ADVERTISEMENT

ಚಾಪೆಲ್ ತಿರಸ್ಕರಿಸಿದ್ದ ಚಾಹರ್ ಏಕಾಂಗಿಯಾಗಿ ಜಯ ತಂದುಕೊಟ್ಟರು: ವೆಂಕಟೇಶ್ ಪ್ರಸಾದ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2021, 13:25 IST
Last Updated 21 ಜುಲೈ 2021, 13:25 IST
   

ನವದೆಹಲಿ: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ ದೀಪಕ್ ಚಾಹರ್ ಭಾರತಕ್ಕೆ 3 ವಿಕೆಟ್ ಗೆಲುವು ತಂದು ಕೊಡುವ ಜೊತೆಗೆ ಸರಣಿ ಗೆಲುವಿಗೂ ಕಾರಣರಾಗಿದ್ದರು.

ದೀಪಕ್ ಚಾಹರ್ ಅವರ ಈ ವೀರಾವೇಶವನ್ನು ಹಲವು ಕ್ರಿಕೆಟಿಗರು ಹಾಡಿ ಹೊಗಳಿದ್ದಾರೆ. ಇದೀಗ, ಟೀಮ್ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ವೆಂಕಟೇಶ್ ಪ್ರಸಾದ್ ಸಹ ಬಹು ವರ್ಷಗಳ ಹಿಂದಿನ ಘಟನೆಯೊಂದನ್ನು ಮೆಲುಕು ಹಾಕುವ ಮೂಲಕ ಚಹಾರ್ ಅವರನ್ನು ಹೊಗಳಿದ್ದಾರೆ.

‘ದೀಪಕ್ ಚಾಹರ್ ಅವರನ್ನು 2005ರ ಸಂದರ್ಭ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ಅವರು ತಿರಸ್ಕರಿಸಿದ್ದರು. ಎತ್ತರದ ಕಾರಣಕ್ಕೆ ಅವರನ್ನು ತಿರಸ್ಕರಿಸಿದ್ದ ಚಾಪೆಲ್ ಬೇರೆ ಉದ್ಯೋಗವನ್ನು ನೋಡಿಕೊಳ್ಳುವಂತೆ ತಿಳಿಸಿದ್ದರು. ಆದರೆ, ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಅಷ್ಟಾಗಿ ಅನುಭವವಿಲ್ಲದ ದೀಪಕ್ ಚಾಹರ್, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಕಾಂಗಿಯಾಗಿ ನಿಂತು ತಂಡವನ್ನು ಗೆಲ್ಲಿಸಿದರು.’ ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮೂಲಕ ಪ್ರಶಂಸಿಸಿದ್ದಾರೆ.

ADVERTISEMENT

ಅಷ್ಟೇ ಅಲ್ಲ, ‘ಈ ಕಥೆಯ ಹಿಂದಿನ ನೀತಿ ಏನೆಂದರೆ, ನಿಮ್ಮ ಬಗ್ಗೆ ನಂಬಿಕೆ ಇಡಿ ಮತ್ತು ವಿದೇಶಿ ತರಬೇತುದಾರರನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಡಿ.’ಎಂಬುದಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಗ್ರೆಗ್ ಚಾಪೆಲ್ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ಚಾಹರ್ ಬೊಂಬಾಟ್ ಆಟ: ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 276 ರನ್ ಗುರಿ ಪಡೆದಿದ್ದ ಟೀಮ್ ಇಂಡಿಯಾ, 36ನೃ ಓವರ್ ಹೊತ್ತಿಗೆ 193 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ ಕ್ರೀಸಿಗಿಳಿದಿದ್ದ ದೀಪಕ್ ಚಾಹರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೌಂಡರಿಗಳು ಮೂಲಕ ಬೌಲರ್‌ಗಳನ್ನು ಕಂಗೆಡಿಸಿದ ಅವರು ಅಮೋಘ 69 ಸಿಡಿಸಿದ್ದಲ್ಲದೆ ಭುವನೇಶ್ವರ್ ಕುಮಾರ್ ಅವರ ಜೊತೆ ಅಜೇಯ 84 ರನ್ ಜೊತೆಯಾಟದ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.