ADVERTISEMENT

ಕೋಚ್‌ ಸುಧೀರ್ ಶಿಂಧೆ ಬಂಧನ

* ಕ್ರಿಕೆಟ್ ಮ್ಯಾಚ್‌ ಫಿಕ್ಸಿಂಗ್‌ಗೆ ಸಹಾಯ ಮಾಡಿದ್ದ ಆರೋಪ * ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 6:28 IST
Last Updated 4 ಡಿಸೆಂಬರ್ 2019, 6:28 IST
ಸುಧೀಂದ್ರ ಶಿಂಧೆ
ಸುಧೀಂದ್ರ ಶಿಂಧೆ   

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಕ್ರಿಕೆಟ್‌ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ‘ಬೆಳಗಾವಿ ಪ್ಯಾಂಥರ್ಸ್’ ತಂಡದ ಕೋಚ್ ಸುಧೀಂದ್ರ ಶಿಂಧೆ ಅವರನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ದೊಮ್ಮಲೂರು ಮುಖ್ಯ ರಸ್ತೆಯಲ್ಲಿರುವ ಶಿಂಧೆ ಅವರ ಮನೆಯ ಮೇಲೆ ಸೋಮವಾರವಷ್ಟೇ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು.

‘ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಆರೋಪಿಗಳು ತಮ್ಮ ಹೇಳಿಕೆಯಲ್ಲಿ ಸುಧೀಂದ್ರ ಶಿಂಧೆ ಹೆಸರು ಪ್ರಸ್ತಾಪಿಸಿದ್ದರು. ಅದನ್ನು ಆಧರಿಸಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಬಂದಿರಲಿಲ್ಲ. ಇದೀಗ ಅವರನ್ನು ಬಂಧಿಸಲಾಗಿದ್ದು, ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಮ್ಯಾಚ್‌ ಫಿಕ್ಸಿಂಗ್‌ಗೆ ಸಹಾಯ: ‘ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿ ‘ಬೆಳಗಾವಿ ಪ್ಯಾಂಥರ್ಸ್’ ತಂಡದ ಮಾಲೀಕ ಅಲಿ ಅಶ್ಫಕ್ ತಾರ್ ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಮ್ಯಾಚ್ ಫಿಕ್ಸಿಂಗ್ ಮಾಡಲು ಶಿಂಧೆ ಸಹಾಯ ಮಾಡಿದ್ದರು ಎಂಬ ಸಂಗತಿಯನ್ನು ಅವರೇ ಬಾಯ್ಬಿಟ್ಟಿದ್ದರು’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಆಡಳಿತ ಮಂಡಳಿ ಸದಸ್ಯರೂ ಆಗಿರುವ ಶಿಂಧೆ ಹಲವು ಆಟಗಾರರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಮ್ಯಾಚ್‌ ಫಿಕ್ಸಿಂಗ್‌ಗೆ ಆಟಗಾರರನ್ನು ಸೆಳೆಯಲು ಯತ್ನಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಕೆಲ ಆಟಗಾರರಿಂದ ಹೇಳಿಕೆ ಪಡೆಯಲಾಗಿದ್ದು, ಇನ್ನು ಕೆಲವರಿಂದ ಹೇಳಿಕೆ ಪಡೆಯುವುದು ಬಾಕಿ ಇದೆ’ ಎಂದರು.

‘ಪ್ರಕರಣದಲ್ಲಿ ಶಿಂಧೆ ಪಾತ್ರವೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿತ್ತು. ನೋಟಿಸ್‌ ನೀಡಿದರೂ ಶಿಂಧೆ ಅವರು ವಿಚಾರಣೆಗೆ ಬಾರದಿದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಮನೆ ಮೇಲೆ ದಾಳಿ ನಡೆಸಬೇಕಾಯಿತು. ದಾಳಿ ಸಂದರ್ಭದಲ್ಲೇ ಕೆಲವು ದಾಖಲೆಗಳು ಸಿಕ್ಕವು. ಅವುಗಳನ್ನೇ ಪುರಾವೆಯನ್ನಾಗಿ ಪರಿಗಣಿಸಿ ಅವರನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.