ADVERTISEMENT

ಮಹಿಳೆಯರ ಏಷ್ಯಾ ಕಪ್‌ ಟಿ20 ಟೂರ್ನಿ: ಸೆಮಿಯತ್ತ ಅಜೇಯ ಭಾರತದ ಚಿತ್ತ

ನೇಪಾಳ ವಿರುದ್ಧ ಇಂದು ಪಂದ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 12:43 IST
Last Updated 22 ಜುಲೈ 2024, 12:43 IST
   

ದಂಬುಲಾ: ಆಡಿದ ಮೊದಲ ಎರಡೂ ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದುಕೊಂಡಿರುವ ಭಾರತ ತಂಡ, ಮಹಿಳೆಯರ ಟಿ20 ಏಷ್ಯಾ ಕಪ್‌ ‘ಎ’ ಗುಂಪಿನ ತನ್ನ ಅಂತಿಮ ಪಂದ್ಯದಲ್ಲಿ ಮಂಗಳವಾರ ನೇಪಾಳ ತಂಡವನ್ನು ಎದುರಿಸಲಿದೆ.

ಭಾರತವು ಈ ಪಂದ್ಯವನ್ನೂ ಗೆದ್ದು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸುವ ತವಕದಲ್ಲಿದೆ. ಹರ್ಮನ್‌ಪ್ರೀತ್ ಕೌರ್‌ ಬಳಗ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮೇಲೆ ಏಳು ವಿಕೆಟ್‌ಗಳಿಂದ, ಭಾನುವಾರ ಯುಎಇ ಮೇಳೆ 78 ರನ್‌ಗಳಿಂದ ಜಯಗಳಿಸಿ ನಿರೀಕ್ಷೆಯಂತೆ ಯಶಸ್ಸಿನ ಓಟದಲ್ಲಿದೆ.

ಭಾನುವಾರ ಪಾಕಿಸ್ತಾನ ಕೈಲಿ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿರುವ ನೇಪಾಳ ಆ ಆಘಾತದಿಂದ ಹೊರಬರುವ ಮೊದಲೇ ಬಲಿಷ್ಠ ಭಾರತ ತಂಡದ ಸವಾಲನ್ನು ಎದುರಿಸಬೇಕಾಗಿದೆ.

ADVERTISEMENT

‌ಭಾರತ ಸೆಮಿಫೈನಲ್‌ ತಲುಪುವ ಧಾವಂತದಲ್ಲಿದ್ದರೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವು, ನೇಪಾಳ ಮೇಲೆ ಗಳಿಸಿದ ಭರ್ಜರಿ ಜಯದಿಂದಾಗಿ ರನ್‌ರೇಟ್‌ ಸುಧಾರಿಸಿಕೊಂಡು ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ.

ಭಾರತ ತಂಡ, ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದು, ಅದನ್ನು ಮಂಗಳವಾರವೂ ಮುಂದುವರಿಸುವ ಉತ್ಸಾಹದಲ್ಲಿದೆ. ಪಾಕ್ ವಿರುದ್ಧ ಬೌಲರ್‌ಗಳ ಉತ್ತಮ ಪ್ರದರ್ಶನದ ನಂತರ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅಮೋಘವಾಗಿ ಆಡಿದ್ದರು. ಯುಎಇ ವಿರುದ್ಧ ಹರ್ಮನ್‌ಪ್ರೀತ್ ಮತ್ತು ರಿಚಾ ಘೋಷ್‌ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ್ದರು. ರಿಚಾ ಅವರಂತೂ ಸ್ಫೋಟಕ ಇನಿಂಗ್ಸ್‌ ಆಡಿ ಕೇವಲ 29 ಎಸೆತಗಳಲ್ಲಿ 64 ರನ್ ಬಾಚಿದ್ದರು. ಕೌರ್ ಇನಿಂಗ್ಸ್‌ಗೆ ಲಂಗರು ಹಾಕಿ 66 ರನ್ ಹೊಡೆದಿದ್ದರು. ಭಾರತ ವನಿತೆಯರು ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿ 200 ರನ್‌ಗಳ  ಮೊತ್ತ ದಾಟಿದ್ದರು.

ರನ್‌ವೇಗ ನಿಯಂತ್ರಿಸಲು ಮತ್ತು ವಿಕೆಟ್‌ಗಳನ್ನು ಪಡೆಯುವಲ್ಲಿ ರೇಣುಕಾ ಸಿಂಗ್‌, ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ಯಶಸ್ವಿಯಾಗುತ್ತಿದ್ದಾರೆ. ಶ್ರೇಯಾಂಕಾ ಪಾಟೀಲ್ ಬದಲು ಅವಕಾಶ ಪಡೆದ ತನುಜಾ ಕನ್ವರ್‌ ಕೂಡ ನಾಲ್ಕು ಓವರ್‌ಗಳಲ್ಲಿ ತೆತ್ತಿದ್ದು 14 ರನ್‌ಗಳನ್ನಷ್ಟೇ.

ಇಂದೂ ಬಾರ್ಮಾ ನೇತೃತ್ವದ ನೇಪಾಳ ಮೊದಲ ಪಂದ್ಯದಲ್ಲಿ ಯುಎಇ ಮೇಲೆ ಆರು ವಿಕೆಟ್‌ಗಳ ಗೆಲುವಿನೊಡನೆ ಶುಭಾರಂಭ ಮಾಡಿದರೂ, ನಂತರ ಪಾಕ್ ಎದುರು ಸೋತಿತ್ತು. ಈಗ ಪ್ರಬಲ ಭಾರತಕ್ಕೆ ಸವಾಲೊಡ್ಡುವುದು ಹಿಮಾಲಯದ ತಪ್ಪಲಿನ ಪುಟ್ಟ ದೇಶದ ತಂಡಕ್ಕೆ ಸುಲಭವೇನಲ್ಲ.

ಪಂದ್ಯ ಆರಂಭ: ರಾತ್ರಿ 7.00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.