ADVERTISEMENT

ನಾಯಕತ್ವ ಕಳೆದುಕೊಂಡ ಮಯಂಕ್ ಅಗರವಾಲ್‌: ರಾಜ್ಯ ತಂಡಕ್ಕೆ ದೇವದತ್ತ ನಾಯಕ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 0:57 IST
Last Updated 27 ಜನವರಿ 2026, 0:57 IST
ದೇವದತ್ತ ಪಡಿಕ್ಕಲ್
ದೇವದತ್ತ ಪಡಿಕ್ಕಲ್   

ಬೆಂಗಳೂರು: ಮಯಂಕ್ ಅಗರವಾಲ್ ಅವರನ್ನು ಕರ್ನಾಟಕ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ.  ಅವರ ಸ್ಥಾನಕ್ಕೆ ದೇವದತ್ತ ಪಡಿಕ್ಕಲ್ ಅವರನ್ನು ನೇಮಕ ಮಾಡಲಾಗಿದೆ.  15 ಆಟಗಾರರ ತಂಡದಲ್ಲಿ ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ ಎಂ ಕೃಷ್ಣ ಕೂಡ ಇದ್ದಾರೆ. 

ಇದೇ 29ರಿಂದ ಮೊಹಾಲಿಯಲ್ಲಿ ಕರ್ನಾಟಕ ತಂಡವು ರಣಜಿ ಟ್ರೋಫಿ ಟೂರ್ನಿಯ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ. ನಾಕೌಟ್‌ ಹಂತಕ್ಕೆ ಅರ್ಹತೆ ಪಡೆಯಲು ಕರ್ನಾಟಕ ತಂಡವು ಈ ಪಂದ್ಯದಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ. ಕರ್ನಾಟಕ ತಂಡವು 21 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಟೂರ್ನಿಯ ಮೊದಲ ಹಂತದಲ್ಲಿ ಅಗ್ರಸ್ಥಾನದಲ್ಲಿತ್ತು. 

ಭಾನುವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮಧ್ಯಪ್ರದೇಶ ಎದುರು ಕರ್ನಾಟಕ ತಂಡವು ಸೋತಿತ್ತು.  ಅಮಿತ್ ವರ್ಮಾ ನೇತೃತ್ವದ ಆಯ್ಕೆ ಸಮಿತಿಯ ಸೋಮವಾರ ತಂಡವನ್ನು ಪ್ರಕಟಿಸಿದೆ.  

ADVERTISEMENT

ಭಾರತ ತಂಡದ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ ಎಂ ಕೃಷ್ಣ ಕೂಡ ತಂಡದಲ್ಲಿದ್ಧಾರೆ. ಮೊಹಾಲಿಯ ಪಂದ್ಯದಲ್ಲಿ ಅವರು ಆಡುವುದು ಬಹುತೇಕ ಖಚಿತವಾಗಿದೆ. 

ಭಾರತ ತಂಡದಲ್ಲಿ ಆಡಿರುವ ಅನುಭವಿ 34 ವರ್ಷದ ಮಯಂಕ್  ನಾಯಕತ್ವದಲ್ಲಿ ತಂಡವು ಈಚೆಗೆ ವಿಜಯ್ ಹಜಾರೆ ಟ್ರೋಫಿ  ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತಿತ್ತು. ಅದಕ್ಕೂ ಮುಂಚೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಏಳು ಪಂದ್ಯಗಳಿಂದ ಕೇವಲ ಎರಡರಲ್ಲಿ ಜಯಿಸಿತ್ತು.  ಮಯಂಕ್ ಅವರು ಬ್ಯಾಟಿಂಗ್‌ನಲ್ಲಿ ಕೂಡ ಸ್ಥಿರ ಪ್ರದರ್ಶನ ನೀಡಿರಲಿಲ್ಲ. 

ಮಧ್ಯಪ್ರದೇಶ ಎದುರು ಪಂದ್ಯದಲ್ಲಿ ಗಾಯಗೊಂಡಿದ್ದ ಕರುಣ್ ನಾಯರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆರ್‌. ಸ್ಮರಣ್ ಬಳಗಕ್ಕೆ ಮರಳಿದ್ದಾರೆ. 

