ADVERTISEMENT

Cricket: ಹಳೆ ಮಾದರಿಗೆ ಮರಳಿದ ದುಲೀಪ್ ಟ್ರೋಫಿ

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಎಲೀಟ್, ಪ್ಲೇಟ್ ಗುಂಪು

ಪಿಟಿಐ
Published 22 ಮಾರ್ಚ್ 2025, 14:31 IST
Last Updated 22 ಮಾರ್ಚ್ 2025, 14:31 IST
ದುಲೀಪ್ ಟ್ರೋಫಿ  –ಬಿಸಿಸಿಐ ಚಿತ್ರ
ದುಲೀಪ್ ಟ್ರೋಫಿ  –ಬಿಸಿಸಿಐ ಚಿತ್ರ   

ಕೋಲ್ಕತ್ತ: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಮತ್ತೆ ಅಂತರ ವಲಯ ತಂಡಗಳ ಮಾದರಿಯಲ್ಲಿ ನಡೆಯಲಿದೆ. ಇದರೊಂದಿಗೆ ತನ್ನ ಹಳೆಯ ಸಾಂಪ್ರದಾಯಿಕ ಮಾದರಿಗೆ ಮರಳಲಿದೆ. 6 ವಲಯ ತಂಡಗಳು ಆಡಲಿವೆ.

ಹೋದ ವರ್ಷ ದುಲೀಪ್ ಟ್ರೋಫಿಯನ್ನು ಚಾಲೆಂಜರ್ ಟ್ರೋಫಿ ಮಾದರಿಯಲ್ಲಿ ನಡೆಸಲಾಗಿತ್ತು. ಆ ವರ್ಷದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ  ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಆಯ್ಕೆ ಮಾಡಿ ಎ,ಬಿ, ಸಿ ಮತ್ತು ಡಿ ತಂಡಗಳನ್ನಾಗಿ ರಚಿಸಲಾಗಿತ್ತು. ಈ ವರ್ಷ ಮತ್ತೆ ಹಳೆಯ ಮಾದರಿಗೆ ಮರಳಿದ್ದು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಮತ್ತು ಈಶಾನ್ಯ ವಲಯ ತಂಡಗಳು ಆಡಲಿವೆ. 

ಶನಿವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ADVERTISEMENT

1961–62 ರಿಂದ 2014–15ರವರೆಗಿನ ಅವಧಿಯಲ್ಲಿ ದುಲೀಪ್ ಟ್ರೋಫಿ ಟೂರ್ನಿಯು ಅಂತರ ವಲಯ ಟೂರ್ನಿ ಮಾದರಿಯಲ್ಲಿ ನಡೆದಿತ್ತು. 2015ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ನೇಮಕಗೊಂಡ ರಾಹುಲ್ ದ್ರಾವಿಡ್ ಅವರು ದುಲೀಪ್ ಟ್ರೋಫಿ ಟೂರ್ನಿಯನ್ನು ಚಾಂಲೆಂಜರ್ಸ್ ಟ್ರೋಫಿ ಮಾದರಿಯಲ್ಲಿ ಆಯೋಜಿಸಲು ಸಲಹೆ ನೀಡಿದ್ದರು. ಆ ಪ್ರಕಾರ ಇಂಡಿಯಾ ಬ್ಲ್ಯೂ, ರೆಡ್, ಗ್ರೀನ್ ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಈ ಮಾದರಿಯು 2019ರವರೆಗೂ ನಡೆಯಿತು. 

ಕೋವಿಡ್ ಸಾಂಕ್ರಾಮಿಕದಿಂದಾಗಿ ದುಲೀಪ್ ಟ್ರೋಫಿ ಟೂರ್ನಿ 2020 ಮತ್ತು 2021ರಲ್ಲಿ ಆಯೋಜನೆಯಾಗಿರಲಿಲ್ಲ. 2022 ಮ್ತು 2023ರಲ್ಲಿ ವಲಯ ಮಾದರಿಯಲ್ಲಿ ನಡೆದಿತ್ತು. ಆದರೆ ಹೋದ ವರ್ಷ ಮತ್ತೆ ಚಾಲೆಂಜರ್ಸ್ ಮಾದರಿಯಲ್ಲಿ ನಡೆದಿತ್ತು. ತಂಡಗಳನ್ನು ಎನ್‌ಸಿಎ ಆಯ್ಕೆ ಮಾಡಿತ್ತು. ಆದರೆ ದೇಶದಾದ್ಯಂತ ಆಟಗಾರರ ಸಂಖ್ಯೆ ಹೆಚ್ಚಿದೆ. ಎಲ್ಲ ರಾಜ್ಯದವರಿಗೂ ಪ್ರಾತಿನಿಧ್ಯ ಸಿಗಬೇಕು ಎಂಬ ಉದ್ದೇಶದಿಂದ ವಲಯವಾರು ತಂಡಗಳ ಮಾದರಿಗೆ ಮರಳಲು ಬಿಸಿಸಿಐ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಎಲೀಟ್, ಪ್ಲೇಟ್ ವಿಭಾಗ: 

ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಎಲೀಟ್ ಮತ್ತು ಪ್ಲೇಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಒಟ್ಟು 38 ತಂಡಗಳು ಈ ಟೂರ್ನಿಗಳಲ್ಲಿ ಆಡುತ್ತವೆ.  2025–26ರ ಋತುವಿನಿಂದ ಈ ಪದ್ಧತಿ ಬರಲಿದೆ.

