ADVERTISEMENT

ಅಭಿಮನ್ಯು ಆಟ ಮಸ್ತ್‌; ಲಂಕಾ ಸುಸ್ತು

ಅಭಿಮನ್ಯು ಈಶ್ವರನ್ ದ್ವಿಶತಕ, ಅನ್‌ಮೋಲ್ ಅಜೇಯ ಶತಕ

ಎಂ.ಮಹೇಶ
Published 26 ಮೇ 2019, 19:45 IST
Last Updated 26 ಮೇ 2019, 19:45 IST
ಅನ್‌ಮೋಲ್‌ಪ್ರೀತ್ ಸಿಂಗ್ ಶತಕದ ಸಂಭ್ರಮ– ಪ್ರಜಾವಾಣಿ ಚಿತ್ರ: ಚೇತನ್ ಕುಲಕರ್ಣಿ
ಅನ್‌ಮೋಲ್‌ಪ್ರೀತ್ ಸಿಂಗ್ ಶತಕದ ಸಂಭ್ರಮ– ಪ್ರಜಾವಾಣಿ ಚಿತ್ರ: ಚೇತನ್ ಕುಲಕರ್ಣಿ   

ಬೆಳಗಾವಿ: ಮೊದಲ ದಿನ ಅಮೋಘ ಜೊತೆಯಾಟ ಆಡಿದ ಅಭಿಮನ್ಯು ಈಶ್ವರನ್‌ ಎರಡನೇ ದಿನವೂ ಬ್ಯಾಟಿಂಗ್ ವೈಭವ ಮುಂದುವರಿಸಿದರು. ಆಕ್ರಮಣಕಾರಿ ಆಟದ ಮೂಲಕ ದ್ವಿಶತಕ (233; 321 ಎಸೆತ, 3 ಸಿಕ್ಸರ್, 22 ಬೌಂಡರಿ) ಗಳಿಸಿ ಮಿಂಚಿದರು.

ಅನ್‌ಮೋಲ್‌ಪ್ರೀತ್ ಸಿಂಗ್ (ಔಟಾಗದೆ 116; 165 ಎ, 11 ಬೌಂ) ಮತ್ತು ಸಿದ್ದೇಶ್ ಲಾಡ್ (76; 89 ಎ, 1 ಸಿ, 6 ಬೌಂ) ಕೂಡ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಇದರ ಪರಿಣಾಮ, ಶ್ರೀಲಂಕಾ ‘ಎ’ ಎದುರಿನ ‘ಟೆಸ್ಟ್‌’ ಪಂದ್ಯದಲ್ಲಿ ಭಾರತ ‘ಎ’ ತಂಡ ಭಾರಿ ಮೊತ್ತ ಸೇರಿಸಿತು.

ಇಲ್ಲಿನ ಆಟೊ ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತ ‘ಎ’ ತಂಡ ಐದು ವಿಕೆಟ್‌ಗಳಿಗೆ 622 ರನ್‌ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು.

ADVERTISEMENT

ಮೊದಲ ಇನಿಂಗ್ಸ್ ಆರಂಭಿಸಿದ ಲಂಕನ್ನರು ದಿನದಾಟದ ಅಂತ್ಯಕ್ಕೆ 83 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತಿಥೇಯರ ಮೊತ್ತ ಹಿಂದಿಕ್ಕಲು ತಂಡ ಇನ್ನೂ 539 ರನ್‌ ಗಳಿಸಬೇಕಾಗಿದೆ.

ಮೊದಲನೇ ದಿನ 189 ರನ್‌ ಗಳಿಸಿದ್ದ ಅಭಿಮನ್ಯು, ಪ್ರೇಕ್ಷಕರ ನಿರೀಕ್ಷೆ ಹುಸಿಗೊಳಿಸಲಿಲ್ಲ. ದ್ವಿಶತಕ ಸಾಧನೆಗೆ ಭಾನುವಾರ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಬೆಳಿಗ್ಗೆ ತಾವೆದುರಿಸಿದ 15ನೇ ಎಸೆತದಲ್ಲಿ ಈ ಗುರಿ ಮುಟ್ಟಿದರು. ವಿಶ್ವ ಫರ್ನಾಂಡೊ ಎಸೆತವನ್ನು ಬೌಂಡರಿಗೆ ಅಟ್ಟಿದ ಅವರು ಪ್ರೇಕ್ಷಕರತ್ತ ಬ್ಯಾಟ್ ಎತ್ತಿ ಸಂಭ್ರಮಿಸಿದರು. ಮರು ಎಸೆತದಲ್ಲೇ ತಂಡದ 2ನೇ ವಿಕೆಟ್ ಪತನವಾಯಿತು. ಜಯಂತ್ ಯಾದವ್ ವಿಕೆಟ್‌ ಕೀಪರ್ ನಿರೋಷನ್ ಡಿಕ್ವೆಲ್ಲಾಗೆ ಕ್ಯಾಚ್‌ ನೀಡಿ ಮರಳಿದರು.

