ADVERTISEMENT

ಇಂಗ್ಲೆಂಡ್ ಸರಣಿ ಮೇಲೆ ಗಮನ: ದೀಪ್ತಿ ಶರ್ಮಾ 

ಪಿಟಿಐ
Published 17 ಜುಲೈ 2025, 15:51 IST
Last Updated 17 ಜುಲೈ 2025, 15:51 IST
<div class="paragraphs"><p>ಭಾರತ ತಂಡದ ದೀಪ್ತಿ ಶರ್ಮಾ&nbsp;</p></div>

ಭಾರತ ತಂಡದ ದೀಪ್ತಿ ಶರ್ಮಾ 

   

ಸೌತಾಂಪ್ಟನ್: ಮುಂಬರುವ ಏಕದಿನ ಕ್ರಿಕೆಟ್ ಮಹಿಳೆಯರ ವಿಶ್ವಕಪ್ ಟೂರ್ನಿಯ ಸಿದ್ಧತೆಯ ದೃಷ್ಟಿಯಿಂದ ತಮ್ಮ ತಂಡವು ಸೂಕ್ತವಾದ ಹಾದಿಯಲ್ಲಿ ಸಾಗುತ್ತಿದೆ. ಆ ಟೂರ್ನಿ ಇನ್ನೂ ದೂರದಲ್ಲಿದೆ. ಸದ್ಯ ಇಂಗ್ಲೆಂಡ್ ಸರಣಿಯ ಪಂದ್ಯಗಳ ಮೇಲೆ ನಾವು ಸಂಪೂರ್ಣ ಚಿತ್ತ ಹರಿಸಿದ್ದೇವೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ದೀಪ್ತಿ ಶರ್ಮಾ ಹೇಳಿದರು.

ಬುಧವಾರ ತಡರಾತ್ರಿ ಆತಿಥೇಯ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಈ ಪಂದ್ಯದಲ್ಲಿ 259 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡವನ್ನು ದೀಪ್ತಿ ಶರ್ಮಾ ತಮ್ಮ ಅಜೇಯ ಅರ್ಧಶತಕದ (62 ರನ್) ಮೂಲಕ ಕಾರಣರಾಗಿದ್ದರು. ಪಂದ್ಯದ ಆಟಗಾರ್ತಿ ಗೌರವ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸೆಪ್ಟೆಂಬರ್ 30ರಿಂದ ಶ್ರೀಲಂಕಾದಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.

ADVERTISEMENT

‘ನಾವು ಆ ಕುರಿತು (ವಿಶ್ವಕಪ್) ಹೆಚ್ಚು ಯೋಚನೆ ಮಾಡುತ್ತಿಲ್ಲ. ಸದ್ಯ ಒಂದು ಹೊತ್ತಿಗೆ ಒಂದು ಪಂದ್ಯದ ಮೇಲೆ ಅಷ್ಟೇ ನಿಗಾ ವಹಿಸಿದ್ದೇವೆ’ ಎಂದು ಎಡಗೈ ಬ್ಯಾಟರ್ ದೀಪ್ತಿ ಹೇಳಿದರು. 

‘ನನಗೆ ಶಾಂತಚಿತ್ತದಿಂದ ಆಡುವ ವಿಶ್ವಾಸ ಇತ್ತು. ಜೆಮಿಯೊಂದಿಗಿನ (ಜೆಮಿಮಾ ರಾಡ್ರಿಗಸ್) ಜೊತೆಯಾಟದ ಮೇಲೆ ಪೂರ್ಣ ಗಮನ ಸಾಧಿಸಬೇಕು. ಆ ಮೂಲಕ ಇನಿಂಗ್ಸ್‌ ಕಟ್ಟಬೇಕು ಎಂಬುದರತ್ತ ನಮ್ಮ ಲಕ್ಷ್ಯವಿತ್ತು. ನಾವಿಬ್ಬರೂ ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಪ್ರತಿ ಓವರ್‌ಗೆ 5–6 ರನ್‌ಗಳನ್ನು ಗಳಿಸುವ ಯೋಜನೆಯಿತ್ತು. ಆ ರೀತಿಯೇ ಆಡಿದೆವು’ ಎಂದರು 

ದೀಪ್ತಿ ಮತ್ತು ಜೆಮಿಮಾ (48; 54ಎ, 4X5) ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿದರು. ಇದರಿಂದಾಗಿ ತಂಡವು 48.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 262 ರನ್ ಗಳಿಸಿ ಜಯಿಸಿತು. 

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು ಸೋಫಿಯಾ ಡಂಕ್ಲಿ (83 ರನ್) ಮತ್ತು  ಅಲೈಸ್ ಡೇವಿಡ್‌ಸನ್ ರಿಚರ್ಡ್ಸ್ (53 ರನ್) ಅವರ ಅರ್ಧಶತಕಗಳ ಬಲದಿಂದ ಭಾರತಕ್ಕೆ ಸ್ಪರ್ಧಾತ್ಮಕ ಗುರಿಯೊಡ್ಡಿತ್ತು. ಗುರಿ ಬೆನ್ನಟ್ಟಿದ್ದ ಭಾರತ ಕ್ಕೆ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂದಾನ ಅವರು ಉತ್ತಮ ಆರಂಭ ನೀಡಿದರು. ಆದೂ 124 ರನ್‌ಗಳಾಗುಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹೊತ್ತಿನಲ್ಲಿ ಜೆಮಿಮಾ ಮತ್ತು ದೀಪ್ತಿ ಜೊತೆಯಾಗಿ ಆತಂಕ ದೂರಗೊಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.