ADVERTISEMENT

ಶ್ರೇಯಸ್ ಗೋಪಾಲ್ ಶತಕ ಸೊಬಗು

ರಣಜಿ ಕ್ರಿಕೆಟ್‌: ಕರ್ನಾಟಕಕ್ಕೆ 358 ರನ್‌ಗಳ ಮುನ್ನಡೆ; ನಾಲ್ವರ ಅರ್ಧಶತಕ

ಗಿರೀಶದೊಡ್ಡಮನಿ
Published 1 ಫೆಬ್ರುವರಿ 2023, 20:09 IST
Last Updated 1 ಫೆಬ್ರುವರಿ 2023, 20:09 IST
ಕರ್ನಾಟಕದ ಶ್ರೇಯಸ್ ಗೋಪಾಲ್ ಶತಕ ಸಂಭ್ರಮ –ಪ್ರಶಾಂತ್ ಎಚ್‌.ಜಿ.
ಕರ್ನಾಟಕದ ಶ್ರೇಯಸ್ ಗೋಪಾಲ್ ಶತಕ ಸಂಭ್ರಮ –ಪ್ರಶಾಂತ್ ಎಚ್‌.ಜಿ.   

ಬೆಂಗಳೂರು: ಕರ್ನಾಟಕದ ಆರಂಭಿಕ ಬ್ಯಾಟಿಂಗ್ ಜೋಡಿ ಆರ್. ಸಮರ್ಥ್ ಮತ್ತು ಮಯಂಕ್ ಅಗರವಾಲ್ ಅವರು ತಮ್ಮ ಶತಕದ ಸನಿಹ ಎಡವಿದರು. ದೇವದತ್ತ ಪಡಿಕ್ಕಲ್ ಮತ್ತು ನಿಕಿನ್ ಜೋಸ್ ತಮ್ಮ ಅರ್ಧಶತಕಗಳನ್ನು ಮೂರಂಕಿಯಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಆದರೆ, ಆರನೇ ಕ್ರಮಾಂಕದ ಬ್ಯಾಟರ್‌ ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 103; 153ಎ, 4X13, 6X1) ಅವರಿಗೆ ಶತಕ ದಾಖಲಿಸುವ ಅದೃಷ್ಟ ಒಲಿಯಿತು. ಈ ಎಲ್ಲ ಬ್ಯಾಟರ್‌ಗಳ ಆಟವನ್ನು ಕಡಿವಾಣ ಹಾಕುವ ಉತ್ತರಾಖಂಡದ ಪ್ರಯತ್ನಗಳು ಫಲ ನೀಡಲಿಲ್ಲ. ಸತ್ವವಿಲ್ಲದ ಬೌಲಿಂಗ್‌ಗೆ ದಂಡ ತೆರಬೇಕಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ ಮೇಲೆ ಕರ್ನಾಟಕ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲ ದಿನವಾದ ಮಂಗಳವಾರ ಮೊದಲ ಇನಿಂಗ್ಸ್‌ನಲ್ಲಿ ಏಳು ರನ್‌ಗಳ ಮುನ್ನಡೆ ಪಡೆದಿತ್ತು. ಬುಧವಾರ ದಿನದಾಟದ ಕೊನೆಗೆ ಮುನ್ನಡೆಯು 358 ರನ್‌ಗಳಿಗೇರಿತು. ತಂಡವು 116 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 474 ರನ್ ಗಳಿಸಿತು. ಶ್ರೇಯಸ್ ಹಾಗೂ ಬಿ.ಆರ್. ಶರತ್ (ಬ್ಯಾಟಿಂಗ್ 23) ಕ್ರೀಸ್‌ನಲ್ಲಿದ್ದಾರೆ. ಪಂದ್ಯದಲ್ಲಿ ಇನ್ನೂ ಮೂರು ದಿನಗಳ ಆಟ ಬಾಕಿ ಇದೆ.

ADVERTISEMENT

ಮೊದಲ ದಿನದಂದು ಉತ್ತರಾಖಂಡ ತಂಡವು ಮೊದಲು ಬ್ಯಾಟ್ ಮಾಡಿತ್ತು. ವೆಂಕಟೇಶ್ ದಾಳಿಗೆ ತತ್ತರಿಸಿದ್ದ ಉತ್ತರಾಖಂಡವು 116 ರನ್‌ಗಳಿಗೆ ಆಲೌಟ್ ಆಗಿತ್ತು. ಅದೇ ದಿನದಾಟದ ಅಂತ್ಯಕ್ಕೆ ಈ ಮೊತ್ತ ಚುಕ್ತಾ ಮಾಡಿದ್ದ ಆತಿಥೇಯ ನಾಯಕ ಮಯಂಕ್ ಮತ್ತು ಸಮರ್ಥ್ ಕ್ರೀಸ್‌ನಲ್ಲಿ ಉಳಿದಿದ್ದರು.

