ADVERTISEMENT

ಜೋಷುವಾ ಮಿಂಚು: ವಿಂಡೀಸ್‌ಗೆ ಮುನ್ನಡೆ

ರಾಯಿಟರ್ಸ್
Published 26 ಮಾರ್ಚ್ 2022, 11:53 IST
Last Updated 26 ಮಾರ್ಚ್ 2022, 11:53 IST
ಜೋಷುವಾ ಡಿಸಿಲ್ವಾ ಬ್ಯಾಟಿಂಗ್‌– ಎಎಫ್‌ಪಿ ಚಿತ್ರ
ಜೋಷುವಾ ಡಿಸಿಲ್ವಾ ಬ್ಯಾಟಿಂಗ್‌– ಎಎಫ್‌ಪಿ ಚಿತ್ರ   

ಸೇಂಟ್‌ ಜಾರ್ಜ್‌, ಗ್ರೆನೆಡಾ: ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ವೆಸ್ಟ್ ಇಂಡೀಸ್‌ ತಂಡಕ್ಕೆ ಜೋಷುವಾ ಡಿಸಿಲ್ವಾ (ಬ್ಯಾಟಿಂಗ್‌ 54) ಆಸರೆಯಾದರು. ಅವರ ಚೊಚ್ಚಲ ಅರ್ಧಶತಕದ ಬಲದಿಂದ ತಂಡವು ಇಂಗ್ಲೆಂಡ್‌ ಎದುರಿನ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್‌ 204 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡಿತ್ತು. ಪಂದ್ಯದ ಎರಡನೇ ದಿನವಾದ ಶುಕ್ರವಾರ ವೆಸ್ಟ್ ಇಂಡೀಸ್‌ ಎಂಟು ವಿಕೆಟ್‌ ನಷ್ಟಕ್ಕೆ 232 ರನ್‌ ಗಳಿಸಿ 28 ರನ್‌ಗಳ ಮುನ್ನಡೆ ಸಾಧಿಸಿತು.

ಒಂದು ಹಂತದಲ್ಲಿ 127 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿದ್ದ ಆತಿಥೇಯ ತಂಡಕ್ಕೆ ಬಾಲಂಗೋಚಿಗಳು ಆಸರೆಯಾದರು. ಎಂಟನೇ ವಿಕೆಟ್‌ ರೂಪದಲ್ಲಿ ಅಲ್ಜರಿ ಜೋಸೆಫ್‌ (28) ಔಟಾದ ಬಳಿಕ ಜೋಷುವಾ ಮತ್ತು ವೇಗಿ ಕೆಮರ್ ರೋಚ್‌ (25) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಮುರಿಯದ ಒಂಬತ್ತನೇ ವಿಕೆಟ್‌ ಜೊತೆಯಾಟದಲ್ಲಿ 55 ರನ್‌ ಸೇರಿಸಿದರು.

ADVERTISEMENT

144 ಎಸೆತಗಳನ್ನು ಎದುರಿಸಿದ ಜೋಷುವಾ ಬ್ಯಾಟಿಂಗ್‌ನಲ್ಲಿ ನಾಲ್ಕು ಬೌಂಡರಿಗಳಿದ್ದವು.

ಇದಕ್ಕೂ ಮೊದಲು ಇಂಗ್ಲೆಂಡ್‌ ತಂಡಕ್ಕೂ ಬಾಲಂಗೋಚಿಗಳೇ ಆಸರೆಯಾಗಿದ್ದರು. 114ಕ್ಕೆ 9 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಜಾಕ್‌ ಲೀಚ್‌ (ಔಟಾಗದೆ 41) ಮತ್ತು ಸಕೀಬ್ ಮಹಮೂದ್‌ (49) ಕೊನೆಯ ವಿಕೆಟ್‌ ಜೊತೆಯಾಟದಲ್ಲಿ 90 ರನ್‌ ಸೇರಿಸಿದ್ದರು.

ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್: ಇಂಗ್ಲೆಂಡ್‌: 89.4 ಓವರ್‌ಗಳಲ್ಲಿ 204 (ಜಾಕ್‌ ಲೀಚ್‌ ಔಟಾಗದೆ 41,ಸಕೀಬ್ ಮಹಮೂದ್‌ 49, ಅಲೆಕ್ಸ್ ಹೇಲ್ಸ್ 31; ಕೆಮರ್ ರೋಚ್‌ 41ಕ್ಕೆ 2, ಜಾಯ್ಡೆನ್ ಸೀಲ್ಸ್ 40ಕ್ಕೆ 3, ಕೈಲ್ ಮಯರ್ಸ್ 13ಕ್ಕೆ 2, ಅಲ್ಜರಿ ಜೋಸೆಫ್‌ 33ಕ್ಕೆ 2). ವೆಸ್ಟ್ ಇಂಡೀಸ್‌: 86 ಓವರ್‌ಗಳಲ್ಲಿ 8ಕ್ಕೆ 232 (ಜೋಷುವಾ ಡಿಸಿಲ್ವಾ ಬ್ಯಾಟಿಂಗ್‌ 54, ಜಾನ್ ಕ್ಯಾಂಪ್‌ಬೆಲ್‌ 35, ಅಲ್ಜರಿ ಜೋಸೆಫ್‌ 28, ಕೆಮರ್ ರೋಚ್ ಬ್ಯಾಟಿಂಗ್‌ 25).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.