ADVERTISEMENT

Duleep Trophy 2023: ದಕ್ಷಿಣದ ಮುಡಿಗೆ ದುಲೀಪ್ ಕಿರೀಟ

ಗಿರೀಶದೊಡ್ಡಮನಿ
Published 16 ಜುಲೈ 2023, 10:56 IST
Last Updated 16 ಜುಲೈ 2023, 10:56 IST
ಬೆಂಗಳೂರಿನಲ್ಲಿ ಭಾನುವಾರ ಮುಕ್ತಾಯವಾದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದ ದಕ್ಷಿಣ ವಲಯ ತಂಡದ ಆಟಗಾರರು  –ಪ್ರಜಾವಾಣಿ ಚಿತ್ರ/
ಬೆಂಗಳೂರಿನಲ್ಲಿ ಭಾನುವಾರ ಮುಕ್ತಾಯವಾದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದ ದಕ್ಷಿಣ ವಲಯ ತಂಡದ ಆಟಗಾರರು  –ಪ್ರಜಾವಾಣಿ ಚಿತ್ರ/   

ಬೆಂಗಳೂರು: ಕನ್ನಡಿಗ ವಾಸುಕಿ ಕೌಶಿಕ್ ಮತ್ತು ಎಡಗೈ ಸ್ಪಿನ್ನರ್ ಸಾಯಿಕಿಶೋರ್ ಅವರ ಉತ್ತಮ ಬೌಲಿಂಗ್ ಬಲದಿಂದ ದಕ್ಷಿಣ ವಲಯ ಕ್ರಿಕೆಟ್ ತಂಡವು ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ ಫೈನಲ್‌ನಲ್ಲಿ 75 ರನ್‌ಗಳಿಂದ ಪಶ್ಚಿಮ ವಲಯ ತಂಡವನ್ನು ಸೋಲಿಸಿದ ಹನುಮವಿಹಾರಿ ನಾಯಕತ್ವದ ದಕ್ಷಿಣ ತಂಡವು ಮಿರಿಮಿರಿ ಮಿಂಚುವ ಟ್ರೋಫಿಗೆ ಮುತ್ತಿಕ್ಕಿತು. ಇದರೊಂದಿಗೆ ಹೋದ ವರ್ಷದ ಫೈನಲ್‌ನಲ್ಲಿ ಪಶ್ಚಿಮ ತಂಡದ ವಿರುದ್ಧ ಅನುಭವಿಸಿದ್ದ ಸೋಲಿಗೆ ಮುಯ್ಯಿ ಕೂಡ ತೀರಿಸಿಕೊಂಡಿತು.  ದಕ್ಷಿಣ ವಲಯ ತಂಡಕ್ಕೆ ಇದು 14ನೇ ಬಾರಿ ದುಲೀಪ್ ಟ್ರೋಫಿ ಜಯಿಸಿದ ಸಾಧನೆ ಮಾಡಿತು. 

ಪಂದ್ಯದ ನಾಲ್ಕನೇ ದಿನವಾದ ಶನಿವಾರ ಪಶ್ಚಿಮ ವಲಯ ತಂಡವು 298 ತಂಡಗಳ ಗುರಿ ಬೆನ್ಟಟ್ಟಿತ್ತು. ದಿನದಾಟದ ಕೊನೆಗೆ 5 ವಿಕೆಟ್‌ಗಳಿಗೆ 182 ರನ್ ಗಳಿಸಿತ್ತು. ಕ್ರೀಸ್‌ನಲ್ಲಿ 92 ರನ್ ಗಳಿಸಿ ಉಳಿದಿದ್ದ  ಪ್ರಿಯಾಂಕ್ ಪಾಂಚಾಲ್ ಅವರು ಕೊನೆಯ ದಿನ ದಕ್ಷಿಣದ  ಜಯಕ್ಕೆ ಅಡ್ಡಿಯಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ವಿದ್ವತ್ ಕಾವೇರಪ್ಪ ಈ ಆತಂಕವನ್ನೂ ದೂರ ಮಾಡಿದರು. ಕೊನೆ ದಿನದಾಟ ಆರಂಭವಾಗಿ 15 ನಿಮಿಷ ಕಳೆಯುವ ಮುನ್ನವೇ ವಿದ್ವತ್ ಎಸೆತದಲ್ಲಿ ವಿಕೆಟ್‌ಕೀಪರ್ ರಿಕಿ ಭುಯ್‌ಗೆ ಕ್ಯಾಚ್ ಕೊಟ್ಟ ಪಾಂಚಾಲ್ ನಿರ್ಗಮಿಸಿದರು. ಐದು ರನ್‌ಗಳ ಅಂತರದಿಂದ ಅವರ ಶತಕವೂ ತಪ್ಪಿತು. ತಂಡದ ಜಯದ ಅವಕಾಶವೂ ಕೈಜಾರಿತು.

ADVERTISEMENT

ಧರ್ಮೇಂದ್ರಸಿಂಹ ಜಡೇಜ (15; 32ಎ, 4X2) ಅವರ ಹೋರಾಟಕ್ಕೂ ಫಲ ಸಿಗಲಿಲ್ಲ. ಎಡಗೈ ಸ್ಪಿನ್ನರ್ ಸಾಯಿಕಿಶೋರ್  ಬೌಲಿಂಗ್‌ನಲ್ಲಿ ಜಡೇಜ, ಚಿಂತನ್ ಗಜ ಔಟಾದರೆ, ಶಮ್ಸ್ ಮುಲಾನಿ ವಿಕೆಟ್‌ ಪಡೆದ ಕೌಶಿಕ್ ಮಿಂಚಿದರು. ಶನಿವಾರ ದಿನದಾಟದಲ್ಲಿ ಕೌಶಿಕ್ ಮೂರು ವಿಕೆಟ್ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ದಕ್ಷಿಣ ವಲಯ: 78.4 ಓವರ್‌ಗಳಲ್ಲಿ 213. ಪಶ್ಚಿಮ ವಲಯ: 51 ಓವರ್‌ಗಳಲ್ಲಿ 146. ಎರಡನೇ ಇನಿಂಘ್ಸ್: ದಕ್ಷಿಣ ವಲಯ: 81.1 ಓವರ್‌ಗಳಲ್ಲಿ 230. ಪಶ್ಚಿಮ ವಲಯ: 84.2 ಓವರ್‌ಗಳಲ್ಲಿ 222 (ಪ್ರಿಯಾಂಕ್ ಪಾಂಚಾಲ್ 95, ಸರ್ಫರಾಜ್ ಖಾನ್ 48, ಧರ್ಮೇಂದ್ರಸಿಂಹ ಜಡೇಜ 15, ವಿ.ಕೌಶಿಕ್ 36ಕ್ಕೆ4, ರವಿಶ್ರೀನಿವಾಸನ್ ಸಾಯಿಕಿಶೋರ್ 57ಕ್ಕೆ4, ವಿದ್ವತ್ ಕಾವೇರಪ್ಪ 51ಕ್ಕೆ1, ವೈಶಾಖ ವಿಜಯಕುಮಾರ್ 39ಕ್ಕೆ1)

ಫಲಿತಾಂಶ: ದಕ್ಷಿಣ ವಲಯಕ್ಕೆ 75 ರನ್‌ಗಳ ಜಯ.

ಪಂದ್ಯಶ್ರೇಷ್ಠ: ವಿದ್ವತ್ ಕಾವೇರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.