ಆಕಾಶ್ ದೀಪ್
ಪಿಟಿಐ ಚಿತ್ರ
ಕೋಲ್ಕತ್ತ: ಭಾರತ ತಂಡದ ವೇಗಿ ಆಕಾಶ್ ದೀಪ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ದುಲೀಪ್ ಟ್ರೋಫಿಯಲ್ಲಿ ಆಡುವ ಪೂರ್ವ ವಲಯ ತಂಡಕ್ಕೆ ಅಲಭ್ಯರಾಗಿದ್ದಾರೆ. ಇಶಾನ್ ಅವರು ತಂಡವನ್ನು ಮುನ್ನಡೆಸಬೇಕಿತ್ತು.
ಗಾಯಾಳಾಗಿದ್ದ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿಯ ಪಂದ್ಯಗಳು ಇದೇ ತಿಂಗಳ 28ರಿಂದ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿವೆ.
ಇಂಗ್ಲೆಂಡ್ ಸರಣಿ ವೇಳೆ ಕಾಣಿಸಿಕೊಂಡ ಬೆನ್ನುನೋವಿನಿಂದ ಆಕಾಶ್ ದೀಪ್ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರು ಎರಡು ಟೆಸ್ಟ್‌ಗಳಲ್ಲಿ ಆಡಿರಲಿಲ್ಲ. ಬಂಗಾಳದ ವೇಗಿ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಪಡೆದ 10 ವಿಕೆಟ್‌ಗಳ ಗೊಂಚಲು ಸೇರಿದಂತೆ ಸರಣಿಯಲ್ಲಿ 13 ವಿಕೆಟ್ ಗಳಿಸಿ ಗಮನಸೆಳೆದಿದ್ದರು. 28 ವರ್ಷದ ಆಕಾಶ್ ಬದಲು ಬಿಹಾರದ ಮುಕ್ತಾರ್ ಹುಸೇನ್ ಅವರು ಪೂರ್ವ ವಲಯ ತಂಡ ಸೇರಿಕೊಳ್ಳಲಿದ್ದಾರೆ.
ಇಶಾನ್ ಅವರು ಇ–ಬೈಕ್‌ನಿಂದ ಬಿದ್ದು ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಕೆಲವು ಹೊಲಿಗೆಗಳನ್ನು ಹಾಕಿದ್ದು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಆರೈಕೆಯಲ್ಲಿದ್ದಾರೆ ಎಂದು ಅವರ ಆಪ್ತ ಮೂಲವೊಂದು ಸುದ್ದಿಸಂಸ್ಥೆಗೆ ತಿಳಿಸಿವೆ. ಇದು ಗಂಭೀರ ಸ್ವರೂಪದ ಗಾಯವಲ್ಲ. ಅವರು ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಸ್ವದೇಶದಲ್ಲಿ ನಡೆಯುವ ನಾಲ್ಕು ದಿನಗಳ ಪಂದ್ಯದ ವೇಳೆಗೆ ಫಿಟ್ ಆಗುವ ನಿರೀಕ್ಷೆಯಿದೆ.
ಇಶಾನ್ ಬದಲು ಬಂಗಾಳದ ಬ್ಯಾಟರ್ ಅಭಿಮನ್ಯು ಈಶ್ವರನ್ ತಂಡವನ್ನು ಮುನ್ನಡೆಸಲಿದ್ದಾರೆ. ಇಶಾನ್ ಬದಲು ಒಡಿಶಾದ ಆಶೀರ್ವಾದ್ ಸ್ವೇನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಾರ್ಖಂಡ್‌ನ ಕುಮಾರ ಕುಶಾಗ್ರ ಅವರು ಮೊದಲ ಆಯ್ಕೆಯ ಕೀಪರ್ ಆಗುವ ಸಾಧ್ಯತೆಯಿದೆ.
ತೋಳಿನ ಗಾಯದಿಂದಾಗಿ ಇಶಾನ್ ಅವರು ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದಿರಲಿಲ್ಲ. ರಿಷಭ್ ಗಾಯಗೊಂಡಾಗ ಇಶಾನ್ ಬದಲು ತಮಿಳುನಾಡಿನ ಎನ್.ಜಗದೀಶನ್ ಬ್ಯಾಕ್‌ಅಪ್ ಕೀಪರ್ ಆಗಿದ್ದರು.
ಪರಿಷ್ಕೃತ ತಂಡ: ಅಭಿಮನ್ಯು ಈಶ್ವರನ್ (ನಾಯತಕ), ರಿಯಾನ್ ಪರಾಗ್ (ಉಪನಾಯಕ), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ದೆನಿಶ್ ದಾಸ್, ಶ್ರೀಧಮ್ ಪಾಲ್, ಶರಣದೀಪ್ ಸಿಂಗ್, ಕುಮಾರ ಕುಶಾಗ್ರ (ವಿಕೆಟ್ ಕೀಪರ್), ಆಶೀರ್ವಾದ್ ಸ್ವೇನ್ (ವಿಕೆಟ್ ಕೀಪರ್), ಉತ್ಕಷ್ ಸಿಂಗ್, ಮನಿಷಿ, ಸೂರ್ ಸಿಂಧು ಜೈಸ್ವಾಲ್, ಮುಕೇಶ್ ಕುಮಾರ್, ಮುಕ್ತಾರ್ ಹುಸೇನ್, ಮೊಹಮ್ಮದ್ ಶಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.