ADVERTISEMENT

CSK vs LSG: ಚೆನ್ನೈ ಸೂಪರ್ ಕಿಂಗ್ಸ್‌, ಲಖನೌ ಸೂಪರ್ ಜೈಂಟ್ಸ್‌ಗೆ ಜಯದ ತವಕ

ಪಿಟಿಐ
Published 30 ಮಾರ್ಚ್ 2022, 19:30 IST
Last Updated 30 ಮಾರ್ಚ್ 2022, 19:30 IST
ಕೆ.ಎಲ್‌.ರಾಹುಲ್ –ಟ್ವಿಟರ್ ಚಿತ್ರ
ಕೆ.ಎಲ್‌.ರಾಹುಲ್ –ಟ್ವಿಟರ್ ಚಿತ್ರ   

ಮುಂಬೈ: ಮೊದಲ ಪಂದ್ಯದಲ್ಲೇ ಸೋಲಿನ ಕಹಿ ಅನುಭವಿಸಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪದಾರ್ಪಣೆ ಪಂದ್ಯದಲ್ಲಿ ನಿರಾಸೆ ಕಂಡಿರುವ ಲಖನೌ ಸೂಪರ್ ಜೈಂಟ್ಸ್ ತಂಡಗಳು ಗುರುವಾರ ಮುಖಾಮುಖಿಯಾಗಲಿವೆ.

ಮಹೇಂದ್ರ ಸಿಂಗ್ ಧೋನಿ ಅವರು ನಾಯಕತ್ವ ಬಿಟ್ಟುಕೊಟ್ಟ ನಂತರ ರವೀಂದ್ರ ಜಡೇಜ ಅವರು ಚೆನ್ನೈ ತಂಡದ ಚುಕ್ಕಾಣಿ ಹಿಡಿದಿದ್ದರು. ಅವರು ಮುನ್ನಡೆಸಿದ ಮೊದಲ ಪಂದ್ಯದಲ್ಲೇ ಕೋಲ್ಕತ್ತ ನೈಟ್‌ ರೈಡರ್ಸ್‌ಗೆ ತಂಡ ಮಣಿದಿತ್ತು. ಪಂಜಾಬ್ ಕಿಂಗ್ಸ್‌ನಿಂದ ಹೊಸ ತಂಡವಾದ ಲಖನೌ ಸೂಪರ್ ಜೈಂಟ್ಸ್‌ ಸೇರಿದ ರಾಹುಲ್ ಕೂಡ ‘ಮೊದಲ’ ಪ್ರಯತ್ನದಲ್ಲಿ ಸೋತಿದ್ದರು.

ಹೀಗಾಗಿ ಗುರುವಾರದ ಪಂದ್ಯ ತಂಡಗಳಿಗೂ ನಾಯಕರಿಗೂ ಮಹತ್ವದ್ದು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಎರಡೂ ತಂಡಗಳ ಮೊದಲ ಸೋಲಿಗೆ ಕಾರಣವಾಗಿತ್ತು. ಆದ್ದರಿಂದ ಬ್ರೆಬೋರ್ನ್ ಅಂಗಣದಲ್ಲಿ ಪುಟಿದೇಳಲು ಬ್ಯಾಟರ್‌ಗಳು ಪ್ರಯತ್ನಿಸಲಿದ್ದಾರೆ.

ADVERTISEMENT

ಟೂರ್ನಿಯ ಆರಂಭದಲ್ಲೇ ಟಾಸ್ ಮಹತ್ವದ ಪಾತ್ರ ವಹಿಸುತ್ತಿದೆ. ಚೆನ್ನೈ ಮತ್ತು ಲಖನೌ ತಂಡಗಳು ಮೊದಲ ಬ್ಯಾಟಿಂಗ್ ಮಾಡಿ ಸೋತಿವೆ. ಕೆ.ಎಲ್‌.ರಾಹುಲ್, ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಬೇಕಾಗಿದೆ.

ಮನೀಷ್ ಪಾಂಡೆ ಮತ್ತು ಎವಿನ್ ಲೂಯಿಸ್ ಯಾವುದೇ ಬಗೆಯ ಬೌಲಿಂಗ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ದೀಪಕ್ ಹೂಡಾ, ಆಯುಷ್ ಬಡೋನಿ ಮತ್ತು ಕೃಣಾಲ್ ಪಾಂಡ್ಯ ಮೊದಲ ಪಂದ್ಯದಲ್ಲಿ ಮಿಂಚಿದ್ದಾರೆ ಆದ್ದರಿಂದ ಭರವಸೆ ಮೂಡಿಸಿದ್ದಾರೆ.

ಮೋಯಿನ್ ಅಲಿ ಲಭ್ಯ

ಮೊಯಿನ್ ಅಲಿ ಮತ್ತು ಡ್ವೇನ್ ಪ್ರಿಟೋರಿಯಸ್ ಗುರುವಾರದ ಪಂದ್ಯಕ್ಕೆ ಲಭ್ಯ ಇರುವುದರಿಂದ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಭರವಸೆ ಮೂಡಿದೆ. ಋತುರಾಜ್ ಗಾಯಕವಾಡ್‌, ರಾಬಿನ್ ಉತ್ತಪ್ಪ, ಡೇವಾನ್ ಕಾನ್ವೆ ಮತ್ತು ಅಂಬಟಿ ರಾಯುಡು ಮಿಂಚಬೇಕಾಗಿದೆ. ರವೀಂದ್ರ ಜಡೇಜ ಮೇಲೆಯೂ ನಿರೀಕ್ಷೆ ಮೂಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ಸೇರಲಿರುವ ಮಿಚೆಲ್ ಮಾರ್ಷ್

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪಾಕಿಸ್ತಾನ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡದ ಜೊತೆಗಿರುವ ಅವರು ಗಾಯಗೊಂಡಿರುವ ಕಾರಣ ಏಕದಿನ ಮತ್ತು ಟ್ವೆಂಟಿ20 ಸರಣಿಯಿಂದ ಕೈಬಿಡಲಾಗಿದೆ.

₹ 6.5 ಕೋಟಿ ಮೊತ್ತಕ್ಕೆ ಮಾರ್ಷ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ ತನ್ನತ್ತ ಸೆಳೆದುಕೊಂಡಿತ್ತು. 30 ವರ್ಷದ ಈ ಆಟಗಾರ ಕಳೆದ ಭಾನುವಾರ ಆಸ್ಟ್ರೇಲಿಯಾ ತಂಡದೊಂದಿಗೆ ಅಭ್ಯಾಸದಲ್ಲಿ ತೊಡಗಿದ್ದ ವೇಳೆ ಗಾಯಗೊಂಡಿದ್ದರು.

ಡೆಲ್ಲಿ ಕ್ಯಾಪಿಟಲ್ಸ್‌ನ ಫಿಜಿಯೊಥೆರಪಿಸ್ಟ್ ಪ್ಯಾಟ್ರಿಕ್ ಫರ್‌ಹರ್ಟ್‌ ಅವರ ಬಳಿ ಮಾರ್ಷ್ ಚಿಕಿತ್ಸೆ ಪಡೆದುಕೊಳ್ಳಲಿದ್ದು ಅವರ ಸಲಹೆಯ ಮೇರೆಗೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.