ADVERTISEMENT

ಕೋಲ್ಕತ್ತದ ಕನಸು ಭಂಗ ಮಾಡುವತ್ತ ಚೆನ್ನೈ ಚಿತ್ತ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 20:25 IST
Last Updated 28 ಅಕ್ಟೋಬರ್ 2020, 20:25 IST
ರವೀಂದ್ರ ಜಡೇಜ ಮತ್ತು ಫಾಫ್ ಡುಪ್ಲೆಸಿ
ರವೀಂದ್ರ ಜಡೇಜ ಮತ್ತು ಫಾಫ್ ಡುಪ್ಲೆಸಿ   

ದುಬೈ (ಪಿಟಿಐ): ಐಪಿಎಲ್ ಟೂರ್ನಿಯ ಪ್ಲೇ ಆಫ್‌ನಿಂದ ಈಗಾಗಲೇ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತ ರೈಡರ್ಸ್‌ ತಂಡದ ಆಸೆಗೆ ತಣ್ಣೀರೆರಚುವ ಛಲದಲ್ಲಿದೆ. ಈ ಎರಡೂ ತಂಡಗಳು ಗುರುವಾರ ಮುಖಾಮುಖಿಯಾಗಲಿವೆ.

12 ಪಂದ್ಯಗಳಲ್ಲಿ ಆಡಿರುವ ಕೋಲ್ಕತ್ತ ತಂಡವು ಆರರಲ್ಲಿ ಗೆ್ದ್ದು ಉಳಿದಿದ್ದರಲ್ಲಿ ಸೋತಿದೆ. 12 ಅಂಕಗಳನ್ನು ಗಳಿಸಿದೆ. ಪ್ಲೇ ಆಫ್ ಕನಸು ಕೈಗೂಡಬೇಕಾದರೆ ತನ್ನ ಪಾಲಿಗೆ ಇರುವ ಇನ್ನೆರಡು ಪಂದ್ಯಗಳನ್ನೂ ಗೆಲ್ಲುವ ಒತ್ತಡದಲ್ಲಿದೆ.

ಆದರೆ ಯಾವುದೇ ಒತ್ತಡವಿಲ್ಲದ ಮಹೇಂದ್ರಸಿಂಗ್ ಧೋನಿ ಬಳಗವು ಈಚೆಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೋಲುಣಿಸಿತ್ತು. ಅದೇ ರೀತಿ ಇಲ್ಲಿಯೂ ಮಾಡಿಬಿಟ್ಟರೆ ಏಯಾನ್ ಮಾರ್ಗನ್ ನಾಯಕತ್ವದ ಕೆಕೆಆರ್ ಕನಸು ಕೈಜಾರುತ್ತದೆ.

ADVERTISEMENT

ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬೀಗುತ್ತಿದ್ದ ಕೆಕೆಆರ್ ತಂಡಕ್ಕೆ ಕಳೆದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ ಮಣ್ಣುಮುಕ್ಕಿಸಿತ್ತು. ಆ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಏಯಾನ್ ಮಾರ್ಗನ್ ಬಿಟ್ಟರೆ ಉಳಿದವರೆಲ್ಲರೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಚೆನ್ನೈನ ದೀಪಕ್ ಚಾಹರ್, ಸ್ಯಾಮ್ ಕರನ್ ಮತ್ತು ಶಾರ್ದೂಲ್ ಠಾಕೂರ್ ಬಳಗದ ಮುಂದೆ ಚೆನ್ನಾಗಿ ಆಡದಿದ್ದರೆ ಅಪಾಯ ಖಚಿತ.

ಮೊದಲ ಸುತ್ತಿನಲ್ಲಿ ಕೋಲ್ಕತ್ತ ತಂಡವು ಚೆನ್ನೈ ವಿರುದ್ಧ ಗೆದ್ದಿತ್ತು. ಧೋನಿ ಬಳಗವು ಆ ಸೋಲಿನ ಸೇಡು ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಯುವ ಆಟಗಾರ ಋತುರಾಜ್ ಗಾಯಕವಾಡ್, ಫಾಫ್ ಡುಪ್ಲೆಸಿ, ಅಂಬಟಿ ರಾಯುಡು, ಧೋನಿ. ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಮತ್ತು ಸ್ಯಾಮ ಕರನ್ ಅವರು ಬ್ಯಾಟಿಂಗ್‌ನಲ್ಲಿಯೂ ಮಿಂಚುವ ಅನಿವಾರ್ಯತೆ ಇದೆ. ಕೋಲ್ಕತ್ತ ಬೌಲರ್‌ಗಳಾದ ವರುಣ ಚಕ್ರವರ್ತಿ, ಪ್ಯಾಟ್ ಕಮಿನ್ಸ್ , ಸುನೀಲ್ ನಾರಾಯಣ್ ಮತ್ತು ಲಾಕಿ ಫರ್ಗ್ಯುಸನ್ ಅವರನ್ನು ಚೆನ್ನೈ ಬ್ಯಾಟಿಂಗ್ ಪಡೆ ಎದುರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.