ADVERTISEMENT

ಸೋಲಿನಿಂದ ಪಾರಾದ ದಕ್ಷಿಣ ಆಫ್ರಿಕಾ

ಕ್ರಿಕೆಟ್‌: ಅಂತಿಮ ಟೆಸ್ಟ್‌ ಡ್ರಾ; ಸರಣಿ ಗೆದ್ದ ಆಸ್ಟ್ರೇಲಿಯಾ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 10:53 IST
Last Updated 8 ಜನವರಿ 2023, 10:53 IST
ಸರಣಿ ಗೆದ್ದ ಆಸ್ಟ್ರೇಲಿಯಾದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಸರಣಿ ಗೆದ್ದ ಆಸ್ಟ್ರೇಲಿಯಾದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಸಿಡ್ನಿ : ಆಸ್ಟ್ರೇಲಿಯಾ ವಿರುದ್ದದ ಮೂರನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡ ದಕ್ಷಿಣ ಆಫ್ರಿಕಾ, ‘ಕ್ಲೀನ್‌ಸ್ವೀಪ್‌’ ಅವಮಾನದಿಂದ ಪಾರಾಯಿತು.

ಮೊದಲ ಎರಡು ಟೆಸ್ಟ್‌ ಗೆದ್ದಿದ್ದ ಆತಿಥೇಯ ತಂಡ 2–0 ರಲ್ಲಿ ಸರಣಿ ಜಯಿಸಿತು. ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ ಪ್ರವಾಸಿ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗಳಿಗೆ 106 ರನ್‌ ಗಳಿಸಿತ್ತು.

ಇದಕ್ಕೂ ಮುನ್ನ 6 ವಿಕೆಟ್‌ಗಳಿಗೆ 149 ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 255 ರನ್‌ ಗಳಿಸಿ ಆಲೌಟಾಗಿತ್ತು. ಸಿಮೊನ್‌ ಹಾರ್ಮರ್‌ (47) ಮತ್ತು ಕೇಶವ್‌ ಮಹಾರಾಜ್‌ (53) ಅವರು ಭೋಜನ ವಿರಾಮದವರೆಗೆ ಎದುರಾಳಿ ತಂಡವನ್ನು ಕಾಡಿದರು. ಇವರು 9ನೇ ವಿಕೆಟ್‌ಗೆ 85 ರನ್‌ ಸೇರಿಸಿದರು.

ADVERTISEMENT

ಫಾಲೋಆನ್‌ ಪಡೆದು ಎರಡನೇ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ, ನಾಯಕ ಡೀನ್‌ ಎಲ್ಗರ್‌ (10) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಸಾರೆಲ್‌ ಎರ್ವಿ (ಔಟಾಗದೆ 42), ಹೆನ್ರಿಚ್‌ ಕ್ಲಾಸೆನ್‌ (35) ಮತ್ತು ತೆಂಬಾ ಬವುಮಾ (ಔಟಾಗದೆ 17) ಛಲದ ಆಟವಾಡಿ ಆಸ್ಟ್ರೇಲಿಯಾಕ್ಕೆ ಗೆಲುವು ನಿರಾಕರಿಸಿದರು.

ಮಳೆಯಿಂದ ಒಟ್ಟು ಎರಡು ದಿನಗಳ ಆಟ ನಷ್ಟವಾದದ್ದು, ಆಸ್ಟ್ರೇಲಿಯಾದ ‘ಕ್ಲೀನ್‌ಸ್ವೀಪ್‌’ ಕನಸಿಗೆ ಅಡ್ಡಿಯಾಗಿ ಪರಿಣಮಿಸಿತು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ 4 ವಿಕೆಟ್‌ಗಳಿಗೆ 475 ಡಿಕ್ಲೇರ್ಡ್‌. ದಕ್ಷಿಣ ಆಫ್ರಿಕಾ108 ಓವರ್‌ಗಳಲ್ಲಿ 255 (ಸಿಮೊನ್‌ ಹಾರ್ಮರ್‌ 47, ಕೇಶವ್‌ ಮಹಾರಾಜ್‌ 53, ಜೋಶ್‌ ಹ್ಯಾಜೆಲ್‌ವುಡ್‌ 48ಕ್ಕೆ 4, ಪ್ಯಾಟ್‌ ಕಮಿನ್ಸ್‌ 60ಕ್ಕೆ 3) ಎರಡನೇ ಇನಿಂಗ್ಸ್‌: ದಕ್ಷಿಣ ಆಫ್ರಿಕಾ 41.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 106 (ಸಾರೆಲ್‌ ಎರ್ವಿ ಔಟಾಗದೆ 42, ಹೆನ್ರಿಚ್‌ ಕ್ಲಾಸೆನ್‌ 35, ತೆಂಬಾ ಬವುಮಾ ಔಟಾಗದೆ 17, ಪ್ಯಾಟ್‌ ಕಮಿನ್ಸ್‌ 16ಕ್ಕೆ 1) ಫಲಿತಾಂಶ: ಪಂದ್ಯ ಡ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.