ADVERTISEMENT

ಕೋವಿಡ್ ಭೀತಿ | ದ.ಆಫ್ರಿಕಾದಲ್ಲಿ ಮುಂದಿನ 60 ದಿನ ಕ್ರಿಕೆಟ್ ಚಟುವಟಿಕೆಗಳು ಬಂದ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 8:39 IST
Last Updated 17 ಮಾರ್ಚ್ 2020, 8:39 IST
ಸೋಮವಾರ ಕೋಲ್ಕತ್ತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಆಟಗಾರರು. –ಪಿಟಿಐ ಚಿತ್ರ
ಸೋಮವಾರ ಕೋಲ್ಕತ್ತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಆಟಗಾರರು. –ಪಿಟಿಐ ಚಿತ್ರ   

ಜೋಹಾನ್ಸ್‌ಬರ್ಗ್‌:ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕೋವಿಡ್‌–19 ಭೀತಿಯಿಂದಾಗಿ ಮುಂದಿನ 60 ದಿನಗಳ ವರೆಗೆ ಕ್ರಿಕೆಟ್ ಚಟುವಟಿಕೆಗಳನ್ನು ನಿಲ್ಲಿಸುವುದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಕ್ರಿಕೆಟ್‌ ಸೌತ್‌ ಆಫ್ರಿಕಾ (ಸಿಎಸ್‌ಎ) ಪ್ರಕಟಿಸಿದೆ.

ಸಿಎಸ್‌ಎ ಮುಖ್ಯಸ್ಥ ಸಿರಿಲ್‌ ರಾಮಾಫೋಸ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿದೇಶದ ಎರಡು ಪ್ರಮುಖ ದೇಶಿ ಕ್ರಿಕೆಟ್‌ ಟೂರ್ನಿಗಳಾದ ಫ್ರಾಂಚೈಸ್‌ ಏಕದಿನ ಕಪ್‌ ಟೂರ್ನಿ ಹಾಗೂ ನಾಲ್ಕು ದಿನಗಳ ಫ್ರಾಂಚೈಸ್‌ ಟೂರ್ನಿಅರ್ಧಕ್ಕೆ ನಿಲ್ಲಲಿವೆ.

ನಿರ್ಧಾರ ಕುರಿತು ಸಿಎಸ್‌ಎ ಸಿಇಒ ಜಾಕ್ಯೂಸ್‌ ಫೌಲ್‌ ಮಾತನಾಡಿದ್ದು, ‘ಸದ್ಯದ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೋವಿಡ್‌–19 ಅನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದಿದ್ದಾರೆ.

ADVERTISEMENT

ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಕ್ವಿಂಟನ್‌ ಡಿ ಕಾಕ್‌ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದಿಳಿದಿತ್ತು. ಧರ್ಮಶಾಲಾದಲ್ಲಿ ಆಯೋಜನೆಯಾಗಿದ್ದ ಮೊದಲ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಅದಾದ ಬಳಿಕ ಆಟಗಾರರು ಎರಡನೇ ಪಂದ್ಯದ ಸಲುವಾಗಿ ಲಖನೌಗೆ ತೆರಳಿದ್ದರು.ಆದರೆ, ಕೊರೊನಾ ವೈರಸ್‌ ಭೀತಿಯಿಂದಾಗಿ ಟೂರ್ನಿಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಆಟಗಾರರು ಸೋಮವಾರ ಕೋಲ್ಕತ್ತಕ್ಕೆ ಆಗಮಿಸಿದ್ದಾರೆ.

ಇಂದು ಕೋಲ್ಕತ್ತದಿಂದ ದುಬೈಗೆ ತೆರಳಲಿರುವ ಈ ತಂಡ, ಅಲ್ಲಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿದೆ.

ಆಫ್ರಿಕನ್ನರು ಲಖನೌದಿಂದ ದೆಹಲಿ ಮಾರ್ಗವಾಗಿ ತವರಿಗೆ ಹೋಗಬೇಕಿತ್ತು. ಕೋಲ್ಕತ್ತದಲ್ಲಿ ಇದುವರೆಗೆ ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಈ ನಗರವನ್ನು ಸುರಕ್ಷಿತ ತಾಣವೆಂದು ಆಯ್ಕೆ ಮಾಡಿಕೊಂಡಿತ್ತು.

ಜಗತ್ತಿನಾದ್ಯಂತ ಸುಮಾರು 1.7 ಲಕ್ಷ ಜನರಲ್ಲಿಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ 7,174 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.ಭಾರತದಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದು, 127 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.