ADVERTISEMENT

IPL 2024: ಗೆಲ್ಲಲೇಬೇಕಾದ ಒತ್ತಡದಲ್ಲಿ ಸೂಪರ್‌ ಕಿಂಗ್ಸ್‌

ಚೆನ್ನೈ– ರಾಜಸ್ಥಾನ ರಾಯಲ್ಸ್‌ ಮುಖಾಮುಖಿ ಇಂದು

​ಪ್ರಜಾವಾಣಿ ವಾರ್ತೆ
Published 11 ಮೇ 2024, 16:04 IST
Last Updated 11 ಮೇ 2024, 16:04 IST
ಸಂಜು ಸ್ಯಾಮ್ಸನ್‌ –ಪಿಟಿಐ ಚಿತ್ರ
ಸಂಜು ಸ್ಯಾಮ್ಸನ್‌ –ಪಿಟಿಐ ಚಿತ್ರ   

ಚೆನ್ನೈ (ಪಿಟಿಐ): ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಭಾನುವಾರ ರಾಜಸ್ಥಾನ ರಾಯಲ್ಸ್‌ ತಂಡವನ್ನು ಎದುರಿಸಲಿದೆ. ಪ್ಲೇ ಆಫ್‌ ಹಾದಿಯನ್ನು ಖಚಿತಪಡಿಸಿಕೊಳ್ಳಲು ತವರಿನಲ್ಲಿ ನಡೆಯುವ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಚೆನ್ನೈ ತಂಡವು 12 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಶುಕ್ರವಾರ ಗುಜರಾತ್ ಟೈಟನ್ಸ್ ವಿರುದ್ಧದ ಸೋಲು ತಂಡವನ್ನು ಒತ್ತಡಕ್ಕೆ ಸಿಲುಕಿಸಿದೆ. ಪ್ಲೇಆಫ್‌ ಹಾದಿಯನ್ನು ಜೀವಂತವಾಗಿ ಉಳಿಸಲು ಋತುರಾಜ್‌ ಗಾಯಕವಾಡ್‌ ಬಳಗವು ಇನ್ನುಳಿದ ಎರಡೂ ಪಂದ್ಯಗಳನ್ನು (ರಾಜಸ್ಥಾನ ಮತ್ತು ಆರ್‌ಸಿಬಿ ವಿರುದ್ಧ) ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಮತ್ತೊಂದೆಡೆ ಕಳೆದೆರಡು ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಗ್ಗರಿಸಿರುವ ರಾಜಸ್ಥಾನ ತಂಡವು ಗೆಲುವಿನ ಲಯಕ್ಕೆ ಮರಳಲು ಹವಣಿಸುತ್ತಿದೆ. 11 ಪಂದ್ಯಗಳಲ್ಲಿ 16 ಅಂಕ ಸಂಪಾದಿಸಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸಂಜು ಸ್ಯಾಮ್ಸನ್‌ ಬಳಗವು ಈ ಪಂದ್ಯ ಗೆದ್ದರೆ ನಾಕೌಟ್‌ಗೆ ಮೊದಲ ತಂಡವಾಗಿ ಲಗ್ಗೆಯಿಡಲಿದೆ.

ADVERTISEMENT

ಚೆನ್ನೈನ ಅಗ್ರ ಬ್ಯಾಟರ್‌ಗಳಾದ ಅಜಿಂಕ್ಯ ರಹಾನೆ, ರಚಿನ್ ರವೀಂದ್ರ ಮತ್ತು ಋತುರಾಜ್ ಗಾಯಕವಾಡ್‌ ಅವರು ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದು ತಂಡಕ್ಕೆ ತಲೆನೋವಾಗಿದೆ. ಆರಂಭದ ಕೆಲ ಪಂದ್ಯಗಳಲ್ಲಿ ಅಬ್ಬರಿಸಿದ್ದ ಶಿವಂ ದುಬೆ ಅವರು ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾದ ಬಳಿಕ ರನ್‌ ಬರ ಎದುರಿಸುತ್ತಿದ್ದಾರೆ.

ಮತ್ತೊಂಡೆದೆ ಡೇರಿಲ್‌ ಮಿಚೆಲ್ ಮತ್ತು ಮೊಯಿನ್ ಅಲಿ ಲಯ ಕಂಡುಕೊಂಡಿರುವುದು ತಂಡದಲ್ಲಿ ಆಶಾಭಾವನೆ ಮೂಡಿಸಿದೆ. ತಂಡದ ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ತುಷಾರ್‌ ದೇಶಪಾಂಡೆ ಮತ್ತು ಶಾರ್ದೂಲ್‌ ಠಾಕೂರ್‌ ಅಮೋಘ ದಾಳಿಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪಂದ್ಯ ಮಧ್ಯಾಹ್ನ ಆರಂಭವಾಗುವುದರಿಂದ ಇಬ್ಬನಿ ಕಡಿಮೆ ಇರಲಿದ್ದು, ಸ್ಪಿನ್ನರ್‌ಗಳಿಗೆ ನೆರವಾಗಬಹುದು.

ಚೆನ್ನೈ ತಂಡಕ್ಕೆ ಹೋಲಿಸಿದರೆ ರಾಜಸ್ಥಾನ ತಂಡದ ಬ್ಯಾಟಿಂಗ್‌ ಸಾಮರ್ಥ್ಯ ಕೊಂಚ ಉತ್ತಮವಾಗಿದೆ. ಬ್ಯಾಟರ್‌ಗಳಾದ ಜೋಸ್‌ ಬಟ್ಲರ್‌, ಸ್ಯಾಮ್ಸನ್‌, ಶುಭಂ ದುಬೆ, ರೋವ್ಮನ್‌ ಪೊವೆಲ್‌ ತಂಡದ ಶಕ್ತಿಯಾಗಿದ್ದಾರೆ. ಆದರೆ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾದರೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಪರದಾಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ಅನುಭವಿಗಳಾದ ಆರ್‌. ಅಶ್ವಿನ್‌, ಯಜುವೇಂದ್ರ ಚಾಹಲ್‌ ಹಿಂದಿನ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಜಿಯೊ ಸಿನಿಮಾ ಆ್ಯಪ್‌

ಋತುರಾಜ್‌ ಗಾಯಕವಾಡ್‌ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.