ADVERTISEMENT

ದುಲೀಪ್‌ ಟ್ರೋಫಿ: ಯಶಸ್ವಿ ಜೈಸ್ವಾಲ್‌ ದ್ವಿಶತಕದಾಟ

ಪಶ್ಚಿಮ ವಲಯ ಮರುಹೋರಾಟ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:20 IST
Last Updated 23 ಸೆಪ್ಟೆಂಬರ್ 2022, 13:20 IST
ಯಶಸ್ವಿ ಜೈಸ್ವಾಲ್‌ –ಸಂಗ್ರಹ ಚಿತ್ರ
ಯಶಸ್ವಿ ಜೈಸ್ವಾಲ್‌ –ಸಂಗ್ರಹ ಚಿತ್ರ   

ಕೊಯಮತ್ತೂರು: ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ (ಬ್ಯಾಟಿಂಗ್‌ 209) ಅವರ ಅಜೇಯ ದ್ವಿಶತಕದ ನೆರವಿನಿಂದ ಪಶ್ಚಿಮ ವಲಯ ತಂಡ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ವಲಯಕ್ಕೆ ದಿಟ್ಟ ಉತ್ತರ ನೀಡಿದೆ.

ಕೊಯಮತ್ತೂರಿನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರ 20 ವರ್ಷದ ಯುವ ಬ್ಯಾಟರ್‌ ಜೈಸ್ವಾಲ್‌ ಮೆರೆದಾಡಿದರು. ಇದರಿಂದ ಪಶ್ಚಿಮ ವಲಯ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 85 ಓವರ್‌ಗಳಲ್ಲಿ 3 ವಿಕೆಟ್‌ಗೆ 376 ರನ್‌ ಗಳಿಸಿದೆ.

ಅಜಿಂಕ್ಯ ರಹಾನೆ ನೇತೃತ್ವದ ತಂಡ ಮೊದಲ ಇನಿಂಗ್ಸ್‌ನಲ್ಲಿ 57 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಆಟವಾಡಿ ಇದೀಗ 319 ರನ್‌ಗಳ ಮುನ್ನಡೆಯಲ್ಲಿದೆ.

ADVERTISEMENT

ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, ಶನಿವಾರವೂ ಬ್ಯಾಟಿಂಗ್‌ ಮುಂದುವರಿಸಿ ಎದುರಾಳಿ ತಂಡಕ್ಕೆ ಕಠಿಣ ಗುರಿ ನೀಡುವ ಲೆಕ್ಕಾಚಾರವನ್ನು ರಹಾನೆ ಬಳಗ ಹಾಕಿಕೊಂಡಿದೆ.

244 ಎಸೆತಗಳನ್ನು ಎದುರಿಸಿದ ಜೈಸ್ವಾಲ್‌ 23 ಬೌಂಡರಿ ಹಾಗೂ 3 ಸಿಕ್ಸರ್‌ ಹೊಡೆದರು. ಅವರೊಂದಿಗೆ ಸರ್ಫರಾಜ್‌ ಖಾನ್‌ (ಬ್ಯಾಟಿಂಗ್‌ 30) ಅವರು ಶನಿವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

ಜೈಸ್ವಾಲ್‌ ಮತ್ತು ಪ್ರಿಯಾಂಕ್‌ ಪಾಂಚಾಲ್‌ (40 ರನ್‌, 64 ಎ.) ಮೊದಲ ವಿಕೆಟ್‌ಗೆ 110 ರನ್‌ ಸೇರಿಸಿದರು. ಪಾಂಚಾಲ್‌ ವಿಕೆಟ್‌ ಪಡೆದ ಸಾಯಿ ಕಿಶೋರ್‌ ಈ ಜತೆಯಾಟ ಮುರಿದರು. ರಹಾನೆ (15) ಅವರು ಕೆ.ಗೌತಮ್‌ಗೆ ಬೇಗನೇ ವಿಕೆಟ್ ಒಪ್ಪಿಸಿದರು.

ಆದರೆ ಜೈಸ್ವಾಲ್‌ ಅವರನ್ನು ಕೂಡಿಕೊಂಡ ಶ್ರೇಯಸ್‌ ಅಯ್ಯರ್‌ (71 ರನ್‌, 113 ಎ.) ಮೂರನೇ ವಿಕೆಟ್‌ಗೆ 169 ರನ್‌ ಸೇರಿಸಿ ಎದುರಾಳಿ ತಂಡವನ್ನು ಕಾಡಿದರು. ದಕ್ಷಿಣ ವಲಯ ತಂಡದ ಸ್ಪಿನ್‌ ಮತ್ತು ವೇಗದ ಬೌಲಿಂಗ್‌ ದಾಳಿಯನ್ನು ಈ ಜೋಡಿ ಸಮರ್ಥವಾಗಿ ಎದುರಿಸಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಪಶ್ಚಿಮ ವಲಯ: 96.3 ಓವರ್‌ಗಳಲ್ಲಿ 270. ದಕ್ಷಿಣ ವಲಯ: 83.1 ಓವರ್‌ಗಳಲ್ಲಿ 327. ಎರಡನೇ ಇನಿಂಗ್ಸ್: ಪಶ್ಚಿಮ ವಲಯ: 85 ಓವರ್‌ಗಳಲ್ಲಿ 3 ವಿಕೆಟ್‌ಗೆ 376 (ಯಶಸ್ವಿ ಜೈಸ್ವಾಲ್‌ ಬ್ಯಾಟಿಂಗ್‌ 209, ಪ್ರಿಯಾಂಕ್‌ ಪಾಂಚಾಲ್‌ 40, ಅಜಿಂಕ್ಯ ರಹಾನೆ 15, ಶ್ರೇಯಸ್‌ ಅಯ್ಯರ್‌ 71, ಸರ್ಫರಾಜ್‌ ಖಾನ್‌ ಬ್ಯಾಟಿಂಗ್‌ 30, ಆರ್‌.ಸಾಯಿ ಕಿಶೋರ್‌ 100ಕ್ಕೆ 2, ಕೆ.ಗೌತಮ್‌ 139ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.