ADVERTISEMENT

ಕೊರೊನಾ ಪರಿಣಾಮ: ಇಸಿಬಿಗೆ ₹ 2,848 ಕೋಟಿ ನಷ್ಟ ಸಾಧ್ಯತೆ

ಪಿಟಿಐ
Published 2 ಏಪ್ರಿಲ್ 2020, 19:30 IST
Last Updated 2 ಏಪ್ರಿಲ್ 2020, 19:30 IST
ecb
ecb   

ಲಂಡನ್‌: ‘ಕೊರೊನಾ ಭೀತಿಯಿಂದಾಗಿ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇದು ಹೀಗೆ ಮುಂದುವರಿದರೆ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ (ಇಸಿಬಿ) ಅಂದಾಜು ₹2,848 ಕೋಟಿ ನಷ್ಟವಾಗಲಿದೆ’ ಎಂದು ಇಸಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಟಾಮ್‌ ಹ್ಯಾರಿಸನ್‌ ಆತಂಕ ವ್ಯಕ್ತ‍ಪಡಿಸಿದ್ದಾರೆ.

ಇದನ್ನು ಸರಿದೂಗಿಸುವ ಸಲುವಾಗಿ ಸಿಬ್ಬಂದಿಯ ವೇತನ ಕಡಿತಗೊಳಿಸುವುದು ಅನಿವಾರ್ಯ ಎಂದೂ ಅವರು ಗುರುವಾರ ಹೇಳಿದ್ದಾರೆ.

ಇಸಿಬಿ ಮುಂದಿಟ್ಟಿದ್ದ ಶೇಕಡ 20 ರಷ್ಟು ವೇತನ ಕಡಿತದ ಬೇಡಿಕೆಗೆ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಬೆಳವಣಿಗೆಯ ಬೆನ್ನಲ್ಲೇ ಹ್ಯಾರಿಸನ್‌ ಅವರು ವೃತ್ತಿಪರ ಕ್ರಿಕೆಟಿಗರ ಸಂಸ್ಥೆಯ ಮುಖ್ಯಸ್ಥ ಟೋನಿ ಐರಿಸ್‌ಗೆ ಪತ್ರ ಬರೆದಿದ್ದಾರೆ.

‘ಕ್ರೀಡಾ ಲೋಕವು ಇದೇ ಮೊದಲ ಬಾರಿಗೆ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿದೆ. ಕೊರೊನಾ ಮಹಾಮಾರಿಯಿಂದಾಗಿ ಮೇ 28ರವರೆಗಿನ ಎಲ್ಲಾ ಟೂರ್ನಿಗಳನ್ನು ರದ್ದು ಮಾಡಿದ್ದೇವೆ. ಇದರಿಂದ ಇಸಿಬಿ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

‘ಇಂತಹ ಸಂದಿಗ್ಧ ಸಮಯದಲ್ಲಿ ಆಟಗಾರರು, ಅಭಿಮಾನಿಗಳು ಹಾಗೂ ನೆರವು ಸಿಬ್ಬಂದಿಯ ಸುರಕ್ಷತೆಗೆ ನಾವು ಮೊದಲ ಆದ್ಯತೆ ನೀಡುತ್ತೇವೆ. ಇದರ ಜೊತೆಗೆ ಮಂಡಳಿಗೆ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಯಾವೆಲ್ಲಾ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಬಹುದು ಎಂಬುದರ ಬಗ್ಗೆಯೂ ಯೋಚಿಸಬೇಕಿದೆ. ಈಗ ಉದ್ಭವಿಸಿರುವ ಬಿಕ್ಕಟ್ಟು ಪರಿಹರಿಸಲು ನಾವೆಲ್ಲಾ ಕೈಜೋಡಿಸಬೇಕಿದೆ’ ಎಂದಿದ್ದಾರೆ.

‘ಪರಿಸ್ಥಿತಿ ಸುಧಾರಿಸುವವರೆಗೂ ಮಾಸಿಕವಾಗಿ ಶೇಕಡ 20 ರಷ್ಟು ವೇತನ ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಇಸಿಬಿಯ ಈ ನಿರ್ಧಾರಕ್ಕೆ ನನ್ನ ಒಪ್ಪಿಗೆಯೂ ಇದೆ.ಇದಕ್ಕೆ ಆಟಗಾರರು ಹಾಗೂ ಇತರ ಎಲ್ಲಾ ಸಿಬ್ಬಂದಿ ಸಹಕರಿಸಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.

ಕೊರೊನಾ ವಿರುದ್ಧ ಹೋರಾಟದ ಪರಿಹಾರ ನಿಧಿಗೆ ಇಸಿಬಿ ಇತ್ತೀಚೆಗೆ ₹ 570 ಕೋಟಿ ಪ್ಯಾಕೇಜ್ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.