ADVERTISEMENT

ಎರಡನೇ ಸ್ಥಾನದ ಮೇಲೆ ಕ್ಯಾಪಿಟಲ್ಸ್‌ ಕಣ್ಣು

ಆತಿಥೇಯರ ಎದುರು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ರಾಜಸ್ಥಾನ್ ರಾಯಲ್ಸ್

ಪಿಟಿಐ
Published 3 ಮೇ 2019, 19:45 IST
Last Updated 3 ಮೇ 2019, 19:45 IST
ಹ್ಯಾಟ್ರಿಕ್ ಹೀರೊ ಶ್ರೇಯಸ್ ಗೋಪಾಲ್ ಡೆಲ್ಲಿ ಎದುರಿನ ಪಂದ್ಯದಲ್ಲೂ ಮಿಂಚುವ ಭರವಸೆ ಹೊಂದಿದ್ದಾರೆ –ಪಿಟಿಐ ಚಿತ್ರ
ಹ್ಯಾಟ್ರಿಕ್ ಹೀರೊ ಶ್ರೇಯಸ್ ಗೋಪಾಲ್ ಡೆಲ್ಲಿ ಎದುರಿನ ಪಂದ್ಯದಲ್ಲೂ ಮಿಂಚುವ ಭರವಸೆ ಹೊಂದಿದ್ದಾರೆ –ಪಿಟಿಐ ಚಿತ್ರ   

ನವದೆಹಲಿ: ಹ್ಯಾಟ್ರಿಕ್ ಗೆಲುವಿನ ನಂತರ ಸೋಲಿನ ಕಹಿ ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದ ಮೇಲೆ ಕಣ್ಣಿಟ್ಟು ಶನಿವಾರ ಕಣಕ್ಕೆ ಇಳಿಯಲಿದೆ.

ಈಗಾಗಲೇ ಪ್ಲೇ ಆಫ್‌ ಹಂತಕ್ಕೇರಿರುವ ಕ್ಯಾಪಿಟಲ್ಸ್ ತವರಿನಲ್ಲಿ ನಡೆಯಲಿರುವ ಲೀಗ್‌ ಹಂತದ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಪ್ಲೇ ಆಫ್ ಹಂತದ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ರಾಯಲ್ಸ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಆದ್ದರಿಂದ ಆ ತಂಡಕ್ಕೆ ಇದು ಮಾಡು ಇಲ್ಲ ಮಡಿ ಪಂದ್ಯ.

ಕಿಂಗ್ಸ್ ಇಲೆವನ್ ಪಂಜಾಬ್‌, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಸಂಭ್ರಮಪಟ್ಟಿದ್ದ ಕ್ಯಾಪಿಟಲ್ಸ್‌ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಲೆವನ್ ವಿರುದ್ಧ 80 ರನ್‌ಗಳಿಂದ ಸೋತು ನಿರಾಸೆಗೆ ಒಳಗಾಗಿದೆ. ಆದ್ದರಿಂದ ತವರಿನ ಪ್ರೇಕ್ಷಕರ ಮುಂದೆ ಭಾರಿ ಜಯ ಗಳಿಸಿ ಭರವಸೆ ಹೆಚ್ಚಿಸಿಕೊಳ್ಳಲು ತಂಡ ಪ್ರಯತ್ನಿಸಲಿದೆ. ದೊಡ್ಡ ಅಂತರದಲ್ಲಿ ಗೆದ್ದರೆ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ. ಏಳು ವರ್ಷಗಳ ನಂತರ ಮೊದಲ ಬಾರಿ ಪ್ಲೇ ಆಫ್ ಘಟ್ಟ ತಲುಪಿರುವ ತಂಡ ಎರಡನೇ ಸ್ಥಾನ ಗಳಿಸಿದರೆ ಮೊದಲನೇ ಕ್ವಾಲಿಫೈಯರ್‌ನಲ್ಲಿ ಆಡಲು ಅವಕಾಶ ಪಡೆದುಕೊಳ್ಳಲಿದೆ.

