ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮಿನ್ಸ್
(ಚಿತ್ರ ಕೃಪೆ: X/@cricketcomau)
ಸಿಡ್ನಿ: ಮುಂದಿನ ತಿಂಗಳು ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ.
ಗಾಯದ ಸಮಸ್ಯೆ ನಡುವೆಯೂ ಪ್ಯಾಟ್ ಕಮಿನ್ಸ್ ಅವರನ್ನು ನಾಯಕನಾಗಿ ಘೋಷಣೆ ಮಾಡಲಾಗಿದ್ದು, ಗಾಯಾಳು ಪಟ್ಟಿಯಲ್ಲಿರುವ ಜೋಶ್ ಹ್ಯಾಜಲ್‌ವುಡ್ ಅವರಿಗೂ ಅವಕಾಶ ನೀಡಲಾಗಿದೆ.
ಭಾರತದ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯ ಉದ್ದಕ್ಕೂ ಗಾಯದ ಸಮಸ್ಯೆಯಿಂದ ಕಮಿನ್ಸ್ ಬಳಲುತ್ತಿದ್ದರು. ಹೀಗಾಗಿ, ಶ್ರೀಲಂಕಾ ವಿರುದ್ಧದ ಸರಣಿಗೆ ಗೈರಾಗಲಿದ್ದಾರೆ. ಅಲ್ಲದೆ, ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಹ್ಯಾಜಲ್‌ವುಡ್ ಗಾಯದ ಸಮಸ್ಯೆಯಿಂದ ಮೆಲ್ಬರ್ನ್ ಮತ್ತು ಸಿಡ್ನಿ ಟೆಸ್ಟ್‌ಗಳಿಂದ ಹೊರಗುಳಿದಿದ್ದರು. ಅದೇ ರೀತಿ ಶ್ರೀಲಂಕಾ ಸರಣಿಗೆ ಆಯ್ಕೆಯಾಗಿರಲಿಲ್ಲ. ಆದರೆ, 15 ಆಟಗಾರರ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಹೆಸರಿಸಲಾಗಿದೆ.
‘ಇದು ಸಮತೋಲಿತ ಮತ್ತು ಅನುಭವಿ ಆಟಗಾರರಿಂದ ಕೂಡಿದ ತಂಡವಾಗಿದ್ದು, ಹಿಂದಿನ ಏಕದಿನ ವಿಶ್ವಕಪ್, ವೆಸ್ಟ್ ಇಂಡೀಸ್ ಸರಣಿ, ಕಳೆದ ವರ್ಷದ ಇಂಗ್ಲೆಂಡ್‌ನ ಯಶಸ್ವಿ ಪ್ರವಾಸ ಮತ್ತು ಇತ್ತೀಚಿನ ಪಾಕಿಸ್ತಾನದ ತವರು ಸರಣಿಯಲ್ಲಿ ಪಾಲ್ಗೊಂಡಿದೆ’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದ್ದಾರೆ. .
ಪಾಕಿಸ್ತಾನ ಪಿಚ್‌ಗಳ ಸ್ಥಿತಿ ಮತ್ತು ಎದುರಾಳಿಗಳನ್ನು ಆಧರಿಸಿ ಬದಲಾವಣೆಗಳನ್ನು ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೂ ಮೊದಲು ನಡೆಯಲಿರುವ ಏಕೈಕ ಏಕದಿನ ಪಂದ್ಯಕ್ಕೂ ತಯಾರಿಯಲ್ಲಿ ತಂಡ ತೊಡಗಿದೆ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್(ನಾಯಕ), ಅಲೆಕ್ಸ್ ಕಾರಿ, ನಥನ್ ಎಲಿಸ್, ಆರೋನ್ ಹರ್ಡೀ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಾಬುಷೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಸ್, ಆಡಂ ಜಂಪಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.