ್ಕೆ ಶುಭಾ (60, 44 ಎಸೆತ, 9 ಬೌಂಡರಿ) ಹಾಗೂ ಪ್ರತ್ಯೂಷಾ ಕುಮಾರ್‌ (22, 2 ಬೌಂಡರಿ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 53 ರನ್‌ ಸೇರಿಸಿ ಭದ್ರಬುನಾದಿ ಹಾಕಿದರು. ಪ್ರತ್ಯೂಷಾ ಔಟಾದ ಬಳಿಕ ಬಂದ ಸಂಜನಾ ಹರೀಶ್‌ ಬಾಟ್ನಿ (40, 5 ಬೌಂಡರಿ) ಕೂಡ ಉತ್ತಮ ಆಟವಾಡಿದರು. ನಿಗದಿತ 20 ಓವರ್‌ಗಳು ಕೊನೆಗೊಂಡಾದ ರಾಜ್ಯ ತಂಡ 4 ವಿಕೆಟ್‌ ಕಳೆದುಕೊಂಡು 173 ರನ್‌ ಗಳಿಸಿತು. ಕಾಶ್ಮೀರ ಪರ ನಾಡಿಯಾ ಚೌಧರಿ ಮೂರು ವಿಕೆಟ್‌ ಕಿತ್ತರು.

ಗುರಿ ಬೆನ್ನತ್ತಿದ ಕಣಿವೆ ರಾಜ್ಯದ ತಂಡ, ಆತಿಥೇಯ ತಂಡದ ಬೌಲಿಂಗ್‌ ದಾಳಿಗೆ ನಲುಗಿತು. ಯಾವ ಬ್ಯಾಟ್ಸ್‌ವುಮೆನ್‌ ಎರಡಂಕಿ ಮೊತ್ತ ಕೂಡ ತಲುಪಲಿಲ್ಲ. ಸೋನಿಕಾ ರೈನಾ (ಔಟಾಗದೆ 9) ಗಳಿಸಿದ್ದೇ ಗರಿಷ್ಠ ವೈಯಕ್ತಿಕ ಸ್ಕೋರ್‌. ಕರ್ನಾಟಕ ಇತರೆ ರೂಪದಲ್ಲಿ ನೀಡಿದ್ದೂ 9 ರನ್‌! ಕರ್ನಾಟಕದ ಮೋನಿಕಾ ಪಟೇಲ್‌ ಕೇವಲ 2 ರನ್‌ ನೀಡಿ 5 ವಿಕೆಟ್‌ ಕಿತ್ತರು. 20 ಓವರುಗಳನ್ನು ಆಡಿದ ಕಾಶ್ಮೀರ ತಂಡ ಎಂಟು ವಿಕೆಟ್‌ ಒಪ್ಪಿಸಿ ಕೇವಲ 35 ರನ್‌ ಗಳಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 173 (ಶುಭಾ ಸತೀಶ್‌ 60, ಸಂಜನಾ ಬಾಟ್ನಿ 40, ಪ್ರತ್ಯೂಷಾ ಕುಮಾರ್‌ 22; ನಾಡಿಯಾ ಚೌಧರಿ 22ಕ್ಕೆ 3), ಜಮ್ಮು ಮತ್ತು ಕಾಶ್ಮೀರ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 35 (ಸೋನಿಕಾ ರೈನಾ ಔಟಾಗದೆ 9; ಮೋನಿಕಾ ಪಟೇಲ್‌ 2ಕ್ಕೆ 5)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.