ADVERTISEMENT

Duleep Trophy: ಪಶ್ಚಿಮ ವಲಯ ಬೌಲರ್‌ಗಳ ಪಾರಮ್ಯ

ದುಲೀಪ್ ಟ್ರೋಫಿ ಫೈನಲ್: ಹನುಮವಿಹಾರಿ ಅರ್ಧಶತಕ, ಮಳೆಯ ಆಟ

ಗಿರೀಶದೊಡ್ಡಮನಿ
Published 12 ಜುಲೈ 2023, 18:18 IST
Last Updated 12 ಜುಲೈ 2023, 18:18 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ ಟೂರ್ನಿ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯದ ವಿರುದ್ದ ಅರ್ಧಶತಕ ಗಳಿಸಿದ ದಕ್ಷಿಣ ವಲಯದ ಹನುಮವಿಹಾರಿ 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ ಟೂರ್ನಿ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯದ ವಿರುದ್ದ ಅರ್ಧಶತಕ ಗಳಿಸಿದ ದಕ್ಷಿಣ ವಲಯದ ಹನುಮವಿಹಾರಿ     –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದ ಮೊದಲ ದಿನ ದಕ್ಷಿಣ ವಲಯ ತಂಡಕ್ಕೆ   ಹನುವಿಹಾರಿ ಮತ್ತು ತಿಲಕ್ ವರ್ಮಾ ಅವರ ಜೊತೆಯಾಟವೊಂದೇ ನೆನಪಿನಲ್ಲಿ ಉಳಿಯುವಂತದ್ದು. ಇದನ್ನು ಬಿಟ್ಟರೆ ಇಡೀ ದಿನ ಪಶ್ಚಿಮ ವಲಯದ ಬೌಲರ್‌ಗಳದ್ದೇ ಪಾರುಪತ್ಯ ನಡೆಯಿತು.

ಬೆಳಿಗ್ಗೆ ಅಹ್ಲಾದಕರ ವಾತಾವರಣದಲ್ಲಿ ಟಾಸ್ ಗೆದ್ದ ಹಾಲಿ ಚಾಂಪಿಯನ್ ಪಶ್ಚಿಮ ವಲಯ ತಂಡವು  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಮ್ಮ ನಾಯಕ ಪ್ರಿಯಾಂಕ್ ಪಾಂಚಾಲ್ ಅವರ ನಿರ್ಣಯವನ್ನು ಬೌಲರ್‌ಗಳು ಸಮರ್ಥಿಸಿಕೊಂಡರು.

ಮಧ್ಯಾಹ್ನ ಚಹಾ ವಿರಾಮದ ನಂತರ ಮಳೆ ಸುರಿದು ದಿನದಾಟ ಮುಗಿಯುವ ಸಮಯಕ್ಕೆ ದಕ್ಷಿಣ ವಲಯದ  ಪ್ರಮುಖ ಬ್ಯಾಟರ್‌ಗಳಿಗೆ ಪೆವಿಲಿಯನ್‌ ದಾರಿ ತೋರುವಲ್ಲಿ ವೇಗಿ ಅರ್ಜನ್ ನಾಗಸವಾಲಾ, ಚಿಂತನ್ ಗಜ ಮತ್ತು ಸ್ಪಿನ್ನರ್ ಶಮ್ಸ್ ಮುಲಾನಿ ಯಶಸ್ವಿಯಾದರು. ಮೂವರು ತಲಾ ಎರಡು ವಿಕೆಟ್ ಗಳಿಸಿದರು. ಇದರಿಂದಾಗಿ ದಿನದಾಟ ಮುಗಿದಾಗ ದಕ್ಷಿಣ ವಲಯವು 65 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 182 ರನ್‌ ಗಳಿಸಿತು. ವಾಷಿಂಗ್ಟನ್ ಸುಂದರ್ (ಬ್ಯಾಟಿಂಗ್ 9) ಮತ್ತು ವೈಶಾಖ ವಿಜಯಕುಮಾರ್ (ಬ್ಯಾಟಿಂಗ್ 5) ಕ್ರೀಸ್‌ನಲ್ಲಿದ್ದಾರೆ.

ADVERTISEMENT

ಮಧ್ಯಮವೇಗಿ ಚಿಂತನ್ ಗಜ ಹಾಕಿದ ಏಳನೇ ಓವರ್‌ನಲ್ಲಿ ಆರ್. ಸಮರ್ಥ್ ಅವರ ಕ್ಯಾಚ್ ಪಡೆ ವಿಕೆಟ್‌ಕೀಪರ್ ಹರ್ವಿಕ್ ದೇಸಾಯಿ ಸಂಭ್ರಮಿಸಿದರು. ಮಯಂಕ್ ಅಗರವಾಲ್ ಜೊತೆಗೂಡಿದ ತಿಲಕ್ ವರ್ಮಾ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 27 ರನ್‌ ಸೇರಿಸಿದರು. ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಮಧ್ಯಮವೇಗಿ ಆತಿಥ್ ಶೇಠ್ ಹಾಕಿದ ಎಸೆತವನ್ನು ಆಡುವಲ್ಲಿ ಎಡವಿದ ಮಯಂಕ್ ಅಗರವಾಲ್ ಫೀಲ್ಡರ್‌ ಸರ್ಫರಾಜ್ ಖಾನ್‌ಗೆ ಕ್ಯಾಚಿತ್ತರು.

