ADVERTISEMENT

‘ಧೋನಿ–ಪಂತ್ ಹೋಲಿಕೆ ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 19:53 IST
Last Updated 12 ಮಾರ್ಚ್ 2019, 19:53 IST
ಭರತ್ ಅರುಣ್
ಭರತ್ ಅರುಣ್   

ನವದೆಹಲಿ: ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ಅವರನ್ನು ಅನುಭವಿ ಮಹೇಂದ್ರಸಿಂಗ್ ಧೋನಿ ಆವ ರೊಂದಿಗೆ ಹೋಲಿಕೆ ಮಾಡುವುದು ಸೂಕ್ತವಲ್ಲ ಎಂದು ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದರು.

ರಿಷಭ್ ಪಂತ್ ಮೊಹಾಲಿ ಪಂದ್ಯದಲ್ಲಿ ವಿಕೆಟ್‌ಕೀಪಿಂಗ್‌ನಲ್ಲಿ ಕ್ಯಾಚ್ ಕೈಬಿಟ್ಟಿದ್ದರು ಮತ್ತು ಕೆಲವು ಸ್ಟಂಪಿಂಗ್ ಅವಕಾಶಗಳನ್ನು ಕೈಚೆಲ್ಲಿದ್ದರು. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಕುರಿತು ಮಂಗಳವಾರ ಭರತ್ ಅರುಣ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಧೋನಿ ದಿಗ್ಗಜರು. ಅವರ ವಿಕೆಟ್‌ ಕೀಪಿಂಗ್ ಒಂದು ವಿಸ್ಮಯಕಾರಿ ಆಟ. ಅವರಿಗೆ ಅವರೇ ಸಾಟಿ. ರಿಷಭ್ ಈಗಿನ್ನೂ ಆರಂಭಿಕ. ಅವರು ಅನುಭವ ಪಡೆದಂತೆ ಪರಿಪಕ್ವಗೊಳ್ಳಬಹುದು’ ಎಂದರು.

ADVERTISEMENT

ಆಲ್‌ರೌಂಡರ್ ವಿಜಯಶಂಕರ್ ಅವರ ಆಟದ ಬಗ್ಗೆ ಭರತ್ ಮೆಚ್ಚುಗೆ ವ್ಯಕ್ತಪಡಿಸಿದರು.

ಆರ್ಮಿ ಕ್ಯಾಪ್‌ ಸೂಕ್ತ: ನಮ್ಮ ದೇಶದ ಸೇನೆಗೆ ನಾವು ಬೆಂಬಲ ವ್ಯಕ್ತಪಡಿಸಲು ಸಾಂಕೇತಿಕವಾಗಿ ಆರ್ಮಿ ಕ್ಯಾಪ್ ಧರಿಸಿ ಆಡಿದ್ದು ಉತ್ತಮ ನಿರ್ಧಾರವಾಗಿತ್ತು ಎಂದು ಭರತ್ ಹೇಳಿದರು.

ರಾಂಚಿ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಆರ್ಮಿ ಕ್ಯಾಪ್ ಧರಿಸಿ ಆಡಿದ್ದರು. ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಬಿಸಿಸಿಐ ಈ ಕ್ರಮ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.