ಕೋಲ್ಕತ್ತ : ‘ಚಾಂಪಿಯನ್ಸ್ ಟ್ರೋಫಿ ತಂಡದಿಂದ ತಮ್ಮನ್ನು ಕೈಬಿಟ್ಟಿದ್ದರಿಂದ ನೋವೇನೂ ಆಗಿಲ್ಲ. ಅದನ್ನು ಒಪ್ಪಿಕೊಂಡಿದ್ದೇನೆ. ಆದರೆ ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಲಾಗದ್ದಕ್ಕೆ ಬೇಸರವಿದೆ. ಈಗ ಆಯ್ಕೆಯಾದವರು ತಂಡದಲ್ಲಿರಲು ಯೋಗ್ಯರು’ ಎಂದು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಂಗಳವಾರ ಹೇಳಿದ್ದಾರೆ.
ಬೀಸಾಟಕ್ಕೆ ಹೆಸರಾದ ಸೂರ್ಯ ಅವರನ್ನು ಆಯ್ಕೆಗಾರರು 15 ಆಟಗಾರರ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಕಡೆಗಣಿಸಿದ್ದರು. ಆದರೆ ಬುಧವಾರ ಇಂಗ್ಲೆಂಡ್ ವಿರುದ್ಧ ಆರಂಭವಾಗುವ ಟಿ20 ಸರಣಿಗೆ ಅವರು ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
ತಮ್ಮ ಬತ್ತಳಿಕೆಯಲ್ಲಿರುವ ವೈವಿದ್ಯಮಯ ಹೊಡೆತಗಳ ಮೂಲಕ ಸೂರ್ಯಕುಮಾರ್ ಅವರು ಟಿ20 ಕ್ರಿಕೆಟ್‌ನ ಸ್ಫೋಟಕ ಆಟಗಾರರಲ್ಲಿ ಒಬ್ಬರು ಎನಿಸಿದ್ದಾರೆ. ಆದರೆ ಇದೇ ಆಟವನ್ನು ಅವರು 50 ಓವರುಗಳ ಮಾದರಿಯಲ್ಲಿ ತೋರಿಲ್ಲ. 37 ಏಕದಿನ ಪಂದ್ಯಗಳಲ್ಲಿ ಅವರು 25.76 ಸರಾಸರಿಯಲ್ಲಿ 773 ರನ್ ಮಾತ್ರ ಗಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಸೇರ್ಪಡೆಗೊಳಿಸ ಕಾರಣ ಬೇಸರ ಆಗಿದೆಯೇ ಎಂಬ ಪ್ರಶ್ನೆಗೆ ಶಾಂತಚಿತ್ತದಿಂದ ಉತ್ತರಿಸಿದ ಅವರು ‘ಬೇಸರ ಏಕೆ ಆಗಬೇಕು? ನಾನು ಚೆನ್ನಾಗಿ ಆಡಿದಿದ್ದರೆ ತಂಡದಲ್ಲಿರುತ್ತಿದ್ದೆ. ನಾನು ಚೆನ್ನಾಗಿ ಆಡದಿದ್ದರೆ, ಅದನ್ನು ಒಪ್ಪಿಕೊಳ್ಳುವುದು ಮುಖ್ಯ’ ಎಂದರು.
‘ಇದೇ ವೇಳೆ ತಂಡವನ್ನೊಮ್ಮೆ (ಚಾಂಪಿಯನ್ಸ್ ಟ್ರೋಫಿ) ನೋಡಿ. ಅದು ಅತ್ಯುತ್ತಮವಾಗಿದೆ. ಯಾರೆಲ್ಲ ತಂಡದಲ್ಲಿದ್ದಾರೆ ಅವರೆಲ್ಲರೂ ಉತ್ತಮ ಸಾಧನೆ ಮಾಡಿದವರು’ ಎಂದು ಸೂರ್ಯ ಹೇಳಿದರು.
ದೈಹಿಕ ಕ್ಷಮತೆ ಹೊಂದಿದ್ದ ಪಕ್ಷದಲ್ಲಿ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಸಂಯೋಜನೆ ಯಾವುದೇ ಎದುರಾಳಿ ತಂಡಕ್ಕೆ ನಡುಕ ಉಂಟುಮಾಡಬಲ್ಲದು ಎಂದರು. ‘ಅವರಿಬ್ಬರೂ ಸಾಕಷ್ಟು ಆಡಿದವರು. ಇಬ್ಬರಿಗೂ ಅನುಭವ ಧಾರಾಳವಾಗಿದೆ. ದೇಶಕ್ಕೆ ಆಡುವುದೇ ಒಂದು ಅನುಭವ. ಅದೊಂದು ಭಾವನೆ. ಹೊಣೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.