ADVERTISEMENT

ಕಗಿಸೊ ರಬಾಡ ಅವರ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ವಿಭಾಗ ಆತಂಕಕ್ಕೊಳಗಾಗಿದೆ. ಆದರೆ ಶ್ರೇಯಸ್ ಅಯ್ಯರ್ ನಾಯಕತ್ವದ ಆತಿಥೇಯರ ಬ್ಯಾಟಿಂಗ್ ಬಳಗ ಬಲಶಾಲಿಯಾಗಿದೆ. ಪೃಥ್ವಿ ಶಾ, ಶಿಖರ್ ಧವನ್‌, ರಿಷಭ್ ಪಂತ್‌ ಮತ್ತು ಕಾಲಿನ್ ಇಂಗ್ರಾಮ್‌ ಮುಂತಾದವರು ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿ ಯಶಸ್ಸು ತಂದುಕೊಟ್ಟಿದ್ದಾರೆ.

ಭರವಸೆಯ ಆಶಾ ಕಿರಣ: ರಾಜಸ್ಥಾನ್ ರಾಯಲ್ಸ್‌ಗೆ ಪ್ಲೇ ಆಫ್‌ ಹಾದಿ ಇನ್ನೂ ಮುಕ್ತವಾಗಿದೆ. 13 ಪಂದ್ಯಗಳಲ್ಲಿ 11 ಪಾಯಿಂಟ್ ಕಲೆ ಹಾಕಿರುವ ತಂಡ ಕೊನೆಯ ಪಂದ್ಯದಲ್ಲಿ ಗೆದ್ದರೆ ಭರವಸೆ ಉಳಿಸಿಕೊಳ್ಳಬಹುದು.

ನಾಯಕ ಸ್ಟೀವ್ ಸ್ಮಿತ್‌ ವಿಶ್ವಕಪ್ ತಯಾರಿಗಾಗಿ ತವರಿಗೆ ವಾಪಸಾಗಿರುವ ಕಾರಣ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುವರು. ಸ್ಮಿತ್‌ ಬದಲಿಗೆ ಆ್ಯಶ್ಟನ್ ಟರ್ನರ್‌ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಸ್ಮಿತ್‌, ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ವಾಪಸಾಗಿರುವುದು ರಾಯಲ್ಸ್‌ ಪಾಲಿಗೆ ಸಂಕಷ್ಟ ತಂದಿದ್ದು ಬ್ಯಾಟಿಂಗ್ ವಿಭಾಗದ ಜವಾಬ್ದಾರಿ ರಹಾನೆ ಮತ್ತು ಸಂಜು ಸ್ಯಾಮ್ಸನ್‌ ಹೆಗಲ ಮೇಲೆ ಬಿದ್ದಿದೆ. ಲಿಯಾಮ್ ಲಿವಿಂಗ್‌ಸ್ಟನ್‌ ಅವರ ಮೇಲೆಯೂ ತಂಡ ಭರವಸೆ ಇರಿಸಿದೆ.

ಮಳೆ ಕಾಡಿದ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಶ್ರೇಯಸ್ ಗೋಪಾಲ್‌ ಮತ್ತೊಮ್ಮೆ ಮಿಂಚುವ ಭರವಸೆಯಲ್ಲಿದ್ದಾರೆ. ಕಳೆದ ತಿಂಗಳಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್‌ ಆರು ವಿಕೆಟ್‌ಗಳ ಜಯ ಸಾಧಿಸಿತ್ತು. ಇದಕ್ಕೆ ಸೇಡು ತೀರಿಸುವ ನಿರೀಕ್ಷೆಯಲ್ಲಿದೆ, ರಾಯಲ್ಸ್‌.

ಕಗಿಸೊ ರಬಾಡಗೆ ತವರಿನಿಂದ ಬುಲಾವ್‌
ಡೆಲ್ಲಿ ಕ್ಯಾಪಿಟಲ್ಸ್‌ ವೇಗದ ಬೌಲರ್‌ ಕಗಿಸೊ ರಬಾಡ ಅವರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಬುಲಾವ್ ಬಂದಿದ್ದು ಅವರು ತವರಿಗೆ ಮರಳಿದ್ದಾರೆ. ಆದ್ದರಿಂದ ಐಪಿಎಲ್‌ನ ಉಳಿದಿರುವ ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ.

ಬೆನ್ನುಹುರಿ ನೋವಿನಿಂದ ಬಳಲುತ್ತಿರುವ ರಬಾಡ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ದಕ್ಷಿಣ ಆಫ್ರಿಕಾ ತಂಡದ ಅಭ್ಯಾಸದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರನ್ನು ಕರೆಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.