ADVERTISEMENT

ಉಚಿತವಿದ್ದರೂ ಪಂದ್ಯ ನೋಡಲು ನಿರಾಸಕ್ತಿ

ಕರ್ನಾಟಕ–ಉತ್ತರ ಪ್ರದೇಶ ರಣಜಿ ಪಂದ್ಯದಲ್ಲಿ ವಿದ್ಯಾರ್ಥಿಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:33 IST
Last Updated 17 ಡಿಸೆಂಬರ್ 2019, 19:33 IST
ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ನೋಡಲು ಮಂಗಳವಾರ ಕ್ರೀಡಾಂಗಣಕ್ಕೆ ಬಂದಿದ್ದ ಚಿನ್ಮಯ ಶಾಲಾ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ನೋಡಲು ಮಂಗಳವಾರ ಕ್ರೀಡಾಂಗಣಕ್ಕೆ ಬಂದಿದ್ದ ಚಿನ್ಮಯ ಶಾಲಾ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಮೂರು ವರ್ಷಗಳ ಬಳಿಕ ಕರ್ನಾಟಕ ತಂಡದ ರಣಜಿ ಪಂದ್ಯ ನಗರದಲ್ಲಿ ಆಯೋಜನೆಯಾಗಿದ್ದರೂ ಮೊದಲ ದಿನವಾದ ಮಂಗಳವಾರ ಗ್ಯಾಲರಿಗಳು ಬಹುತೇಕ ಖಾಲಿ, ಖಾಲಿಯಾಗಿದ್ದವು. ಅಲ್ಲಲ್ಲಿ ವಿದ್ಯಾರ್ಥಿಗಳು ಮತ್ತು ಕೆಲ ಕ್ರಿಕೆಟ್‌ ಪ್ರೇಮಿಗಳಷ್ಟೇ ಉತ್ತರ ಪ್ರದೇಶ ಎದುರಿನ ಪಂದ್ಯದ ಸವಿ ಸವಿದರು.

ಈ ಪಂದ್ಯ ನೇರ ಪ್ರಸಾರವಾಗುತ್ತಿದ್ದರೂ, ಸ್ಥಳೀಯ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದು ಪಂದ್ಯ ನೋಡಬೇಕೆನ್ನುವ ಉದ್ದೇಶದಿಂದ ಕೆಎಸ್‌ಸಿಎ ಪ್ರತಿನಿಧಿಗಳು ಅವಳಿ ನಗರದ ಪ್ರಮುಖ ಶಾಲೆಗಳು ಮತ್ತು ಕ್ಲಬ್‌ಗಳಿಗೆ ಪಂದ್ಯ ನೋಡಲು ಮಕ್ಕಳನ್ನು ಕಳುಹಿಸುವಂತೆ ಕೋರಿತ್ತು. ಇದಕ್ಕೆ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿಲ್ಲ.

ಆದರೂ, ಮಂಗಳವಾರ ಕೆಲ ಕ್ರಿಕೆಟ್‌ ಪ್ರೇಮಿಗಳು ತಮ್ಮ ನೆಚ್ಚಿನ ಆಟಗಾರರ ಹೆಸರು ಕೂಗಿ ಸಂಭ್ರಮಿಸಿದರು. ಇತ್ತೀಚಿಗೆ ಆರು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದ ಅಭಿಮನ್ಯು ಮಿಥುನ್‌, ಭಾರತ ತಂಡದಲ್ಲಿ ಆಡಿರುವ ಕರ್ನಾಟಕ ತಂಡದ ನಾಯಕ ಕರುಣ್‌ ನಾಯರ್‌ ಅವರ ಹೆಸರನ್ನು ಕೂಗಿ ಖುಷಿಪಡುತ್ತಿದ್ದ ಚಿತ್ರಣ ಕಂಡುಬಂತು.

