ADVERTISEMENT

ದೇವಧರ್‌ ಟ್ರೋಫಿ ಕ್ರಿಕೆಟ್: ಅಕ್ಷರ್‌ ಪಟೇಲ್‌ ಅಬ್ಬರದ ಅರ್ಧಶತಕ

ಮಯಂಕ್‌ ಮಾರ್ಕಂಡೆಗೆ ನಾಲ್ಕು ವಿಕೆಟ್‌: ಭಾರತ ‘ಸಿ’ ಜಯಭೇರಿ

ಪಿಟಿಐ
Published 2 ನವೆಂಬರ್ 2019, 19:45 IST
Last Updated 2 ನವೆಂಬರ್ 2019, 19:45 IST
ಅಕ್ಷರ್‌ ಪಟೇಲ್‌
ಅಕ್ಷರ್‌ ಪಟೇಲ್‌   

ರಾಂಚಿ: ಅಕ್ಷರ್‌ ಪಟೇಲ್‌ (ಔಟಾಗದೆ 98; 61ಎ, 13ಬೌಂ, 3ಸಿ) ಅವರ ಅಬ್ಬರದ ಅರ್ಧಶತಕ ಮತ್ತು ಸ್ಪಿನ್ನರ್‌ ಮಯಂಕ್‌ ಮಾರ್ಕಂಡೆ (25ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಭಾರತ ‘ಸಿ’ ತಂಡ ದೇವಧರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಭಾರತ ‘ಬಿ’ ಎದುರಿನ ಪಂದ್ಯದಲ್ಲಿ 136ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಉಭಯ ತಂಡಗಳು ಈಗಾಗಲೇ ಫೈನಲ್‌ ಪ್ರವೇಶಿಸಿದ್ದು ಅದಕ್ಕೂ ಮುನ್ನ ‘ಬೆಂಚ್‌ ಸ್ಟ್ರೆಂತ್‌’ ಪರೀಕ್ಷಿಸಿಕೊಳ್ಳಲು ಈ ಪಂದ್ಯ ವೇದಿಕೆಯಾಗಿತ್ತು.

ಮೊದಲು ಬ್ಯಾಟ್‌ ಮಾಡಿದ್ದ ಶುಭಮನ್‌ ಗಿಲ್‌ ಸಾರಥ್ಯದ ಭಾರತ ‘ಸಿ’ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 280ರನ್‌ ಗಳಿಸಿತ್ತು. ಸವಾಲಿನ ಗುರಿ ಬೆನ್ನಟ್ಟಿದ ಪಾರ್ಥಿವ್‌ ಪಟೇಲ್‌ ಮುಂದಾಳತ್ವದ ಭಾರತ ‘ಬಿ’ 43.4 ಓವರ್‌ಗಳಲ್ಲಿ 144ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಈ ತಂಡದ ಯಶಸ್ವಿ ಜೈಸ್ವಾಲ್‌ (28), ಋತುರಾಜ್‌ ಗಾಯಕವಾಡ್‌ (20) ಮತ್ತು ಬಾಬಾ ಅಪರಾಜಿತ್‌ (53; 90ಎ, 5ಬೌಂ) ಮಾತ್ರ ಎದುರಾಳಿ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ಮಾಡಿದರು.

ಮೊದಲು ಬ್ಯಾಟ್‌ ಮಾಡಿದ್ದ ಶುಭಮನ್‌ ಬಳಗ 70 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ವಿರಾಟ್‌ ಸಿಂಗ್‌ (ಔಟಾಗದೆ 76; 96ಎ, 3ಬೌಂ, 3ಸಿ) ಮತ್ತು ಅಕ್ಷರ್‌ ಪಟೇಲ್‌ ಅವರು ಮುರಿಯದ ಆರನೇ ವಿಕೆಟ್‌ ಪಾಲುದಾರಿಕೆಯಲ್ಲಿ 154ರನ್‌ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದರು. ಇದಕ್ಕಾಗಿ 112 ಎಸೆತಗಳನ್ನು ಎದುರಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಸಿ’: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 280 (ಅನಮೋಲ್‌ಪ್ರೀತ್‌ ಸಿಂಗ್‌ 23, ಪ್ರಿಯಂ ಗರ್ಗ್‌ 18, ವಿರಾಟ್‌ ಸಿಂಗ್‌ ಔಟಾಗದೆ 76, ಸೂರ್ಯಕುಮಾರ್‌ ಯಾದವ್‌ 10, ದಿನೇಶ್‌ ಕಾರ್ತಿಕ್‌ 34, ಅಕ್ಷರ್‌ ಪಟೇಲ್‌ ಔಟಾಗದೆ 98; ವಿಜಯ್‌ ಶಂಕರ್‌ 18ಕ್ಕೆ1, ಶಹಬಾಜ್‌ ನದೀಮ್‌ 37ಕ್ಕೆ2, ಮೊಹಮ್ಮದ್‌ ಸಿರಾಜ್‌ 60ಕ್ಕೆ1, ನಿತೀಶ್‌ ರಾಣಾ 30ಕ್ಕೆ1).

ಭಾರತ ‘ಬಿ’: 43.4 ಓವರ್‌ಗಳಲ್ಲಿ 144 (ಯಶಸ್ವಿ ಜೈಸ್ವಾಲ್‌ 28, ಋತುರಾಜ್‌ ಗಾಯಕವಾಡ್‌ 20, ಬಾಬಾ ಅಪರಾಜಿತ್‌ 53; ಇಶಾನ್‌ ಪೊರೆಲ್‌ 33ಕ್ಕೆ2, ಅಕ್ಷರ್‌ ಪಟೇಲ್‌ 28ಕ್ಕೆ1, ಜಲಜ್‌ ಸಕ್ಸೇನಾ 25ಕ್ಕೆ2, ಮಯಂಕ್‌ ಮಾರ್ಕಂಡೆ 25ಕ್ಕೆ4).

ಫಲಿತಾಂಶ: ಭಾರತ ‘ಸಿ’ ತಂಡಕ್ಕೆ 136ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.