ADVERTISEMENT

ಚೆನ್ನೈಗೆ ಬಂದಿಳಿದ ಮಹೇಂದ್ರಸಿಂಗ್ ಧೋನಿ

ಚೆನ್ನೈ ಸುಫರ್ ಕಿಂಗ್ಸ್‌ ತರಬೇತಿ ಶಿಬಿರದಲ್ಲಿ ಭಾಗವಹಿಸಲಿರುವ ಆಟಗಾರರು

ಪಿಟಿಐ
Published 14 ಆಗಸ್ಟ್ 2020, 14:34 IST
Last Updated 14 ಆಗಸ್ಟ್ 2020, 14:34 IST
ಶುಕ್ರವಾರ ವಿಶೇಷ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ ಸುರೇಶ್ ರೈನಾ, ಮಹೇಂದ್ರಸಿಂಗ್ ಧೋನಿ, ದೀಪಕ್ ಚಾಹರ್ ಮತ್ತು ತಂಡದ ಸಿಬ್ಬಂದಿ  –ಟ್ವಿಟರ್ ಚಿತ್ರ
ಶುಕ್ರವಾರ ವಿಶೇಷ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ ಸುರೇಶ್ ರೈನಾ, ಮಹೇಂದ್ರಸಿಂಗ್ ಧೋನಿ, ದೀಪಕ್ ಚಾಹರ್ ಮತ್ತು ತಂಡದ ಸಿಬ್ಬಂದಿ  –ಟ್ವಿಟರ್ ಚಿತ್ರ   

ಚೆನ್ನೈ:ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಮತ್ತು ಸಹ ಆಟಗಾರರು ಶುಕ್ರವಾರ ಚೆನ್ನೈಗೆ ಬಂದಿಳಿದರು.

ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯ ಟೂರ್ನಿಗೆ ತೆರಳುವ ಮುನ್ನ ಸಿಎಸ್‌ಕೆ ತಂಡವು ಚೆನ್ನೈನಲ್ಲಿ ಶನಿವಾರಂದಿಂದ ಆರಂಭವಾಗಲಿರುವ ಒಂದು ವಾರದ ಅಭ್ಯಾಸ ಶಿಬಿರದಲ್ಲಿ ಧೋನಿ ಮತ್ತಿತರರು ಭಾಗವಹಿಸುವರು. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶಿಬಿರ ನಡೆಯಲಿದೆ.

ಧೋನಿಯೊಂದಿಗೆ ಸುರೇಶ್ ರೈನಾ, ದೀಪಕ್ ಚಾಹರ್, ಪಿಯೂಷ್ ಚಾವ್ಲಾ ಮತ್ತು ಕೇದಾರ್ ಜಾಧವ್ ಕೂಡ ಚೆನ್ನೆಗೆ ಬಂದರು.

ADVERTISEMENT

’ತಂಡದಲ್ಲಿ 16 ಮಂದಿ ಭಾರತ ತಂಡದ ಆಟಗಾರರಲ್ಲಿ 14 ಜನ ಶಿಬಿರಕ್ಕೆ ಹಾಜರಾಗುತ್ತಿದ್ದಾರೆ. ಅವರೆಲ್ಲರಿಗೂ ಕೋವಿಡ್ –19 ಪರೀಕ್ಷೆ ಮಾಡಲಾಗಿದೆ. ಇನ್ನೂ 72 ಗಂಟೆಗಳ ನಂತರ ಅವರಿಗೆ ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು. ಆಗಸ್ಟ್‌ 21ರಂದು ತಂಡವು ಯುಎಇಗೆ ಪ್ರಯಾಣ ಬೆಳೆಸಲಿದೆ‘ ಎಂದು ಸಿಎಸ್‌ಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಎಸ್‌ಕೆ ತಂಡವು ಈ ಹಿಂದೆ ಮೂರು ಸಲ ಐಪಿಎಲ್ ಪ್ರಶಸ್ತಿ ಜಯಿಸಿದೆ. ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಮತ್ತು ಸಹ ಆಟಗಾರರು ಚೆನ್ನೈಗೆ ಬಂದ ಚಿತ್ರಗಳನ್ನೂ ಸಿಎಸ್‌ಕೆ ಪ್ರಕಟಿಸಿದೆ.

ಕೊರೊನಾ ವೈರಸ್‌ ಪ್ರಸರಣದಿಂದ ಆಟಗಾರರನ್ನು ಸುರಕ್ಷಿತವಾಗಿಡಲು ಜೀವ ರಕ್ಷಾ ವಾತಾವರಣವನ್ನು ನಿರ್ಮಿಸಲಾಗಿದೆ. ಎಲ್ಲ ಆಟಗಾರರನ್ನೂ ವಿಶೇಷ ವಿಮಾನದಲ್ಲಿ ಕರೆತರಲಾಗಿದೆ. ಹೋಟೆಲ್‌ಗಳಲ್ಲಿ ಪ್ರತ್ಯೇಕವಾಸಕ್ಕೆ ಏರ್ಪಾಡು ಮಾಡಲಾಗಿದೆ. ಈ ಬಾರಿ ಯಾವ ಆಟಗಾರನೂ ತಮ್ಮ ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸುತ್ತಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.

ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಧೋನಿ ಆಡಿದ್ದರು. ಅದರ ನಂತರ ಅವರು ತಂಡಕ್ಕೆ ಮರಳಿಲ್ಲ. ಹೋದ ಮಾರ್ಚ್‌ನಲ್ಲಿ ಐಪಿಎಲ್ ನಡೆಸಲು ಉದ್ದೇಶಿಸಲಾಗಿತ್ತು. ಆಗ ಅವರು ಚೆನ್ನೈನಲ್ಲಿ ಕೆಲವು ದಿನ ಅಭ್ಯಾಸ ನಡೆಸಿದ್ದರು. ಆದರೆ ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ತಡೆಗೆ ಲಾಕ್‌ಡೌನ್ ಘೋಷಿಸಲಾಯಿತು. ಅದರಿಂದಾಗಿ ಐಪಿಎಲ್ ಟೂರ್ನಿಯನ್ನೂ ಮುಂದೂಡಲಾಯಿತು.

ಆಗ ತಮ್ಮ ತವರು ರಾಂಚಿಗೆ ತೆರಳಿದ್ದ ಧೋನಿ, ಫಾರ್ಮ್‌ಹೌಸ್‌ನಲ್ಲಿ ಸಾವಯವ ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.