ಸೆಮಿಫೈನಲ್‌ನಲ್ಲಿ ಎರಡು ಅರ್ಧಶತಕ ಗಳಿಸಿದ್ದ ಮಯಂಕ್ ವಿಜಯದ ರೂವಾರಿಯಾಗಿದ್ದರು. ಇಲ್ಲಿ ಅವರು 47 ಎಸೆತಗಳಲ್ಲಿ 28 ರನ್ ಗಳಿಸಿದರು.

ತಿಲಕ್ ವರ್ಮಾ ಜೊತೆಗೂಡಿದ ಹನುಮವಿಹಾರಿ ಜವಾಬ್ದಾರಿಯುತ ಆಟವಾಡಿದರು. ಮಧ್ಯಮವೇಗಿಗಳ ಶಾಟ್‌ ಪಿಚ್ ಮತ್ತು ಗುಡ್‌ಲೆಂಗ್ತ್‌ ಎಸೆತಗಳಿಗೆ ಎಚ್ಚರಿಕೆಯಿಂದ ಉತ್ತರ ಕೊಟ್ಟರು. ಇದರಿಂದಾಗಿ ಭೋಜನ ವಿರಾಮಕ್ಕೆ ತಂಡದ ಮೊತ್ತವು 100ರ ಗಡಿ ಮುಟ್ಟಿತು.

ನಂತರದ ಆಟದಲ್ಲಿ ತಿಲಕ್‌ವರ್ಮಾ ಅರ್ಧಶತಕ ಪೂರೈಸಲು ಅರ್ಜನ್ ನಾಗಸವಾಲಾ ಬಿಡಲಿಲ್ಲ. ಹರ್ವಿಕ್ ದೇಸಾಯಿ ಅವರ ಚುರುಕಾದ ವಿಕೆಟ್‌ಕೀಪಿಂಗ್‌ ಫಲ ನೀಡಿತು. ತಿಲಕ್ ಬ್ಯಾಟ್ ಸವರಿದ ಚೆಂಡು ಅರ್ಜನ್ ಕೈಗವಸು ಸೇರಿತ್ತು. ತಿಲಕ್ ಯುಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನೆ ವ್ಯವಸ್ಥೆ) ಮೊರೆ ಹೋದರೂ ಫಲ ನೀಡಲಿಲ್ಲ. ಜೊತೆಯಾಟ ಮುರಿಯಿತು.

 ಪಶ್ಚಿಮ ವಲಯದ ಚಿಂತನ್‌ ಗಜ ಅವರ ಬೌಲಿಂಗ್ –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.

ಇದರ ನಂತರ ಹನುಮವಿಹಾರಿಗೆ ಇನ್ನೊಂದು ಬದಿಯಿಂದ ಉತ್ತಮ ಬೆಂಬಲ ಲಭ್ಯವಾಗಲಿಲ್ಲ. ಆದ್ದರಿಂದ ತಮ್ಮ ರನ್‌ ಗಳಿಕೆಯ ವೇಗ ಹೆಚ್ಚಿಸುವುದು ಹನುಮವಿಹಾರಿಗೆ ಅನಿವಾರ್ಯವಾಯಿತು. 103 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರವೂ ಬೌಂಡರಿ ಗಳಿಸಿ ಸ್ಕೋರ್ ಹೆಚ್ಚಿಸಲು ಪ್ರಯತ್ನಿಸಿದರು.

ಮಳೆಯ ಆಟ
ವಿರಾಮದ ನಂತರ ನಾಲ್ಕು ಎಸೆತಗಳಾಗುವಷ್ಟರಲ್ಲಿ ಮಳೆ ಸುರಿಯಿತು. ಆಟ ಸ್ಥಗಿತವಾಯಿತು. ಸುಮಾರು ಒಂದು ಗಂಟೆಯ ನಂತರ ಆಟ ಆರಂಭವಾಯಿತು.  ಆದರೆ ಐದು ನಿಮಿಷವಾಗುಷ್ಟರಲ್ಲಿ ಮೊಡಗಳು ದಟ್ಟೈಸಿ ಬೆಳಕು ಮಂದವಾಯಿತು. ಇದರಿಂದಾಗಿ ಆಟ ಮತ್ತೆ ನಿಂತಿತು. ಮಳೆಯೂ ಸುರಿದುಹೋಯಿತು. ನಂತರದ ಎಳೆಬಿಸಿಲಿನಲ್ಲಿ ಸಂಜೆ 5.05ಕ್ಕೆ ಆಟ ಆರಂಭವಾಯಿತು. ಐದು ಓವರ್‌ಗಳಷ್ಟು ಆಟ ನಡೆಯಿತು. ಇದರಲ್ಲಿಯೇ ಸಾಯಿ ಕಿಶೋರ್ ವಿಕೆಟ್ ಪತನವಾಯಿತು.  ಮೈದಾನದ ಎಡಭಾಗದಲ್ಲಿ ತುಂತುರು ಮಳೆ ಮತ್ತು ಬಲಭಾಗದಲ್ಲಿ ಎಳೆಬಿಸಿಲಿನ ವಿಸ್ಮಯವೂ ಗಮನ ಸೆಳೆಯಿತು!

ಇನ್ನೊಂದು ಕಡೆ ರಿಕಿ ಭುಯಿ ಮತ್ತು ಸಚಿನ್ ಬೇಬಿ ಅವರ ವಿಕೆಟ್  ಉರುಳಿದವು. ಚಹಾ ವಿರಾಮಕ್ಕೂ ಸ್ವಲ್ಪ ಮುನ್ನ ವಿಹಾರಿ ವಿಕೆಟ್ ಉರುಳಿಸುವಲ್ಲಿ ಮುಲಾನಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.