ADVERTISEMENT

ಐಪಿಎಲ್ ಭವಿಷ್ಯ | ‘ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ’

ಬಿಸಿಸಿಐ ಖಜಾಂಚಿ ಅರುಣ್‌ ಸಿಂಗ್‌ ಧುಮಾಲ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 1:50 IST
Last Updated 14 ಏಪ್ರಿಲ್ 2020, 1:50 IST
ಅರುಣ್‌ ಸಿಂಗ್‌ ಧುಮಾಲ್‌ (ಬಲ ತುದಿ)
ಅರುಣ್‌ ಸಿಂಗ್‌ ಧುಮಾಲ್‌ (ಬಲ ತುದಿ)   

ನವದೆಹಲಿ: ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ 13ನೇ ಆವೃತ್ತಿಯ ಭವಿಷ್ಯದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಖಜಾಂಚಿ ಅರುಣ್‌ ಸಿಂಗ್‌ ಧುಮಾಲ್‌, ಸೋಮವಾರ ಹೇಳಿದ್ದಾರೆ.

ಮಾರ್ಚ್‌ 29ಕ್ಕೆ ಆರಂಭವಾಗಬೇಕಿದ್ದ ಲೀಗ್‌ ಅನ್ನು ಕೊರೊನಾ ವೈರಾಣು ಉಲ್ಬಣಿಸುವ ಭೀತಿಯಿಂದಾಗಿ ಏಪ್ರಿಲ್‌ 15ಕ್ಕೆ ಮುಂದೂಡಲಾಗಿದೆ. ಕೊರೊನಾ ಹಾವಳಿ ಹೆಚ್ಚುತ್ತಿರುವುದರಿಂದ ಲೀಗ್‌ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

‘ಕೇಂದ್ರ ಸರ್ಕಾರವು ಯಾವಾಗ ಲಾಕ್‌ಡೌನ್‌ ತೆರವುಗೊಳಿಸುತ್ತದೆ ಎಂಬುದು ಗೊತ್ತಿಲ್ಲ. ಹೀಗಿರುವಾಗ ಐಪಿಎಲ್‌ ಭವಿಷ್ಯದ ಬಗ್ಗೆ ಚರ್ಚಿಸಿ ಪ್ರಯೋಜನವಿಲ್ಲ. ಸರ್ಕಾರದಿಂದ ಸ್ಪಷ್ಟ ನಿರ್ಧಾರ ಹೊರಬಿದ್ದ ಬಳಿಕ ನಾವೆಲ್ಲರೂ ಸಭೆ ಸೇರಿ ಮಾತನಾಡಬಹುದು. ಹೊಸ ಮಾರ್ಗವನ್ನೂ ಕಂಡುಕೊಳ್ಳಬಹುದು’ ಎಂದು ಅವರು ನುಡಿದಿದ್ದಾರೆ.

ADVERTISEMENT

‘ಐಪಿಎಲ್‌ ನಡೆಯಬೇಕೆಂದು ಎಲ್ಲರೂ ಬಯಸುತ್ತಿದ್ದಾರೆ. ಬಿಸಿಸಿಐನ ಅಧಿಕಾರಿಗಳೆಲ್ಲಾ ನಿರಂತರ ಸಂಪರ್ಕದಲ್ಲಿದ್ದೇವೆ. ಲಾಕ್‌ಡೌನ್‌ನಿಂದಾಗಿ ಆಡಳಿತಾತ್ಮಕ ಕೆಲಸಗಳು ಸ್ಥಗಿತಗೊಂಡಿವೆ. ಕಾನೂನಾತ್ಮಕ ವಿಷಯಗಳ ಕುರಿತೂ ನಾವು ಗಮನ ಹರಿಸಬೇಕಿದೆ. ಲಾಕ್‌ಡೌನ್‌ ತೆರವಾಗುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಸೋಮವಾರ ನಿಗದಿಯಾಗಿದ್ದ ಕಾನ್ಫರೆನ್ಸ್‌ ಕಾಲ್‌ ಅನ್ನೂ ರದ್ದು ಮಾಡಿದ್ದೇವೆ’ ಎಂದು ಧುಮಾಲ್‌ ಹೇಳಿದ್ದಾರೆ.

ಅಕ್ಟೋಬರ್‌–ನವೆಂಬರ್‌ನಲ್ಲಿ ಐಪಿಎಲ್‌ ನಡೆಸಲಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಕುರಿತು ಮಾತನಾಡಿದ ಅವರು ‘ಒಂದೊಮ್ಮೆ ಆಸ್ಟ್ರೇಲಿಯಾ ಸರ್ಕಾರವು ಆರು ತಿಂಗಳು ಲಾಕ್‌ಡೌನ್‌ ಮಾಡಿದರೆ ಆ ದೇಶದ ಆಟಗಾರರು ಭಾರತಕ್ಕೆ ಬರಲು ಸಾಧ್ಯವೇ. ಅಕ್ಟೋಬರ್‌ನಲ್ಲಿ ಲೀಗ್‌ ನಡೆಸಲು ಬೇರೆ ಎಲ್ಲಾ ಕ್ರಿಕೆಟ್‌ ಮಂಡಳಿಗಳೂ ಒಪ್ಪಬೇಕಲ್ಲವೇ’ ಎಂದಿದ್ದಾರೆ.

‘ಕೋವಿಡ್‌–19 ಪೀಡಿತರ ಸಂಖ್ಯೆ ಹೆಚ್ಚಿರುವ ನಗರಗಳನ್ನು ‘ಕೋವಿಡ್‌ ಹಾಟ್‌ಸ್ಪಾಟ್‌’ ಎಂದು ಘೋಷಿಸಲಾಗಿದೆ.ಒಂದೊಮ್ಮೆ ಭಾರತದಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದರೂ ಆ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಸಾಧ್ಯವೇ. ಇದರ ಅರಿವಿದ್ದರೂ ಆಟಗಾರರನ್ನು ಅಪಾಯದ ಕೂಪಕ್ಕೆ ತಳ್ಳುವುದಕ್ಕೆ ಆಗುತ್ತದೆಯೇ. ಅಭ್ಯಾಸವಿಲ್ಲದೆಯೇ ಆಟಗಾರರು ಅಂಗಳಕ್ಕಿಳಿಯುವುದಾದರೂ ಹೇಗೆ’ ಎಂದೂ ಅವರು ಪ್ರಶ್ನಿಸಿದ್ದಾರೆ.

‘ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೂ ಏಕಾಏಕಿಯಾಗಿ ಲೀಗ್‌ ನಡೆಸಲು ಆಗುವುದಿಲ್ಲ. ಅಂತರರಾಷ್ಟ್ರೀಯ ಆಟಗಾರರ ತರಬೇತಿಗೆ ಒಂದಷ್ಟು ಸಮಯ ಕೊಡಲೇಬೇಕಾಗುತ್ತದೆ. ಹೀಗೆ ಹತ್ತು ಹಲವು ವಿಷಯಗಳ ಕುರಿತು ಮೊದಲು ಚರ್ಚಿಸಬೇಕಾಗುತ್ತದೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.