‘ನಾಯಕತ್ವದ ಹೊರೆಯು ಮಯಂಕ್ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಿದೆ. ಅವರಿಂದ ನಮಗೆ ಬಹಳಷ್ಟು ನಿರೀಕ್ಷೆಗಳಿವೆ. ಮಹತ್ವದ ಪಂದ್ಯಗಳಲ್ಲಿ ನಿರ್ಣಾಯಕ ಆಟ ಆಡಬಲ್ಲ ಸಮರ್ಥ ಬ್ಯಾಟರ್ ಮಯಂಕ್. ಆದ್ದರಿಂದ ಅವರ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ನಾಯಕತ್ವದ ಹೊರೆ ಇಳಿಸಲಾಗಿದೆ. ಅವರು ಈಗಲೂ ಉತ್ತಮ ಸ್ಥಾನದಲ್ಲಿದ್ದಾರೆ’ ಎಂದು ಅಮಿತ್ ವರ್ಮಾ ತಿಳಿಸಿದ್ದಾರೆ.

ಈ ವಿಷಯದ ಕುರಿತು ಮಯಂಕ್ ಅವರೊಂದಿಗೆ ಸಮಿತಿಯು ಚರ್ಚೆ ಮಾಡಿದೆ ಎಂದೂ ವರ್ಮಾ ಹೇಳಿದ್ದಾರೆ. 

ಪಡಿಕ್ಕಲ್ 50 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ. ಎಡಗೈ ಬ್ಯಾಟರ್ ಏಳು ಶತಕ ಹೊಡೆದಿದ್ದು, ಒಟ್ಟು 3199 ರನ್ ಗಳಿಸಿದ್ದಾರೆ. 25 ವರ್ಷದ ಪಡಿಕ್ಕಲ್ ಅವರು ಭಾರತ ತಂಡದಲ್ಲಿ ಎರಡು ಟೆಸ್ಟ್ ಮತ್ತು 2 ಟಿ20 ಪಂದ್ಯಗಳಲ್ಲಿಯೂ ಆಡಿದ್ದಾರೆ. 

ತಂಡ: ದೇವದತ್ತ ಪಡಿಕ್ಕಲ್ (ನಾಯಕ), ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್, ಕೆ.ವಿ. ಅನೀಶ್, ಆರ್‌.ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್‌ಕೀಪರ್), ಎಂ. ವೆಂಕಟೇಶ್, ವಿದ್ಯಾಧರ್ ಪಾಟೀಲ, ವಿದ್ವತ್ ಕಾವೇರಪ್ಪ, ಪ್ರಸಿದ್ಧ ಎಂ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆ.ಎಲ್. ಶ್ರೀಜಿತ್ (ವಿಕೆಟ್‌ಕೀಪರ್), ಧ್ರುವ ಪ್ರಭಾಕರ್.  ಕೋಚ್: ಯರೇಗೌಡ, ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್, ಫೀಲ್ಡಿಂಗ್ ಕೋಚ್: ಶಬರೀಶ್ ಪಿ ಮೋಹನ್, ಮ್ಯಾನೇಜರ್: ಪಿ.ವಿ. ಸುಮಂತ್, ಸ್ಟ್ರೆಂತ್–ಕಂಡಿಷನಿಂಗ್: ಇರ್ಫಾನುಲ್ಲಾ ಖಾನ್, ಫಿಸಿಯೊ: ಅಭಿಷೇಕ್ ಕುಲಕರ್ಣಿ, ಪರ್ಫಾಮೆನ್ಸ್ ಅನಾಲಿಸ್ಟ್: ಗಿರಿಪ್ರಸಾದ್, ಮಸಾಜ್: ಸಿ.ಎಂ. ಸೋಮಸುಂದರ್, ಸೈಡ್‌ ಆರ್ಮ್ ಪರಿಣತ: ವಿ. ಅಶೋಕ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.