ADVERTISEMENT

ಧೋನಿ ಹೇರ್‌ಸ್ಟೈಲ್ ‘ಮಹಿ’ಮೆ

ಗಿರೀಶದೊಡ್ಡಮನಿ
Published 16 ಆಗಸ್ಟ್ 2020, 19:30 IST
Last Updated 16 ಆಗಸ್ಟ್ 2020, 19:30 IST
ಉದ್ದಕೂದಲಿನೊಂದಿಗೆ ಮಹೇಂದ್ರಸಿಂಗ್ ಧೋನಿ
ಉದ್ದಕೂದಲಿನೊಂದಿಗೆ ಮಹೇಂದ್ರಸಿಂಗ್ ಧೋನಿ   

ಮಹೇಂದ್ರಸಿಂಗ್ ಧೋನಿ ಎಂದಾಕ್ಷಣ ಬರೀ ಅವರ ಹೆಲಿಕಾಫ್ಟರ್ ಶಾಟ್, ವಿಕೆಟ್‌ಕೀಪಿಂಗ್ ಕೌಶಲ ಮತ್ತು ನಾಯಕತ್ವದ ನೆನಪುಗಳಷ್ಟೇ ಅಲ್ಲ. ಅದರಿಂದಾಚೆ ಅವರ ವ್ಯಕ್ತಿತ್ವದ ಹಲವು ವಿಶೇಷಗಳೂ ಗಮನ ಸೆಳೆಯುತ್ತವೆ. ಮುಖ್ಯವಾಗಿ ಅವರ ಕೇಶವಿನ್ಯಾಸಗಳು ಮತ್ತು ಬೈಕ್‌ ಕ್ರೇಜ್.

ಹದಿನಾರು ವರ್ಷಗಳ ಹಿಂದೆ ಭಾರತ ತಂಡಕ್ಕೆ ಕಾಲಿಟ್ಟಾಗ ಧೋನಿಯ ತಲೆಗೂದಲು ಭುಜ ದಾಟಿ ಬೆಳೆದಿದ್ದವು. ಬಾಲಿವುಡ್ ಸಿನಿಮಾ ‘ಸಡಕ್’ ಚಿತ್ರದ ಸಂಜಯ್ ದತ್ ಹೇರ್‌ಸ್ಟೈಲ್‌ ಮಾದರಿಯನ್ನು ಧೋನಿ ನೆನಪಿಸಿದ್ದರು. ಅವರು ಮೊದಲ ಶತಕ ಬಾರಿಸಿದ ನಂತರ ಸಿಕ್ಕ ಖ್ಯಾತಿ ಅಪಾರವಾದದ್ದು. ಅದೆಷ್ಟೋ ಹುಡುಗರು ಆಗ ಅವರ ನೀಳಕೂದಲ ವಿನ್ಯಾಸವನ್ನು ಅನುಕರಿಸಿದ್ದರು.

ಆದರೆ, 2007 ಟಿ20 ವಿಶ್ವಕಪ್‌ ಗೆದ್ದ ನಂತರ ಅವರು ತಮ್ಮ ಉದ್ದಕೂದಲಿಗೆ ಗುಡ್‌ಬೈ ಹೇಳಿದರು. ನೀಟಾಗಿ ಕ್ರಾಪ್‌ ಮಾಡಿಕೊಂಡರು. 2011ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್ ಗೆಲುವಿಗಾಗಿ ಕೊನೆಯ ಸಿಕ್ಸರ್‌ ಹೊಡೆದಾಗಲೂ ಅದೇ ವಿನ್ಯಾಸ ಇತ್ತು. ಆದರೆ, ಪಂದ್ಯದ ಮರುದಿನ ಇಂಡಿಯಾ ಗೇಟ್ ಮುಂದೆ ವಿಶ್ವಕಪ್ ಹಿಡಿದು ನಿಂತ ಧೋನಿಯ ಕೇಶವಿನ್ಯಾಸ ಬದಲಾಗಿತ್ತು. ಸಣ್ಣ ಕೂದಲಿನ ಕಟ್ ರಾರಾಜಿಸಿತ್ತು. ಅದರ ನಂತರ ಇಲ್ಲಿಯವರೆಗೆ ಅವರು ಹಲವು ರೀತಿಯ ಕೇಶವಿನ್ಯಾಸಗಳನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ ಐಪಿಎಲ್‌ನಲ್ಲಿಯೂ ಕೆರೆಬಿಯನ್ ಸ್ಟೈಲ್ ಕೇಶವಿನ್ಯಾಸದೊಂದಿಗೆ ಗಮನ ಸೆಳೆದಿದ್ದರು.

ADVERTISEMENT

ಇನ್ನು ಅವರ ಬೈಕ್, ಕಾರ್ ಪ್ರೀತಿಯ ಬಗ್ಗೆ ಬಹಳಷ್ಟು ಕಥೆಗಳು ಇವೆ. ಅವರ ಬಳಿ ಯಮಾಹಾ ಆರ್‌ಎಕ್ಸ್‌ 100 ನಿಂದ ಹಿಡಿದು ದುಬಾರಿ ಬೈಕ್‌ಗಳು ಇವೆ. ಅಲ್ಲದೇ ಕಾರುಗಳ ಸಂಗ್ರಹವೂ ದೊಡ್ಡದು. ಇತ್ತೀಚೆಗೆ ಸ್ವರಾಜ್ ಟ್ರ್ಯಾಕ್ಟರ್‌ ಕೂಡ ಖರೀದಿಸಿದ್ದರು. ಈ ಎಲ್ಲ ವಾಹನಗಳನ್ನು ಇಟ್ಟಿರುವ ಗ್ಯಾರೇಜ್‌ ನಿರ್ವಹಣೆಯನ್ನು ಸ್ವತಃ ಧೋನಿಯೇ ನೋಡಿಕೊಳ್ಳುತ್ತಾರೆ. ರಾಂಚಿಯಲ್ಲಿ ಈಗಲೂ ತಮ್ಮ ನೆಚ್ಚಿನ ಹಳೆಯ ಬೈಕ್‌ ಮೇಲೆ ಧೋನಿ ಸವಾರಿ ನಡೆದೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.