ADVERTISEMENT

IPL 2023 DC vs RCB : ಸಾಲ್ಟ್‌ ಅಬ್ಬರ; ಆರ್‌ಸಿಬಿಗೆ ಆಘಾತ

ಪಿಟಿಐ
Published 6 ಮೇ 2023, 18:26 IST
Last Updated 6 ಮೇ 2023, 18:26 IST
   

ನವದೆಹಲಿ: ಫಿಲ್‌ ಸಾಲ್ಟ್‌ ಅವರ ಅಬ್ಬರದ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಆಘಾತ ನೀಡಿತು. ವಿರಾಟ್ ಕೊಹ್ಲಿ ಅವರು ತವರೂರಿನ ಅಂಗಳದಲ್ಲಿ ಅರ್ಧಶತಕದ ಮೂಲಕ ಮಿಂಚಿದರೂ, ಆರ್‌ಸಿಬಿಗೆ ಗೆಲುವು ದಕ್ಕಲಿಲ್ಲ.

ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯವನ್ನು ಡೇವಿಡ್ ವಾರ್ನರ್‌ ಬಳಗ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 181 ರನ್ ಗಳಿಸಿದರೆ, ಡೆಲ್ಲಿಯ ತಂಡ 3 ವಿಕೆಟ್‌ಗಳಿಗೆ 187 ರನ್‌ ಗಳಿಸಿ ಗೆದ್ದಾಗ ಇನ್ನೂ 20 ಎಸೆತಗಳು ಬಾಕಿಯಿದ್ದವು.

ಆರ್‌ಸಿಬಿ ಬೌಲಿಂಗ್‌ ದಾಳಿಯನ್ನು ಪುಡಿಗಟ್ಟಿದ ಸಾಲ್ಟ್‌ (87 ರನ್‌, 45 ಎ., 4X8, 6X6) ಅವರು ಕ್ಯಾಪಿಟಲ್ಸ್‌ನ ಗೆಲುವಿನ ರೂವಾರಿ. ಸವಾಲಿನ ಗುರಿ ಬೆನ್ನಟ್ಟಿದ ತಂಡಕ್ಕೆ ನಾಯಕ ವಾರ್ನರ್‌ (22 ರನ್‌) ಮತ್ತು ಸಾಲ್ಟ್‌ ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 60 ರನ್‌ ಸೇರಿಸಿ ಭರ್ಜರಿ ಆರಂಭ ನೀಡಿದರು.

ADVERTISEMENT

ಎರಡನೇ ವಿಕೆಟ್‌ಗೆ ಸಾಲ್ಟ್‌ ಹಾಗೂ ಮಿಚೆಲ್‌ ಮಾರ್ಚ್‌ 59 ರನ್‌ ಸೇರಿಸಿದರು. ಆರ್‌ಸಿಬಿ ವೇಗದ ಬೌಲರ್‌ ಮೊಹಮ್ಮದ್ ಸಿರಾಜ್‌ ಜತೆ ಮಾತಿನ ಚಕಮಕಿ ನಡೆಸಿದ ಸಾಲ್ಟ್‌, ಮತ್ತಷ್ಟು ಆಕ್ರಮಣಕಾರಿಯಾಗಿ ಕಂಡುಬಂದರು. ಅವರ ಬ್ಯಾಟ್‌ನಿಂದ ಆರು ಸಿಕ್ಸರ್‌ಗಳು ಸಿಡಿದವು. ಜಯಕ್ಕೆ 11 ರನ್‌ಗಳು ಬೇಕಿದ್ದಾಗ ಸಾಲ್ಟ್‌ ಔಟ್‌ ಆದರು. ರಿಲೀ ರೊಸ್ಸೊ ಮತ್ತು ಅಕ್ಷರ್‌ ಪಟೇಲ್‌ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಕೊಹ್ಲಿ–ಮಹಿಪಾಲ್‌ ಆಸರೆ: ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೊಹ್ಲಿ(55), ನಾಯಕ ಫಫ್ ಡುಪ್ಲೆಸಿ (45) ಮತ್ತು ಮಹಿಪಾಲ್‌ ಲೊಮ್ರೊರ್‌ (ಅಜೇಯ 54) ಉತ್ತಮ ಆಟದ ನೆರನಿಂದ ತಂಡ ಸವಾಲಿನ ಮೊತ್ತ ಕಲೆಹಾಕಿತು.

