ADVERTISEMENT

ಐಪಿಎಲ್‌: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಕೋವಿಡ್-19 ಕಾಟ

ಒಬ್ಬ ಆಟಗಾರ, ನೆರವು ಸಿಬ್ಬಂದಿಯಲ್ಲಿ ಸೋಂಕು ಪತ್ತೆ

ಪಿಟಿಐ
Published 28 ಆಗಸ್ಟ್ 2020, 14:54 IST
Last Updated 28 ಆಗಸ್ಟ್ 2020, 14:54 IST
ಚೆನ್ನೈ ಸೂಪರ್‌ ಕಿಂಗ್ಸ್‌ ಲೋಗೊ
ಚೆನ್ನೈ ಸೂಪರ್‌ ಕಿಂಗ್ಸ್‌ ಲೋಗೊ   

ನವದೆಹಲಿ:ಭಾರತ ರಾಷ್ಟ್ರೀಯ ತಂಡದ ಬೌಲರ್ ಒಬ್ಬರಿಗೆ ಸೇರಿದಂತೆ ಚೆನ್ನೈ ಸೂಪರ್‌ ಕಿಂಗ್ಸ್ (ಸಿಎಸ್‌ಕೆ) ಫ್ರ್ಯಾಂಚೈಸ್‌ನ ಕೆಲವು ಸದಸ್ಯರಲ್ಲಿ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಫ್ರಾಂಚೈಸ್‌ ಸಿಬ್ಬಂದಿಯ ಕ್ವಾರಂಟೈನ್‌ ಅವಧಿಯನ್ನು ವಿಸ್ತರಿಸಲಾಗಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು ಚೆನ್ನೈ ತಂಡ ದುಬೈಗೆ ಬಂದಿಳಿದಿದೆ. ಬಳಿಕ 1, 3 ಹಾಗೂ ಆರನೇ ದಿನ ತಂಡದ ಸಿಬ್ಬಂದಿಯ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಸೋಂಕು ಕಂಡುಬಂದಿದೆ.

ಸೆಪ್ಟೆಂಬರ್‌ 19ರಿಂದ ಐಪಿಎಲ್‌ ಟೂರ್ನಿ ಆರಂಭವಾಗಲಿದೆ.

ADVERTISEMENT

‘ಹೌದು, ಇತ್ತೀಚೆಗೆ ಭಾರತ ತಂಡದಲ್ಲಿ ಆಡಿದ್ದ ಬಲಗೈ ಮಧ್ಯಮವೇಗಿ ಒಬ್ಬರು ಸೇರಿ ಕೆಲವು ಸಿಬ್ಬಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ‘ ಎಂದು ಐಪಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಿಎಸ್‌ಕೆ ಆಡಳಿತ ಮಂಡಳಿಯ ಅತ್ಯಂತ ಹಿರಿಯ ಅಧಿಕಾರಿ ಹಾಗೂ ಅವರ ಪತ್ನಿ ಮತ್ತು ಸಾಮಾಜಿಕ ಜಾಲತಾಣ ವಿಭಾಗ ನೋಡಿಕೊಳ್ಳುವ ಇಬ್ಬರು ಸದಸ್ಯರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ‘ ಎಂದು ಅವರು ಮಾಹಿತಿ ನೀಡಿದರು.

ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸಿಎಸ್‌ಕೆ ತಂಡದ ಕ್ವಾರಂಟೈನ್ ಅವಧಿಯನ್ನು ಸೆಪ್ಟೆಂಬರ್‌ 1ರವರೆಗೆ ವಿಸ್ತರಿಸಲಾಗಿದೆ.

ಸೋಂಕು ಪತ್ತೆಯಾಗಿರುವ ಎಲ್ಲರಿಗೂಬಿಸಿಸಿಐನ ಕೋವಿಡ್‌ ತಡೆ ಮಾರ್ಗಸೂಚಿಗಳ (ಎಸ್‌ಒಪಿ) ಅನ್ವಯ ಹೆಚ್ಚುವರಿ ಏಳು ದಿನಗಳ ಪ್ರತ್ಯೇಕವಾಸ‌ ಕಡ್ಡಾಯವಾಗಿದೆ. ಪ್ರತ್ಯೇಕವಾಸದ ಬಳಿಕ ಇವರಿಗೆ ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ಮಾಡಲಾಗುತ್ತದೆ. ಆ ವೇಳೆ ಫಲಿತಾಂಶ ‘ನೆಗೆಟಿವ್‌‘ ಬಂದರೆ ಮಾತ್ರ ಜೀವಸುರಕ್ಷಾ ವಾತಾವರಣ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.