ಆದರೆ ಬುಧವಾರ ಮಯಂಕ್ (83; 109ಎ) ಹಾಗೂ ಆರ್. ಸಮರ್ಥ್ (82; 108ಎ) ಅವಸರಪಟ್ಟು ಔಟಾದರು. ಎರಡೂ ವಿಕೆಟ್‌ಗಳನ್ನು ಅಭಯ್ ನೇಗಿ ಕಬಳಿಸಿದರು. ಇವರಿಬ್ಬರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 159 ರನ್ ಸೇರಿಸಿದರು.

ಆದರೆ ಈ ದಿನದ ಆಟದಲ್ಲಿ ಶತಕ ಗಳಿಸುವ ಭರವಸೆಯನ್ನು ಹೆಚ್ಚು ಮೂಡಿಸಿದ್ದ ಆಟಗಾರ ನಿಕಿನ್ ಜೋಸ್‌ಗೆ ಮತ್ತೆ ಅದೃಷ್ಟ ಕೈಕೊಟ್ಟಿತು. ತಮಗಿಂತಲೂ ಮೊದಲೇ ಕ್ರೀಸ್‌ಗೆ ಬಂದಿದ್ದ ದೇವದತ್ತ ಪಡಿಕ್ಕಲ್‌ಗಿಂತಲೂ ವೇಗವಾಗಿ ಅರ್ಧಶತಕ ದಾಟಿದ ನಿಕಿನ್ ಭೋಜನ ವಿರಾಮದ ನಂತರ ಔಟಾದರು. ಕೆಲಹೊತ್ತಿನ ನಂತರ 69 ರನ್‌ ಗಳಿಸಿದ್ದ ದೇವದತ್ತ ಕೂಡ ಪೆವಿಲಿಯನ್ ಸೇರಿದರು.

ಮನೀಷ್ ಪಾಂಡೆ ಜೊತೆಗೂಡಿದ ಶ್ರೇಯಸ್ ಚೆಂದದ ಬ್ಯಾಟಿಂಗ್ ಮಾಡಿದರು. ತಂಡದ ಮುಖ್ಯ ಸ್ಪಿನ್ ಬೌಲರ್ ಆಗಿರುವ ಶ್ರೇಯಸ್ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್‌ನಲ್ಲಿಯೇ ಹೆಚ್ಚು ಮಿಂಚಿದ್ದಾರೆ.

ಕಳೆದ ತಿಂಗಳು ಅವರು ರಾಜಸ್ಥಾನ ಎದುರಿನ ಪಂದ್ಯದಲ್ಲಿ 95 ರನ್ ಗಳಿಸಿದ್ದರು. ಆದರೆ ಇಲ್ಲಿ ದಿನದಾಟದ ಕೊನೆಯ ಎಸೆತದಲ್ಲಿ ಶತಕ ಪೂರೈಸಿದರು. ಚೆಂಡನ್ನು ಬೌಂಡರಿಗೆ ಡ್ರೈವ್ ಮಾಡಿದ ಅವರು ಹೆಲ್ಮೆಟ್ ತೆಗೆದು ಬ್ಯಾಟ್ ಎತ್ತಿ ಸಂಭ್ರಮಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರ ಐದನೇ ಶತಕ.
ಶ್ರೇಯಸ್‌ ಅವರು ನುರಿತ ಬ್ಯಾಟರ್‌ ನಂತೆ ಸ್ವೀಪ್, ಡ್ರೈವ್ ಮತ್ತು ಕಟ್‌ಗಳನ್ನು
ಆಡಿದರು.

’ತಂಡಕ್ಕೆ ಕಾಣಿಕೆ ನೀಡುವುದು ಸಂತಸದ ವಿಷಯ. ಬ್ಯಾಟಿಂಗ್‌ನಲ್ಲಿ ಪರಿಣತಿ ಗಳಿಸಲು ಹೆಚ್ಚು ಅಭ್ಯಾಸ ಮಾಡಿರುವೆ. ಅದರ ಫಲ ಈಗ ಲಭಿಸಿದೆ‘ ಎಂದು ಶ್ರೇಯಸ್ ಪಂದ್ಯದ ನಂತರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.