ಕಳೆದ ಋತುವಿನ ಟೂರ್ನಿಗಳಲ್ಲಿ ಕೊನೆಯ ಆರು ಸ್ಥಾನಗಳಲ್ಲಿರುವ ತಂಡಗಳು ಪ್ಲೇಟ್ ಗುಂಪಿನಲ್ಲಿ ಸೆಣಸಲಿವೆ. ಉಳಿದ ತಂಡಗಳು ಎಲೀಟ್ ಗುಂಪಿನಲ್ಲಿ ಆಡುತ್ತವೆ. ಈ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆಯುವ ತಂಡವು ಪ್ಲೇಟ್‌ ಗುಂಪಿಗೆ ಇಳಿಯುತ್ತದೆ. ಅದೇ ಪ್ಲೇಟ್ ಗುಂಪಿನ ಚಾಂಪಿಯನ್ ತಂಡವು ಎಲೀಟ್‌ ಗುಂಪಿಗೆ ಬಡ್ತಿ ಪಡೆಯುತ್ತದೆ. 

ಸ್ಕೋರರ್‌ಗೆ ಏಕರೂಪ ಸಂಭಾವನೆ: ಎಲ್ಲ ರಾಜ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸ್ಕೋರರ್‌ಗಳಿಗೆ ಏಕರೂಪದ ಸಂಭಾವನೆ ನೀಡಲು ಮಂಡಳಿ ನಿರ್ಧರಿಸಿದೆ. ಆ ‍ಪ‍್ರಕಾರ ದೇಶಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಸ್ಕೋರರ್‌ಗಳಿಗೆ ₹ 15 ಸಾವಿರ (ದಿನವೊಂದಕ್ಕೆ) ನೀಡಲು ತೀರ್ಮಾನಿಸಿದೆ. 

ಅಕ್ಟೋಬರ್‌ನಲ್ಲಿ ಭಾರತ–ವಿಂಡೀಸ್ ಟೆಸ್ಟ್ ಸರಣಿ

12 ವರ್ಷಗಳ ನಂತರ ವೆಸ್ಟ್ ಇಂಡೀಸ್ ತಂಡವು ಭಾರತದಲ್ಲಿ ಟೆಸ್ಟ್ ಸರಣಿ ಆಡಲಿದೆ. ಇದೇ ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ ಆಗಮಿಸಲಿದ್ದು 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡುವುದು. ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಕೂಡ ಭಾರತ ಪ್ರವಾಸ ಮಾಡಲಿದೆ. ಎಲ್ಲ ಮಾದರಿಗಳ ಸರಣಿಗಳಲ್ಲಿ ಆಡಲಿದೆ.  ವೆಸ್ಟ್ ಇಂಡೀಸ್ ತಂಡವು ಮೊಹಾಲಿ (ಅ.2ರಿಂದ) ಮತ್ತು ಕೋಲ್ಕತ್ತ (ಅ.10ರಿಂದ) ನಗರಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ. 

2013–14ರಲ್ಲಿ ವಿಂಡೀಸ್ ಬಳಗವು ಭಾರತದಲ್ಲಿ ಟೆಸ್ಟ್ ಸರಣಿ ಆಡಿತ್ತು. ಅದು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ವಿದಾಯದ ಸರಣಿ ಕೂಡ ಆಗಿತ್ತು. 2022ರಲ್ಲಿ ಕೆರಿಬಿಯನ್ ಬಳಗವು ಭಾರತದಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿತ್ತು.  ದಕ್ಷಿಣ ಆಫ್ರಿಕಾ ತಂಡವು ಎರಡು ಟೆಸ್ಟ್ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನುಆಡಲಿದೆ. 

‘ಭಾರತ–ದಕ್ಷಿಣ ಆಫ್ರಿಕಾ ತಂಡಗಳ ಮೊದಲ ಟೆಸ್ಟ್ ಪಂದ್ಯವು ದೆಹಲಿಯಲ್ಲಿ ಹಾಗೂ ಎರಡನೇಯದ್ದು ಗುವಾಹಟಿಯಲ್ಲಿ ನಡೆಯಲಿದೆ. ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆಯಲಿರುವ ಚೊಚ್ಚಲ ಟೆಸ್ಟ್ ಕೂಡ ಇದಾಗಲಿದೆ’ ಎಂದು ಶುಕ್ಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.