ಬಳಿಕ ಅಭಿಮನ್ಯು ಜೊತೆಗೂಡಿದ ಅನ್‌ಮೋಲ್‌ 82 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇಬ್ಬರೂ ಬೌಂಡರಿಗಳನ್ನು ಸಿಡಿಸಿ ಕುಂದಾನಗರಿಯ ಪ್ರೇಕ್ಷಕರನ್ನು ರಂಜಿಸಿದರು. 109ನೇ ಓವರ್‌ನ ಕೊನೆಯ ಎಸೆತದಲ್ಲಿ ಅಖಿಲ ಧನಂಜಯ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ ಅಭಿಮನ್ಯು ವಾಪಸಾದಾಗ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಮೂಲಕ ಅಭಿನಂದಿಸಿದರು.

ರಿಕ್ಕಿ ಭುಯಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲಿಲ್ಲ. ನಂತರ ಅನ್ಮೋಲ್‌–ಸಿದ್ದೇಶ್‌ ಜೋಡಿಯ ಆಟ ರಂಗೇರಿತು. ಚಹಾ ವಿರಾಮದ ನಂತರ ಇವರಿಬ್ಬರು ಬಿರುಸಿನ ಬ್ಯಾಟಿಂಗ್ ಮಾಡಿ 147 ರನ್‌ಗಳ ಕಾಣಿಕೆ ನೀಡಿದರು. ಸಿದ್ದೇಶ್ ಔಟಾದಾಗ ನಾಯಕ ಪ್ರಿಯಾಂಕ್ ಪಾಂಚಾಲ್‌ ಇನಿಂಗ್ಸ್ ಡಿಕ್ಲೇರ್ ಮಾಡಿದರು.

ಸಂಕಟ ಹೆಚ್ಚಿಸಿದ ಸಂದೀಪ್‌, ದುಬೆ: ಭಾರಿ ಮೊತ್ತ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಮಧ್ಯಮ ವೇಗಿಗಳಾದ ಸಂದೀಪ್ ವಾರಿಯರ್ ಮತ್ತು ಶಿವಂ ದುಬೆ ಪೆಟ್ಟಿ ನೀಡಿದರು. ಆರಂಭಿಕ ಬ್ಯಾಟ್ಸ್‌ಮನ್ ಸಂಗೀತ್ ಕೂರೆ ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ವಾರಿಯರ್‌ಗೆ ವಿಕೆಟ್ ಒಪ್ಪಿಸಿದರು. ಆಗ ತಂಡದ ಮೊತ್ತ ಒಂದು ರನ್ ಆಗಿತ್ತು. ನಂತರ ತಂಡ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಶಾನ್ ಪ್ರಿಯಂಜನ್ ಮತ್ತು ನಿರೋಷನ್ ಐದನೇ ವಿಕೆಟ್‌ಗೆ 33 ರನ್‌ ಸೇರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಸಂಕ್ಷಿಪ್ತ ಸ್ಕೋರು:

ಭಾರತ ‘ಎ’ ಮೊದಲ ಇನಿಂಗ್ಸ್: 142 ಓವರ್‌ಗಳಲ್ಲಿ 5ಕ್ಕೆ 622 ಡಿಕ್ಲೇರ್ಡ್ (ಅಭಿಮನ್ಯು ಈಶ್ವರನ್ 233, ಅನ್ಮೋಲ್‌ಪ್ರೀತ್ ಸಿಂಗ್ ಅಜೇಯ 116, ಸಿದ್ದೇಶ್ ಲಾಡ್ 76; ವಿಶ್ವ ಫರ್ನಾಂಡೊ 83ಕ್ಕೆ2, ಲಾಹಿರು ಕುಮಾರ 86ಕ್ಕೆ1, ಅಖಿಲ ಧನಂಜಯ 136ಕ್ಕೆ1, ಲಕ್ಷಣ್ ಸಂಡಗನ್ 145ಕ್ಕೆ1); ಶ್ರೀಲಂಕಾ ‘ಎ’, ಮೊದಲ ಇನಿಂಗ್ಸ್: 28 ಓವರ್‌ಗಳಲ್ಲಿ 4ಕ್ಕೆ 83 (ಸಧೀರ ಸಮರವಿಕ್ರಮ 31, ಅಶಾನ್ ಪ್ರಿಯಂಜನ್ 22, ನಿರೋಷನ್ 22; ವಾರಿಯರ್ 30ಕ್ಕೆ2, ಶಿವಂ ದುಬೆ 11ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.