ಭಾರತ ತಂಡದ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್
–ಪಿಟಿಐ ಚಿತ್ರ
ದುಬೈ: ಐಸಿಸಿ ಟ್ರೋಫಿ ಕ್ರಿಕೆಟ್ ಟೂರ್ನಿಗಳ ಇತಿಹಾಸದ ಪುಟಗಳನ್ನು ತಿರುವಿದಾಗ ಭಾರತ ತಂಡವು ಆಸ್ಟ್ರೇಲಿಯಾ ಎದುರು ನಾಕೌಟ್ ಹಂತದಲ್ಲಿ ಎಡವಿದ್ದು ಹೆಚ್ಚು. ಇದೀಗ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ತನ್ನ ಸ್ಪಿನ್ ಬೌಲರ್‌ಗಳ ಬಲವನ್ನು ನೆಚ್ಚಿಕೊಂಡಿದ್ದು, ಬಲಾಢ್ಯ ಆಸ್ಟ್ರೇಲಿಯಾವನ್ನು ಮಣಿಸುವ ಉತ್ಸಾಹದಲ್ಲಿದೆ. ಆಸ್ಟ್ರೇಲಿಯಾ ತಂಡಕ್ಕೆ ಪ್ರಮುಖ ವೇಗಿಗಳಾದ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರು ಲಭ್ಯವಿಲ್ಲ. ಗಾಯಗೊಂಡಿರುವ ಅವರು ಕಣಕ್ಕಿಳಿದಿಲ್ಲ. ಆದರೂ ಆಸ್ಟ್ರೇಲಿಯಾವು ಈ ಸವಾಲನ್ನು ಮೀರಿ ನಿಂತಿದೆ. ಗುಂಪು ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 352 ರನ್‌ಗಳ ಕಠಿಣ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗಿತ್ತು.
ಭಾರತ ತಂಡವು ಐಸಿಸಿ ಟ್ರೋಫಿ ಟೂರ್ನಿಯ ನಾಕೌಟ್ ಹಂತದಲ್ಲಿ ಆಸ್ಟ್ರೇಲಿಯಾ ತಂಡವನ್ನು 2011ರ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿತ್ತು. 2015ರ ಏಕದಿನ ವಿಶ್ವಕಪ್ ಸೆಮಿಫೈನಲ್, 2023ರ ಏಕದಿನ ವಿಶ್ವಕಪ್ ಫೈನಲ್ ಹಾಗೂ ಅದೇ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಪರಾಭವಗೊಂಡಿತ್ತು.
14 ವರ್ಷಗಳ ನಂತರ ಆಸ್ಟ್ರೇಲಿಯಾ ಎದುರು ಜಯಿಸಿ ಫೈನಲ್‌ಗೆ ಮುನ್ನಡೆಯುವ ಛಲದಲ್ಲಿ ರೋಹಿತ್ ಶರ್ಮಾ ಬಳಗವಿದೆ. ನುರಿತ ಸ್ಪಿನ್ನರ್‌ಗಳು ಇರುವ ಭಾರತ ತಂಡವು ಮೇಲ್ನೋಟಕ್ಕೆ ಆಸ್ಟ್ರೇಲಿಯಾಕ್ಕೆ ಕಠಿಣ ಪೈಪೋಟಿಯೊಡ್ಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭಕ್ಕೂ ಮುನ್ನ ಭಾರತ ತಂಡವು ಪ್ರಕಟಗೊಂಡಾಗ ಐವರು ಸ್ಪಿನ್ನರ್‌ಗಳಿಗೆ ಸ್ಥಾನ ಕೊಟ್ಟ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿದ್ದವು. ಆದರೆ ಈಗ ಆ ನಿರ್ಧಾರವು ಸೂಕ್ತ ಎನಿಸಲು ಶುರುವಾಗಿದೆ. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ವರುಣ ಚಕ್ರವರ್ತಿ, ಕುಲದೀಪ್ ಯಾದವ್, ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಸೇರಿ 9 ವಿಕೆಟ್‌ಗಳನ್ನು ಹಂಚಿಕೊಂಡಿದ್ದರು. ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲಾದ 39 ಓವರ್‌ಗಳಲ್ಲಿ 128 ಡಾಟ್ ಬಾಲ್‌ಗಳನ್ನು ಬೌಲರ್‌ಗಳು ಪ್ರಯೋಗಿಸಿದ್ದರು.
ಶತಕದತ್ತ ಸಾಗಿದ್ದ ಕೇನ್ ವಿಲಿಯಮ್ಸನ್ ಅವರು ಮುನ್ನುಗ್ಗಿ ಆಡುವ ಪ್ರಲೋಭನೆಗೆ ಒಳಗಾಗುವಂತೆ ಅಕ್ಷರ್ ಪಟೇಲ್ ಎಸೆತ ಹಾಕಿದ್ದರು. ಕೆ.ಎಲ್. ರಾಹುಲ್ ಚುರುಕಾಗಿ ಸ್ಟಂಪಿಂಗ್ ಮಾಡಿದರು.
ಆದರೆ ಆಸ್ಟ್ರೇಲಿಯಾ ಬೌಲರ್‌ಗಳು ಇಂಗ್ಲೆಂಡ್ (352 ರನ್) ಮತ್ತು ಅಫ್ಗಾನಿಸ್ತಾನ (273 ರನ್) ಎದುರು ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ರೋಹಿತ್ ಶರ್ಮಾ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ಬೌಲರ್‌ಗಳನ್ನು ದಂಡಿಸಲು ಸಿದ್ಧರಾಗಿದ್ದಾರೆ.
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ನಾಯಕ ಸ್ಟೀವ್ ಸ್ಮಿತ್, ಜೋಷ್ ಇಂಗ್ಲಿಸ್ ಅವರು ಉತ್ತಮ ಲಯದಲ್ಲಿದ್ದಾರೆ. ಅವರನ್ನು ನಿಯಂತ್ರಿಸಲು ಭಾರತದ ಬೌಲರ್‌ಗಳು ಉತ್ತಮ ಯೋಜನೆಯೊಂದಿಗೆ ಕಣಕ್ಕಿಳಿದರೆ ಎರಡು ವರ್ಷಗಳ ಹಿಂದಿನ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಮುಯ್ಯಿ ತೀರಿಸಿಕೊಳ್ಳಬಹುದು.
ಪಂದ್ಯ ಆರಂಭ: ಮಧ್ಯಾಹ್ನ 2.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.