ADVERTISEMENT

IPL-2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಹತ್ವದ ಪಂದ್ಯ

ರಾಹುಲ್–ಚಾಹಲ್ ಮುಖಾಮುಖಿ ಇಂದು; ಗೆಲುವಿನ ವಿಶ್ವಾಸದಲ್ಲಿ ಪಂಜಾಬ್ ಕಿಂಗ್ಸ್

​ಪ್ರಜಾವಾಣಿ ವಾರ್ತೆ
Published 7 ಮೇ 2025, 23:09 IST
Last Updated 7 ಮೇ 2025, 23:09 IST
ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಸುನಿಲ್ ಜೋಶಿ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಮಾತುಕತೆ  –ಪಿಟಿಐ ಚಿತ್ರ
ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಸುನಿಲ್ ಜೋಶಿ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಮಾತುಕತೆ  –ಪಿಟಿಐ ಚಿತ್ರ   

ಧರ್ಮಶಾಲಾ (ಪಿಟಿಐ): ಹಿಮಾಲಯದ ಮಡಿಲಲ್ಲಿರುವ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗುರುವಾರ ಮುಖಾಮುಖಿಯಾಗಲಿವೆ. 

ಪ್ಲೇಆಫ್‌ ಪ್ರವೇಶದ ಅವಕಾಶವನ್ಲು ಜೀವಂತವಾಗಿಟ್ಟುಕೊಳ್ಳಲು ಡೆಲ್ಲಿ ತಂಡಕ್ಕೆ ಈ ಪಂದ್ಯದಲ್ಲಿ ಜಯಿಸುವುದು ಮಹತ್ವದ್ದಾಗಿದೆ. ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ 11 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ತಂಡವು ತನ್ನ ತವರಿನಂಗಳ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಿದ ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಜಯಿಸಿತ್ತು. 

ಡೆಲ್ಲಿ ತಂಡವು ಟೂರ್ನಿಯ ಆರಂಭದಲ್ಲಿ ನಾಲ್ಕು ಪಂದ್ಯಗಳನ್ನು ಸತತವಾಗಿ ಜಯಿಸಿತು. ಆದರೆ ನಂತರದ ಹಂತದಲ್ಲಿ ಬ್ಯಾಟರ್‌ಗಳ ಪ್ರದರ್ಶನದಲ್ಲಿ ಅಸ್ಥಿರತೆ ಕಾಡುತ್ತಿದೆ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸಾಧಾರಣ ಮೊತ್ತ ಗಳಿಸಿತ್ತು. ಮಳೆ ಬಂದ ಕಾರಣ ಆ ಪಂದ್ಯ ರದ್ದಾಗಿ ಒಂದು ಅಂಕ ಲಭಿಸಿತ್ತು. ಆ ಪಂದ್ಯದಲ್ಲಿ  ಕನ್ನಡಿಗ ಕೆ.ಎಲ್. ರಾಹುಲ್, ಕರುಣ್ ನಾಯರ್, ಅಭಿಷೇಕ್ ಪೊರೆಲ್ ಹಾಗೂ ಫಾಫ್ ಡುಪ್ಲೆಸಿ ವಿಫಲರಾಗಿದ್ದರು. ಕೆಳಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್‌, ವಿಪ್ರಜ್ ನಿಗಮ್ ಮತ್ತು ಆಶುತೋಷ್ ಶರ್ಮಾ ಅವರು ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಡೆದು ಗೌರವ ಉಳಿಸಿದ್ದರು. 

ADVERTISEMENT

ಆದರೆ  ಆತಿಥೇಯ ಪಂಜಾಬ್ ಕಿಂಗ್ಸ್ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಾಢ್ಯವಾಗಿದೆ. 11 ಪಂದ್ಯಗಳಲ್ಲಿ 7 ಗೆದ್ದು, 3 ಸೋತಿದೆ. 1 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ತಂಡವು ಮೂರನೇ ಸ್ಥಾನದಲ್ಲಿದೆ. ಶ್ರೇಯಸ್ ಅಯ್ಯರ್ ಅವರು ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಲಯದಲ್ಲಿದ್ದಾರೆ. ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ,  ಮಾರ್ಕಸ್ ಸ್ಟೋಯಿನಿಸ್, ನೇಹಲ್ ವಧೆರಾ ಅವರು ಕೂಡ ಉತ್ತಮ ಲಯದಲ್ಲಿದ್ದಾರೆ. 

ಬೌಲಿಂಗ್ ವಿಭಾಗವೂ ಚೆನ್ನಾಗಿದೆ. ಅದರಲ್ಲೂ ಸ್ಪಿನ್ನರ್ ಯಜುವೇಂದ್ರ ಚಾಹಲ್, ಎಡಗೈ ವೇಗಿ ಮಾರ್ಕೊ ಯಾನ್ಸೆನ್, ಅರ್ಷದೀಪ್ ಸಿಂಗ್ ಅವರು ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಸಮರ್ಥರಾಗಿದ್ಧಾರೆ. ಡೆಲ್ಲಿ ಬ್ಯಾಟರ್‌ಗಳಿಗೆ ಇವರು ಕಠಿಣ ಸವಾಲೊಡ್ಡಲು ಸಿದ್ಧರಾಗಿದ್ದಾರೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್. 

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಕೆ.ಎಲ್. ರಾಹುಲ್‌  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.