
ಬೆಂಗಳೂರು: ‘ತಾಜ್ ಮಹಲ್ ಖ್ಯಾತಿ’ಯ ಆಗ್ರಾದ ಹುಡುಗ ಧ್ರುವ ಜುರೇಲ್ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ಪಂದ್ಯದಲ್ಲಿ ಎರಡನೇ ಶತಕ ದಾಖಲಿಸಿದರು.
ಅವರು ಮೊದಲ ಇನಿಂಗ್ಸ್‌ನಲ್ಲಿ ಅಜೇಯ 132 ರನ್ ಗಳಿಸಿದ್ದರು. ಮೂರನೇ ದಿನದಾಟದಲ್ಲಿ ನಡೆದ ಎರಡನೇ ಇನಿಂಗ್ಸ್‌ನಲ್ಲಿಯೂ ಅಜೇಯ 127 (170ಎ, 15x4, 1x6) ರನ್‌ಗಳನ್ನು ಮಾಡಿದರು. ವಿದರ್ಭ ಆಲ್‌ರೌಂಡರ್ ಹರ್ಷ ದುಬೆ (84 ರನ್) ಅಲ್ಪ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರೂ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಧ್ರುವ ಮತ್ತು ಹರ್ಷ ಜೊತೆಯಾಟದಲ್ಲಿ 184 ರನ್ ಸೇರಿಸಿದರು. ನಾಯಕ ರಿಷಭ್ ಪಂತ್ (65; 54ಎ) ಕೂಡ ಮಿಂಚಿನ ಅರ್ಧಶತಕ ಸಿಡಿಸಿದರು. ಇದರಿಂದಾಗಿ ತಂಡವು ಎರಡನೇ ಇನಿಂಗ್ಸ್‌ನಲ್ಲಿ 89.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 383 ಡಿಕ್ಲೇರ್ ಮಾಡಿಕೊಂಡಿತು. ಪ್ರವಾಸಿ ತಂಡಕ್ಕೆ 417 ರನ್‌ಗಳ ಗುರಿಯೊಡ್ಡಿದರು. ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 25 ರನ್ ಗಳಿಸಿದೆ. ಪಂದ್ಯದಲ್ಲಿ ಇನ್ನೊಂದು ದಿನ ಬಾಕಿಯಿದೆ.
ಶುಕ್ರವಾರ ಭಾರತ ‘ಎ’ ತಂಡವು ಮೊದಲ ಇನಿಂಗ್ಸ್ 34 ರನ್ ಮುನ್ನಡೆ ಗಳಿಸಿತ್ತು. ದಿನದಾಟದ ಮುಕ್ತಾಯಕ್ಕೆ 24 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 78 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಕೆ.ಎಲ್. ರಾಹುಲ್ ಮತ್ತು ಕುಲದೀಪ್ ಯಾದವ್ ಅವರು ಮೂರನೇ ದಿನದಾಟದ ಬೆಳಿಗ್ಗೆ ಬೇಗನೆ ಔಟಾದರು. ಕುಲದೀಪ್ 54 ಎಸೆತ ಆಡಿ 16 ರನ್ ಗಳಿಸಿದರು. ನಾಯಕ ಪಂತ್ 17 ರನ್ ಗಳಿಸಿದ್ಧಾಗ ಚೆಂಡು ಅವರ ಹೊಟ್ಟೆಯ ಭಾಗಕ್ಕೆ ಬಿತ್ತು. ಇದರಿಂದ ನೋವನುಭವಿಸಿದ ಅವರು ಪೆವಿಲಿಯನ್‌ಗೆ ಮರಳಿದರು.
ಈ ಹಂತದಲ್ಲಿ ಜೊತೆಗೂಡಿದ ಜುರೇಲ್ ಮತ್ತು ಹರ್ಷ ಅವರ ಜೊತೆಯಾಟ ಬಹುದೂರ ಸಾಗಿತು. ಎದುರಾಳಿ ಬೌಲರ್‌ಗಳ ಯಾವ ತಂತ್ರಕ್ಕೂ ಈ ಜೋಡಿ ಮಣಿಯಲಿಲ್ಲ. ಮೂರು ತಾಸು ಕ್ರೀಸ್‌ನಲ್ಲಿದ್ದ ಇವರಿಬ್ಬರೂ ಸೇರಿ 250 ಎಸೆತಗಳನ್ನು ಎದುರಿಸಿದರು. ಬ್ಯಾಟರ್ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಹೊಡೆತಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದ ಜುರೇಲ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ದಾಖಲಿಸಿದರು. ಹರ್ಷ ದುಬೆ ವಿಕೆಟ್ ಗಳಿಸುವಲ್ಲಿ ಸಫಲರಾದ ಟಿಶೆಪೊ ಮೊರೆಕಿ ಜೊತೆಯಾಟವನ್ನು ಮುರಿದರು.
ನೋವಿನಿಂದ ಚೇತರಿಸಿಕೊಂಡ ಪಂತ್ ಅವರು ಕ್ರೀಸ್‌ಗೆ ಮರಳಿದರು. ರಾಷ್ಟ್ರೀಯ ತಂಡದಲ್ಲಿ ತಮಗೆ ಬ್ಯಾಕ್ ಅಪ್ ವಿಕೆಟ್‌ಕೀಪರ್ ಆಗಿರುವ ಜುರೇಲ್ ಅವರೊಂದಿಗೆ 82 ರನ್ (54ಎಸೆತ) ಸೇರಿಸಿದರು. ಪ್ರವಾಸಿ ಬಳಗದ ಒಕುಲೆ ಸಿಲೆ (46ಕ್ಕೆ3) ಮಿಂಚಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 77.1 ಓವರ್‌ಗಳಲ್ಲಿ 255. ದಕ್ಷಿಣ ಆಫ್ರಿಕಾ: 47.3 ಓವರ್‌ಗಳಲ್ಲಿ 221. ಎರಡನೇ ಇನಿಂಗ್ಸ್: 89.2 ಓವರ್‌ಗಳಲ್ಲಿ 7ಕ್ಕೆ383 ಡಿಕ್ಲೇರ್ಡ್ (ಕೆ.ಎಲ್. ರಾಹುಲ್ 27, ಸಾಯಿ ಸುದರ್ಶನ್ 23, ದೇವದತ್ತ ಪಡಿಕ್ಕಲ್ 24, ಕುಲದೀಪ್ ಯಾದವ್ 16, ರಿಷಭ್ ಪಂತ್ 65, ಧ್ರುವ ಜುರೇಲ್ ಔಟಾಗದೇ 127, ಹರ್ಷ ದುಬೆ 84, ಒಕುಲೆ ಸಿಲೆ 46ಕ್ಕೆ3) ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ ಎ: 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 25 (ಜೋರ್ಡಾನ್ ಹರ್ಮನ್ ಬ್ಯಾಟಿಂಗ್ 15, ಲೆಸೆಗೊ ಸೆನೊಕಾವನೆ ಬ್ಯಾಟಿಂಗ್ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.