ADVERTISEMENT

ವಿಶೇಷವೆಂದರೆ, ಉತ್ತರ ಪ್ರದೇಶ ತಂಡದ ಮೊಹಮ್ಮದ್ ಸೈಫ್‌ ಅರ್ಧಶತಕ ಮತ್ತು ಆರ್ಯನ್‌ ಜುಯಾಲ್‌ ಶತಕ ಹೊಡೆದಾಗಲೂ ವಿದ್ಯಾರ್ಥಿಗಳು ಕೇಕೆ ಹೊಡೆದು, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಕರ್ನಾಟಕದ ಬೌಲರ್‌ಗಳು ವಿಕೆಟ್‌ ಪಡೆದಾಗ ವಿದ್ಯಾರ್ಥಿಗಳು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದರು.

ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಲ್ಲಿ ಆಡಿರುವ ರಾಜ್ಯ ತಂಡದ ಉಪನಾಯಕ ಶ್ರೇಯಸ್ ಗೋಪಾಲ್‌ ಬೌಲಿಂಗ್ ಮಾಡುವಾಗ ‘ಶ್ರೇಯಸ್‌... ಶ್ರೇಯಸ್‌...’ ಎಂದು ಹರ್ಷೋದ್ಗಾರ ಮಾಡುತ್ತಿದ್ದರು. ವಿನಯ ಕುಮಾರ್‌ ರಾಜ್ಯ ತಂಡದಲ್ಲಿ ಇಲ್ಲದಿದ್ದರೂ, ಅವರ ಕೆಲ ಅಭಿಮಾನಿಗಳು ವಿನಯ ಹೆಸರು ಕೂಗುತ್ತಿದ್ದು ಕೇಳಿಬಂತು!

ಎಲ್‌ಐಸಿ ಎಜೆಂಟ್ ಆಗಿರುವ ಸುರೇಶ ಕಣಿಕಲ್‌ ಪಂದ್ಯ ನೋಡಲು ಹಾವೇರಿಯಿಂದ ಬಂದಿದ್ದರು. ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಕ್ರೀಡಾಂಗಣದಲ್ಲಿ ನೇರವಾಗಿ ಪಂದ್ಯ ನೋಡಲು ಯಾವಾಗಲೂ ಅವಕಾಶ ಸಿಗುವುದಿಲ್ಲ. ಊಈ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳಬೇಕು’ ಎಂದರು.

ಕಂಪನಿಯೊಂದರಲ್ಲಿ ಮಾರುಕಟ್ಟೆ ವ್ಯವಸ್ಥಾಪಕರಾಗಿರುವ ಜಿ.ಬಿ. ಪಾಟೀಲ ಮಾತನಾಡಿ ‘ಪಂದ್ಯ ನೋಡುವ ಸಲುವಾಗಿಯೇ ಕಚೇರಿಗೆ ರಜೆ ಹಾಕಿ ಬಂದಿದ್ದೇನೆ. ನನ್ನ ಮಗನನ್ನೂ ಕರೆದುಕೊಂಡುಬಂದಿದ್ದೇನೆ’ ಎಂದರು.

ಸ್ಥಳೀಯರಿಗೆ ಸ್ಫೂರ್ತಿ: ಮೆನನ್‌

ರಾಷ್ಟ್ರೀಯ ತಂಡ, ಭಾರತ ‘ಎ’ ತಂಡ ಮತ್ತು ಐಪಿಎಲ್‌ ಟೂರ್ನಿಗಳಲ್ಲಿ ಆಡಿದ ಅನೇಕ ಆಟಗಾರರು ಈ ಪಂದ್ಯದಲ್ಲಿ ಆಡುತ್ತಿದ್ದಾರೆ. ಅವರ ಆಟ ನೋಡಲು ಮತ್ತು ಅವರಿಂದ ಕಲಿತುಕೊಳ್ಳಲು ಸ್ಥಳೀಯ ಆಟಗಾರರಿಗೆ ಇದು ಉತ್ತಮ ಅವಕಾಶ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ ಮೆನನ್‌ ಹೇಳಿದರು.

‘ನೇರವಾಗಿ ಮೈದಾನದಲ್ಲಿ ಪಂದ್ಯಗಳನ್ನು ನೋಡುವ ಅವಕಾಶ ಸ್ಥಳೀಯವಾಗಿಯೇ ಸಿಕ್ಕಾಗ ಬಿಡಬಾರದು. ಪೋಷಕರು ಕೂಡ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.