ADVERTISEMENT

ಇಂಗ್ಲೆಂಡ್‌ ಆಟಗಾರರಿಗೆ ಜ್ವರ: ಕೊನೆಕ್ಷಣದವರೆಗೂ ಖಾತ್ರಿಯಾಗಿಲ್ಲ ಆಡುವ ಬಳಗ

ರಾಯಿಟರ್ಸ್
Published 26 ಡಿಸೆಂಬರ್ 2019, 6:55 IST
Last Updated 26 ಡಿಸೆಂಬರ್ 2019, 6:55 IST
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್‌
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್‌    

ಪ್ರಿಟೋರಿಯಾ: ತಂದೆಯ ಆರೋಗ್ಯಸ್ಥಿತಿ ಸುಧಾರಿಸಿದ ನಂತರ ಬೆನ್‌ ಸ್ಟೋಕ್ಸ್‌ ಬುಧವಾರ ಇಂಗ್ಲೆಂಡ್‌ ತಂಡದ ತಾಲೀಮಿನಲ್ಲಿ ಪಾಲ್ಗೊಂಡರು. ಆದರೆ ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗುವ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ತಂಡದ ಮೂವರು ಆಟಗಾರರು ಜ್ವರದ ಕಾರಣ ಆಡುವುದು ಅನುಮಾನವಾಗಿದೆ.

ಜಾಕ್‌ ಲೀಚ್‌, ಒಲಿ ಪೋಪ್‌ ಮತ್ತು ಕ್ರಿಸ್‌ ವೋಕ್ಸ್‌ ‘ಫ್ಲೂ’ನಿಂದ ಬಳಲುತ್ತಿದ್ದು, ಕ್ರಿಸ್ಮಸ್‌ ದಿನ ಬೆಳಿಗ್ಗೆ ನೆಟ್‌ ಪ್ರಾಕ್ಟೀಸ್‌ನಲ್ಲಿ ಪಾಲ್ಗೊಳ್ಳಲಿಲ್ಲ. 11 ದಿನಗಳ ಹಿಂದೆ ದಕ್ಷಿಣ ಆಫ್ರಿಕಕ್ಕೆ ಬಂದಿಳಿದ ನಂತರ ಇಂಗ್ಲೆಂಡ್‌ ತಂಡದ ಕೆಲ ಆಟಗಾರರು ಜ್ವರಪೀಡಿತರಾಗಿದ್ದಾರೆ.

ಸ್ಟೋಕ್ಸ್‌, ಮಂಗಳವಾರ ತೀವ್ರ ಅಸ್ವಸ್ಥರಾಗಿದ್ದ ತಂದೆಯ ಜೊತೆ ಕಳೆದಿದ್ದರು. ತುರ್ತು ನಿಗಾದಲ್ಲಿದ್ದರೂ ಅವರ ತಂದೆ ಜೆಡ್‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಆದರೆ ಜ್ವರಪೀಡಿತರಾದ ಮೂವರನ್ನು ಕೈಬಿಡುವುದು ಅಂತಿಮಗೊಂಡಿಲ್ಲ ಎಂದು ಇಸಿಬಿ ವಕ್ತಾರರೊಬ್ಬರು ತಿಳಿಸಿದ್ದಾರೆ. ಒಟ್ಟಾರೆ, ತಂಡದ ಅಂತಿಮ ಆಯ್ಕೆ ವಿಳಂಬವಾಗುವುದಂತೂ ಖಚಿತವಾಗಿದೆ.

ದಕ್ಷಿಣ ಆಫ್ರಿಕಾಕ್ಕೆ ಬಂದಿಳಿದ ನಂತರ ವೇಗಿ ಜೋಫ್ರಾ ಆರ್ಚರ್‌ ಮತ್ತು ಸ್ಟುವರ್ಟ್‌ ಬ್ರಾಡ್‌ ಅವರು ಜ್ವರದ ಕಾರಣ ಅಭ್ಯಾಸ ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಈಗ ಇಬ್ಬರೂ ಫಿಟ್‌ ಆಗಿದ್ದಾರೆ. ‘ಇಂಥ ಸನ್ನಿವೇಶ ಹತಾಶೆ ಮೂಡಿಸುತ್ತದೆ. ಆದರೆ ಇದನ್ನು ನಿರ್ವಹಿಸಲೇಬೇಕಾಗಿದೆ. ಕಾದು ನೋಡೋಣ’ ಎಂದು ನಾಯಕ ಜೋ ರೂಟ್‌ ಹೇಳಿದರು.

ಬ್ಯಾಟ್ಸ್‌ಮನ್‌ ವಾನ್‌ ಡೆರ್‌ ಡಸೆನ್‌ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಪದಾರ್ಪಣೆ ಮಾಡುವುದು ಖಚಿತವಾಗಿದೆ. 30 ವರ್ಷ ವಯಸ್ಸಿನ ಡಸೆನ್‌ ಐದನೇ ಕ್ರಮಾಂಕದಲ್ಲಿ ಆಡುವರು ಎಂದು ನಾಯಕ ಫಾಫ್‌ ಡುಪ್ಲೆಸಿ ಬುಧವಾರ ತಿಳಿಸಿದರು. 18 ಏಕದಿನ, 9 ಟಿ–20 ಪಂದ್ಯಗಳನ್ನಾಡಿರುವ ಡಸೆನ್‌, ಗಾಯಾಳಾಗಿರುವ ತೆಂಬಾ ಬವುಮಾ ಸ್ಥಾನ ತುಂಬಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.