ADVERTISEMENT

ವಿಶ್ವಕಪ್‌ನಲ್ಲಿ ಮಿಂಚಲು ಐಪಿಎಲ್‌ ಸಹಕಾರಿ: ಡೇವಿಡ್‌ ವಾರ್ನರ್‌

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟ್ಸ್‌ಮನ್‌ ಅನಿಸಿಕೆ

ಪಿಟಿಐ
Published 30 ಏಪ್ರಿಲ್ 2019, 16:02 IST
Last Updated 30 ಏಪ್ರಿಲ್ 2019, 16:02 IST
ಪತ್ನಿ ಮತ್ತು ಮಗಳೊಂದಿಗೆ ಡೇವಿಡ್‌ ವಾರ್ನರ್‌ ಖುಷಿಯ ಕ್ಷಣ –ಚಿತ್ರ/ಬಿಸಿಸಿಐ
ಪತ್ನಿ ಮತ್ತು ಮಗಳೊಂದಿಗೆ ಡೇವಿಡ್‌ ವಾರ್ನರ್‌ ಖುಷಿಯ ಕ್ಷಣ –ಚಿತ್ರ/ಬಿಸಿಸಿಐ   

ಹೈದರಾಬಾದ್‌: ‘ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಲು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಸಹಕಾರಿಯಾಗಲಿದೆ’ ಎಂದು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರ ಡೇವಿಡ್‌ ವಾರ್ನರ್‌ ಅಭಿಪ್ರಾಯಪಟ್ಟಿದ್ದಾರೆ.

ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿದ್ದ ವಾರ್ನರ್‌, ಈ ಸಲದ ಐಪಿಎಲ್‌ನಲ್ಲಿ ಅಮೋಘ ಆಟ ಆಡಿ ಗಮನ ಸೆಳೆದಿದ್ದಾರೆ. ಜೊತೆಗೆ ವಿಶ್ವಕಪ್‌ಗೆ ಪ್ರಕಟಿಸಲಾಗಿದ್ದ ಆಸ್ಟ್ರೇಲಿಯಾ ತಂಡದಲ್ಲೂ ಸ್ಥಾನ ಗಳಿಸಿದ್ದಾರೆ.

ಸೋಮವಾರ ನಡೆದಿದ್ದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರಿನ ಹೋರಾಟದಲ್ಲಿ 56 ಎಸೆತಗಳಲ್ಲಿ 81 ರನ್‌ ಸಿಡಿಸಿ ಸನ್‌ರೈಸರ್ಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿಭಾಯಿಸಿದ್ದರು. ಈ ಬಾರಿಯ ಲೀಗ್‌ನಲ್ಲಿ ಅವರು ಆಡಿದ ಕೊನೆಯ ಪಂದ್ಯ ಇದಾಗಿತ್ತು. ಎಡಗೈ ಬ್ಯಾಟ್ಸ್‌ಮನ್‌ ವಾರ್ನರ್‌, ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು ಮುಂದಿನ ಐಪಿಎಲ್‌ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ADVERTISEMENT

‘ಇಂಗ್ಲೆಂಡ್‌ ಪಿಚ್‌ಗಳಲ್ಲಿ ಚೆಂಡು ಹೆಚ್ಚು ತಿರುವು ಪಡೆಯುವುದಿಲ್ಲ. ಹೀಗಾಗಿ ಬ್ಯಾಟ್ಸ್‌ಮನ್‌ಗಳ ಮೇಲಾಟ ನಡೆಯುವ ಸಾಧ್ಯತೆ ಹೆಚ್ಚಿದೆ. ಪಂದ್ಯಗಳಲ್ಲಿ ದೊಡ್ಡ ಮೊತ್ತಗಳು ದಾಖಲಾಗುವ ನಿರೀಕ್ಷೆಯೂ ಇದೆ. ನಾವು ಹಾಲಿ ಚಾಂಪಿಯನ್ನರು. ಹೀಗಾಗಿ ಎಲ್ಲರ ಗಮನ ನಮ್ಮ ಮೇಲಿರುತ್ತದೆ. ಈ ಬಾರಿ ಶ್ರೇಷ್ಠ ಸಾಮರ್ಥ್ಯ ತೋರಿ ಪ್ರಶಸ್ತಿ ಉಳಿಸಿಕೊಳ್ಳಲು ಶ್ರಮಿಸುತ್ತೇವೆ’ ಎಂದು ಈ ಬಾರಿಯ ಐ‍ಪಿಎಲ್‌ನಲ್ಲಿ ಅತಿ ಹೆಚ್ಚು (692) ರನ್‌ ಗಳಿಸಿದ ಹಿರಿಮೆ ಹೊಂದಿರುವ ವಾರ್ನರ್‌ ಹೇಳಿದ್ದಾರೆ.

‘ನಿಷೇಧ ಶಿಕ್ಷೆಗೆ ಗುರಿಯಾದ ಬಳಿಕ 16ರಿಂದ 18 ವಾರಗಳ ಕಾಲ ಕ್ರಿಕೆಟ್‌ ಬಗ್ಗೆ ಯೋಚಿಸಲು ಹೋಗಿರಲಿಲ್ಲ. ಈ ಅವಧಿಯಲ್ಲಿ ಹೆಂಡತಿ ಮತ್ತು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದೆ. ಅವರ ಜೊತೆಗಿನ ಒಡನಾಟ ನೋವನ್ನು ದೂರ ಮಾಡಿತು. ನನ್ನೊಳಗೆ ನವೋಲ್ಲಾಸ ಮೂಡಲು ಸಹಕಾರಿಯಾಯಿತು. ಐಪಿಎಲ್‌ ಸಂದರ್ಭದಲ್ಲೂ ಆಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಸಹ ಆಟಗಾರರ ಜೊತೆ ಹರಟುತ್ತಾ, ನಗುತ್ತಾ ಕಾಲ ಕಳೆಯಲು ನಿರ್ಧರಿಸಿದ್ದೆ. ಇದರಿಂದ ಮನಸ್ಸು ಹಗುರವಾಗುತ್ತಿತ್ತು. ಪಂದ್ಯದ ದಿನ ನಿರಾತಂಕವಾಗಿ ಆಡಲು ಸಾಧ್ಯವಾಗುತ್ತಿತ್ತು’ ಎಂದು ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ವಾರ್ನರ್‌ ಆಟದ ಬಗ್ಗೆ ಪತ್ನಿ ಕ್ಯಾಂಡೈಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಅಂತಿಮ ಪಂದ್ಯದಲ್ಲೂ ಅಬ್ಬರದ ಆಟ ಆಡಿ ಈ ಸಲದ ಐಪಿಎಲ್‌ ಪಯಣವನ್ನು ಮುಗಿಸಿದ್ದೀರಿ. ನಿಮ್ಮ ಸಾಧನೆಯಿಂದ ನಾವು ಹೆಮ್ಮೆಯಿಂದ ಬೀಗುವಂತಾಗಿದೆ. ಆಟದ ಬಗ್ಗೆ ನೀವು ಹೊಂದಿರುವ ಬದ್ಧತೆ ಹಾಗೂ ಎಂತಹುದೇ ಸಮಯದಲ್ಲೂ ಸೋಲೊಪ್ಪಿಕೊಳ್ಳದ ನಿಮ್ಮ ಗುಣ ಎಲ್ಲರಿಗೂ ಪ್ರೇರಣೆ’ ಎಂದು ಕ್ಯಾಂಡೈಸ್‌ ಅವರು ಸೋಮವಾರ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.