ADVERTISEMENT

ಐಪಿಎಲ್‌ ಪಂದ್ಯಗಳಲ್ಲೂ ‘ಫಿಕ್ಸಿಂಗ್‌’?

ಕೆಪಿಎಲ್‌ ಬೆಟ್ಟಿಂಗ್‌: ಅಭಿಮನ್ಯು ಮಿಥುನ್‌ಗೆ ನೋಟಿಸ್‌ ನೀಡಿದ ಸಿಸಿಬಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 18:54 IST
Last Updated 28 ನವೆಂಬರ್ 2019, 18:54 IST

ಬೆಂಗಳೂರು/ ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್‌ ಟೂರ್ನಿಯ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರಿಗೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲೂ ಬೆಟ್ಟಿಂಗ್‌ ನಡೆದಿರುವ ವಾಸನೆ ಬಡಿದಿದೆ.

ಕೆಪಿಎಲ್ ತಂಡಗಳ ಮಾಲೀಕರು ಮತ್ತು ಕೆಲವು ಪ್ರಮುಖ ಆಟಗಾರರರ ವಿಚಾರಣೆ ವೇಳೆ, ಮ್ಯಾಚ್‌ ಫಿಕ್ಸಿಂಗ್‌ ಜಾಲ ಐಪಿಎಲ್‌ನ ಕೆಲವು ಪಂದ್ಯಗಳಿಗೂ ವಿಸ್ತರಿಸಿರುವ ಮಾಹಿತಿಗಳು ಸಿಕ್ಕಿವೆ ಎನ್ನಲಾಗಿದೆ.

ಈ ಮಧ್ಯೆ, ವಿಚಾರಣೆಗೆ ಹಾಜರಾಗುವಂತೆ ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಅಭಿಮನ್ಯು ಮಿಥುನ್‌ ಸೇರಿದಂತೆ ಹಲವು ಆಟಗಾರರಿಗೆ ಸಿಸಿಬಿ ನೋಟಿಸ್‌ ನೀಡಿದೆ. ಅಭಿಮನ್ಯು ಮಿಥುನ್‌ ಅವರು ಶಿವಮೊಗ್ಗ ಲಯನ್ಸ್‌ ತಂಡದ ನಾಯಕ.

ADVERTISEMENT

ಕೆಪಿಎಲ್‌ ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿದ ಈಗಾಗಲೇ ನಾಲ್ವರು ಆಟಗಾರರು ಸೇರಿ ಒಟ್ಟು ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೀಘ್ರದಲ್ಲೇ ಇನ್ನೂ ಕೆಲವರ ಬಂಧನವಾಗುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ (ಕೆಎಸ್‌ಸಿಎ) ಮತ್ತು ಕೆಪಿಎಲ್‌ನಲ್ಲಿ ಆಡಿರುವ ಎಲ್ಲ ತಂಡಗಳ ಮಾಲೀಕರಿಗೆ ಸಿಸಿಬಿ ಈ ಹಿಂದೆಯೇ ನೋಟಿಸ್‌ ನೀಡಿತ್ತು. ಇದೀಗ, ಆಟಗಾರರ ಹಾಗೂ ತಂಡದ ಸಿಬ್ಬಂದಿಯ ಸಾಮಾಜಿಕ ಜಾಲತಾಣ ಖಾತೆಗಳ ಬಗ್ಗೆಯೂ ಮಾಹಿತಿ ನೀಡುವಂತೆ ಎಲ್ಲ ಫ್ರಾಂಚೈಸ್‌ಗಳಿಗೆ ಮತ್ತೊಮ್ಮೆ ನೋಟಿಸ್‌ ನೀಡಲಾಗಿದೆ.

ತಮ್ಮ ತಂಡದಲ್ಲಿ ಆಡುತ್ತಿರುವ ಆಟಗಾರರ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಬಗ್ಗೆ ಮಾಹಿತಿ ಕೊಡಬೇಕು. ಪಾಸ್‌ಪೋರ್ಟ್‌ ಹಾಗೂ ಪಾನ್‌ ಕಾರ್ಡ್ ಬಗ್ಗೆಯೂ ತುರ್ತಾಗಿ ವಿವರ ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ತನಿಖಾಧಿಕಾರಿ ಸೂಚಿಸಿದ್ದಾರೆ.

2018 ಹಾಗೂ 2019ರ ಕೆಪಿಎಲ್‌ ಟೂರ್ನಿಗಳ ವೇಳೆ ಆಟಗಾರರಿಗೆ ಎಲ್ಲಿ ಔತಣ ಕೂಟಗಳನ್ನು ಏರ್ಪಡಿಸಲಾಗಿತ್ತು, ಔತಣ ಕೂಟ ಏರ್ಪಡಿಸಿದ್ದು ಯಾರು ಎಂಬ ಮಾಹಿತಿ ನೀಡಬೇಕು. ಆ ಕೂಟದ ಸಂಪೂರ್ಣ ವಿಡಿಯೊ ನೀಡಬೇಕು. ಪ್ರತಿ ತಂಡ 18 ಜನ ಆಟಗಾರರನ್ನು ಹರಾಜಿನ ಮೂಲಕ ಖರೀದಿ ಮಾಡಿದ್ದು, ಅವರನ್ನು ಹೊರತುಪಡಿಸಿ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೆ ಅವರ ಬಗ್ಗೆಯೂ ಮಾಹಿತಿ ಕೊಡಬೇಕು. ಹಿಂದಿನ ಎರಡು ಟೂರ್ನಿಗಳ ವೇಳೆ ಆಟಗಾರರು ತಂಗಿದ್ದ ಹೋಟೆಲ್‌, ಅವರ ಖರ್ಚುವೆಚ್ಚಗಳನ್ನು ನೋಡಿಕೊಂಡವರು ಹಾಗೂ ಆದ ವೆಚ್ಚದ ಬಗ್ಗೆಯೂ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಕೆಪಿಎಲ್‌ ಟೂರ್ನಿಯಿಂದ ತಮ್ಮ ತಂಡಕ್ಕೆ ಬಂದ ಆದಾಯ ಎಷ್ಟು ಎಂಬುದರ ಲೆಕ್ಕ ನೀಡುವಂತೆಯೂ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.