ADVERTISEMENT

ದುಲೀಪ್‌ ಟ್ರೋಫಿ ಟೂರ್ನಿ: ಮರಳಿ ಉರುಳಲಿದೆ ಕೆಂಪು ಚೆಂಡು

ಪಿಟಿಐ
Published 6 ಆಗಸ್ಟ್ 2019, 13:02 IST
Last Updated 6 ಆಗಸ್ಟ್ 2019, 13:02 IST
ದುಲೀಪ್ ಟ್ರೋಫಿ  –ಬಿಸಿಸಿಐ ಚಿತ್ರ
ದುಲೀಪ್ ಟ್ರೋಫಿ  –ಬಿಸಿಸಿಐ ಚಿತ್ರ   

ನವದೆಹಲಿ: ಹೊನಲು ಬೆಳಕಿನಲ್ಲಿ ಆಯೋಜಿಸಲಾಗುತ್ತಿದ್ದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಮತ್ತೆ ಹಳೆಯ ದಾರಿಗೆ ಮರಳಲಿದೆ. ಹಗಲು–ರಾತ್ರಿ ಪಂದ್ಯಗಳು ನಡೆಯುತ್ತಿದ್ದ ಏಕೈಕ ದೇಶಿ ಟೂರ್ನಿ ಇದಾಗಿತ್ತು.

ಟಿವಿ ಪ್ರಸಾರ ಇರದ ಕಾರಣ ದುಲೀಪ್ ಟ್ರೋಫಿ ಪಂದ್ಯಗಳ ಆಯೋಜನೆಯನ್ನು ಹಗಲು ಹೊತ್ತಿನಲ್ಲಿಯೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದರಿಂದಾಗಿ ಮತ್ತೆ ಕೆಂಪು ಚೆರ್ರಿ ಚೆಂಡು ಪುಟಿಯಲಿದೆ. ಫೈನಲ್ ಪಂದ್ಯ ಮಾತ್ರ ಹೊನಲುಬೆಳಕಿನಲ್ಲಿ ನಡೆಯಲಿದೆ.

ಹೋದ ಮೂರು ಋತುಗಳಲ್ಲಿ ದುಲೀಪ್ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಹಗಲು–ರಾತ್ರಿ ಆಯೋಜಿಸಲಾಗುತ್ತಿತ್ತು. ತಿಳಿಗುಲಾಬಿ ಚೆಂಡು ಬಳಕೆಯಾಗಿತ್ತು. ಇದೇ 17ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಟೂರ್ನಿಯು ಸೆಪ್ಟೆಂಬರ್‌ 9ರವರೆಗೆ ನಡೆಯಲಿದೆ. ಭಾರತದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸುವ ಭವಿಷ್ಯದ ತಾರೆಗಳ ಹಾರುಹಲಗೆ ಎಂದೇ ಹೇಳಲಾಗುವ ಟೂರ್ನಿಯಲ್ಲಿ ಈ ಬಾರಿ ಯುವ ನಾಯಕರು ಮೂರು ತಂಡಗಳನ್ನು ಮುನ್ನಡೆಸುತ್ತಿದ್ದಾರೆ.

ADVERTISEMENT

ಶುಭಮನ್ ಗಿಲ್ (ಇಂಡಿಯಾ ಬ್ಲ್ಯೂ), ಫಯಾಜ್ ಫಜಲ್ (ಇಂಡಿಯಾ ಗ್ರೀನ್) ಮತ್ತು ಪ್ರಿಯಾಂಕ್ ಪಾಂಚಾಲ್ (ಇಂಡಿಯಾ ರೆಡ್) ಅವರು ನಾಯಕತ್ವ ವಹಿಸಲಿದ್ದಾರೆ.

‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫ್ಲಡ್‌ಲೈಟ್ ವ್ಯವಸ್ಥೆ ಚೆನ್ನಾಗಿದೆ. ಆದರೆ, ನಾವು ಫೈನಲ್ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳನ್ನೂ ಹಗಲು ಹೊತ್ತಿನಲ್ಲಿಯೇ ಆಯೋಜಿಸುತ್ತೇವೆ. ತಿಳಿಗುಲಾಬಿ ವರ್ಣದ ಚೆಂಡು ಬಳಸುತ್ತಿಲ್ಲ. ಸೆ.5 ರಿಂದ9ರವರೆಗೆ ನಡೆಯುವ ಫೈನಲ್ ಮಾತ್ರ ಹೊನಲು ಬೆಳಕಿನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ’ ಎಂದು ಕ್ರಿಕೆಟ್‌ ಚಟುವಟಿಕೆಗಳ ವಿಭಾಗದ ಮುಖ್ಯ ವ್ಯವಸ್ಥಾಪಕ ಸಾಬಾ ಕರೀಂ ತಿಳಿಸಿದ್ದಾರೆ.

‘ಭಾರತ ತಂಡವು ಮುಂಬರುವ ಯಾವುದೇ ಟೆಸ್ಟ್ ಸರಣಿಯಲ್ಲಿಯೂ ತಿಳಿಗುಲಾಬಿ ಬಣ್ಣದ ಚೆಂಡಿನಲ್ಲಿ ಆಡುತ್ತಿಲ್ಲ. ತಂಡವು ಆಡುವ ಎಲ್ಲ ಸರಣಿಗಳೂ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಂಗವಾಗಿವೆ. ಆದ್ದರಿಂದ ದುಲೀಪ್ ಟ್ರೋಫಿಯಲ್ಲಿ ತಿಳಿಗುಲಾಬಿ ಚೆಂಡು ಬಳಸುವುದರಿಂದ ಆಟಗಾರರಿಗೆ ಏನೂ ಲಾಭವಿಲ್ಲ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.