ಈ ಹಿಂದಿನ ಪಂದ್ಯಗಳ ಮಾದರಿಯಲ್ಲಿಯೇ ವಿರಾಟ್ ಮತ್ತು ಡುಪ್ಲೆಸಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 82 ರನ್‌ ಸೇರಿಸಿದರು. ಇದರಿಂದಾಗಿ ಮೊದಲ ಹತ್ತು ಓವರ್‌ಗಳಲ್ಲಿ ಡೆಲ್ಲಿ ಬೌಲರ್‌ಗಳಿಗೆ ವಿಕೆಟ್ ಲಭಿಸಲಿಲ್ಲ.

ಆದರೆ 11ನೇ ಓವರ್‌ನಲ್ಲಿ ಮಿಚೆಲ್ ಮಾರ್ಷ್ ಆಘಾತ ನೀಡಿದರು. ಮಾರ್ಷ್‌ ಎಸೆತವನ್ನು ಆಡುವ ಭರಾಟೆಯಲ್ಲಿ ಫಫ್ ಡುಪ್ಲೆಸಿ ಅವರು ಅಕ್ಷರ್ ಪಟೇಲ್‌ಗೆ ಕ್ಯಾಚಿತ್ತರು. ನಂತರದ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ಗೂ ಡಗ್‌ಔಟ್ ದಾರಿ ತೋರಿಸಿದರು.

ಆರ್‌ಸಿಬಿ ತಂಡವು ಟೂರ್ನಿಯುದ್ದಕ್ಕೂ ಈ ಮೂವರು ಬ್ಯಾಟರ್‌ಗಳ ಮೇಲೆಯೇ ಅವಲಂಬಿತವಾಗಿತ್ತು. ಅದರಿಂದಾಗಿ ಗ್ಲೆನ್ ಔಟಾದಾಗ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಾಗಿತ್ತು.

ಆದರೆ ರಾಜಸ್ಥಾನದ ಬ್ಯಾಟರ್ ಮಹಿಪಾಲ್ ತಮ್ಮ ಸಾಮರ್ಥ್ಯ ಮೆರೆದರು. ಅವರು ವಿರಾಟ್ ಜೊತೆಗೂಡಿ ಮೂರನೇ ವಿಕೆಟ್‌ಗೆ 55 ರನ್‌ ಸೇರಿಸಿದರು.

16ನೇ ಓವರ್‌ನಲ್ಲಿ ಮುಕೇಶ್ ಕುಮಾರ್ ಎಸೆತದಲ್ಲಿ ವಿರಾಟ್ ಔಟಾದರು. ಅದರ ನಂತರ ಇನಿಂಗ್ಸ್ ಹೊಣೆಯನ್ನು ತಮ್ಮ ಮೇಲೆಳೆದುಕೊಂಡ ಮಹಿಪಾಲ್ ಚೆಂದದ ಆಟವಾಡಿದರು. 186.21ರ ಸ್ಟ್ರೈಕ್‌ರೇಟ್‌ನಲ್ಲಿ  ರನ್ ಗಳಿಸಿದರು.ಇದರಲ್ಲಿ ಮೂರು ಸಿಕ್ಸರ್‌ಗಳು ಮತ್ತು ಆರು ಬೌಂಡರಿಗಳು ಸೇರಿದ್ದವು. ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ಕೂಡ ತಲಾ ಒಂದು ಸಿಕ್ಸರ್ ಸಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.